ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಿಹಾಳ; ಮರಳು ಅಕ್ರಮ ದಂಧೆ

ದೂರು ನೀಡಿದರೂ ಕ್ರಮ ಕೈಗೊಳ್ಳದ ಅಧಿಕಾರಿಗಳು; ರುದ್ರಗೌಡ ಜಿ. ಪಾಟೀಲ
Last Updated 23 ನವೆಂಬರ್ 2022, 16:21 IST
ಅಕ್ಷರ ಗಾತ್ರ

ರಾಣೆಬೆನ್ನೂರು: ‘ತಾಲ್ಲೂಕಿನ ಕೋಟಿಹಾಳ ಗ್ರಾಮದ ತುಂಗಭದ್ರಾ ನದಿ ತೀರದಲ್ಲಿ ಪರವಾನಗಿ ಇಲ್ಲದೆ ಮರಳನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. ಈ ಬಗ್ಗೆ ಬೆಂಗಳೂರಿನ ಖನಿಜ ಭವನಕ್ಕೆ ಪತ್ರ ಬರೆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ತಾಲ್ಲೂಕಿನ ನಿಟಪಳ್ಳಿ ಗ್ರಾಮದ ರುದ್ರಗೌಡ ಜಿ. ಪಾಟೀಲ ಆರೋಪಿಸಿದ್ದಾರೆ.

‘ಪ್ರಜಾವಾಣಿ’ಯೊಂದಿಗೆ ಮಾತನಾಡಿ ರುದ್ರಗೌಡ ಅವರು, ಮರಳು ಅಕ್ರಮ ದಂಧೆಗೆ ಸಂಬಂಧಿಸಿದಂತೆ ಅಕ್ರಮವಾಗಿ ಸಾಗಣೆ ಮಾಡುವ ವಾಹನಗಳ ಜಿಪಿಎಸ್ ಆಧಾರಿತ ಚಿತ್ರ ಮತ್ತು ಸಂಬಂಧಿಸಿದ ದಾಖಲೆಗಳ ಸಿ.ಡಿಯನ್ನು ಕಳಿಸಿ ಐದು ತಿಂಗಳಾದರೂ ನಿರ್ಲಕ್ಷ್ಯ ವಹಿಸಲಾಗಿದೆ’ ಎಂದು ದೂರಿದರು.

‘ಅಧಿಕಾರಿಗಳು ದಾಳಿ ನಡೆಸಿದಾಗ ಎರಡು ದಿನ ಬಿಡುತ್ತಾರೆ. ಮತ್ತೆ ದಂಧೆ ಎಗ್ಗಿಲ್ಲದೆ ನಡೆಯುತ್ತದೆ. ಈ ಬಗ್ಗೆ ಹಾವೇರಿ ಜಿಲ್ಲಾ ಮರಳು ಸಮಿತಿಯ ಅಧ್ಯಕ್ಷರು ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಉಪವಿಭಾಗಾಧಿಕಾರಿ, ತಹಶೀಲ್ದಾರ್‌ ಮತ್ತು ಸಿಪಿಐ, ಪಿಎಸ್‌ಐಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಆರೋಪಿಸಿದರು.

‘ಕಳೆದ ವರ್ಷದಿಂದ ತುಂಗಭದ್ರಾ ನದಿ ತೀರದ ಪ್ರದೇಶದಲ್ಲಿ ಟ್ರ್ಯಾಕ್ಟರ್‌, ಜೆಸಿಬಿ, ಟಿಪ್ಪರ್‌ಗಳನ್ನು ಬಳಸಿಕೊಂಡು ಮರಳು ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದನ್ನು ನೋಡಿದರೆ ದಂಧೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಶಾಮೀಲಾಗಿರುವ ಅನುಮಾನ ವ್ಯಕ್ತವಾಗುತ್ತದೆ’ ಎಂದು ಶಂಕೆ ವ್ಯಕ್ತಪಡಿಸಿದರು.

‘ಮರಳು ಅಕ್ರಮ ದಂಧೆಯಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು. ನೈಸರ್ಗಿಕ ಸಂಪತ್ತು ಉಳಿಸಬೇಕು ಎಂಬುದು ನನ್ನ ಉದ್ದೇಶ’ ಎಂದು ಹೇಳಿದರು.

ಮರಳು ಅಕ್ರಮ ಸಾಗಣೆ; ಪರಿಶೀಲನೆ

‘ತಾಲ್ಲೂಕಿನ ಕೋಟಿಹಾಳ ಗ್ರಾಮದ ತುಂಗಭದ್ರಾ ನದಿ ತೀರದ ಬಳಿ ಮರಳುಅಕ್ರಮ ಸಾಗಾಣಿಕೆ ನಡೆಯುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನದಿ ತೀರಕ್ಕೆ ಹೋಗಿ ಪರಿಶೀಲನೆ ನಡೆಸಲಾಗಿದೆ. ಅದು ಮರಳಲ್ಲ. ನಾಲ್ಕೈದು ಕಡೆ ರೆಬೆಲ್ಸ್‌ ಕಲ್ಲಿನ ರಾಶಿ ಬಿದ್ದಿವೆ. ಈ ಬಗ್ಗೆ ಮುಂದಿನ ಕ್ರಮಕ್ಕೆ ಗಣಿ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ತಹಶೀಲ್ದಾರ್‌ ಶಂಕರ್‌ ಜಿ.ಎಸ್‌. ತಿಳಿಸಿದರು.

150 ಟನ್‌ ಅಕ್ರಮ ಮರಳು ವಶಕ್ಕೆ

ಕಳೆದ 15 ದಿನಗಳಿಂದ ದಾಳಿ ನಡೆಸಿ 150 ಟನ್‌ ಅಕ್ರಮ ಮರಳು ಪತ್ತೆ ಮಾಡಿ ವಶಪಡಿಸಿಕೊಂಡಿದ್ದೇವೆ. ಇನ್ನು ರೆಬೆಲ್ಸ್‌ ಮಿಕ್ಸ್‌ ಮರಳಿನ ಗುಡ್ಡಿಗಳಿವೆ. ಇದನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ರೆಬೆಲ್ಸ್‌ ಮರಳನ್ನು ನದಿಗೆ ತಳ್ಳಿಸುತ್ತೇವೆ. ಕಂದಾಯ, ಪೊಲೀಸ್‌ ಹಾಗೂ ಗಣಿ ಇಲಾಖೆಯಿಂದ ಜಂಟಿಯಾಗಿ ನಿರಂತರ ದಾಳಿ ನಡೆಸುತ್ತಿದ್ದೇವೆ.
– ನಾಗರಾಜ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT