7
ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಿಂದ ರಚನೆ: ತ್ವರಿತ ಮಾಹಿತಿ ವಿನಿಮಯಕ್ಕೆ ಸಹಕಾರಿ

ಬೆಳೆ ರೋಗ ನಿಯಂತ್ರಣಕ್ಕೆ ‘ವಾಟ್ಸ್‌ ಆ್ಯಫ್ ಗ್ರೂಪ್’!

Published:
Updated:
ಕೆವಿಕೆ ಹನುಮನಮಟ್ಟಿಯ ವಾಟ್ಸ್ ಆ್ಯಪ್ ಗ್ರೂಪ್

ಹಾವೇರಿ:
*ಸರ್, ನಮ್ಮ ಗಿಡ ಒಣಗುತ್ತಿದೆ (ಒಣಗುತ್ತಿರುವ ಅಡಿಕೆ ಗಿಡದ ಚಿತ್ರ ಸಹಿತ)...
=ಎಲ್ಲ ಗಿಡಗಳಲ್ಲೂ ಈ ಸಮಸ್ಯೆ ಇದೆಯಾ? ಇಲ್ಲವೇ, ಒಂದೇ ಗಿಡದಲ್ಲಿಯಾ?

* 700 ಗಿಡಗಳ ತೋಟದ ಪೈಕಿ 50ಕ್ಕೂ ಹೆಚ್ಚು ಹೀಗಾಗಿದೆ...
=ಅದಕ್ಕೆ ಏನೇನು ಹಾಕುತ್ತಿದ್ದೀರಿ?

* ಪೊಟಾಶಿಯಂ... ಇತ್ಯಾದಿ
= ನಾಟಿ ಮಾಡಿ ಎಷ್ಟು ವರ್ಷಗಳಾಗಿವೆ...

*ಸುಮಾರು ಮೂರು ವರ್ಷ
=ಹಾಗಿದ್ದರೆ, ಪೊಟಾಶಿಯಂ ಪ್ರಮಾಣ ಹೆಚ್ಚು ಮಾಡಿ. ಅಲ್ಲದೇ....

–ಇದು, ಪೋಷಕಾಂಶದ ಕೊರತೆ, ನೀರಿನ ಅಭಾವ, ಕೀಟ ಬಾಧೆ ಮತ್ತಿತರ ಸಮಸ್ಯೆಗಳಿಂದ ಬೆಳೆ ಹಾನಿಗೆ ಒಳಗಾಗುತ್ತಿರುವ ರೈತರು ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳಲು ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರ (ಎಚ್‌ಕೆವಿಕೆ)ವು ರೂಪಿಸಿದ ‘ವಾಟ್ಸ್ ಆ್ಯಪ್‌ ಗ್ರೂಪ್‌’ನಲ್ಲಿನ ಮಾಹಿತಿ ವಿನಿಮಯದ ತುಣುಕುಗಳು.

ಕೇವಲ ಅಡಿಕೆ ಗಿಡಗಳು ಮಾತ್ರವಲ್ಲ, ಮೆಕ್ಕೆಜೋಳ, ಭತ್ತ, ಸೋಯಾಬಿನ್ ಸೇರಿದಂತೆ ಯಾವುದೇ ಬೆಳೆಗಳು, ಮಣ್ಣಿನ ಸ್ಥಿತಿಗತಿಗಳ ಬಗ್ಗೆ ಪ್ರತಿನಿತ್ಯ ಸಂವಹನ ನಡೆಯುತ್ತಿದೆ. ರೈತರ ಬೆಳೆಗಳ ಸಮಸ್ಯೆಗೆ ಶೀಘ್ರವಾಗಿ ಸ್ಪಂದಿಸಲು ಕೃಷಿ ತಜ್ಞರು, ಪ್ರಗತಿಪರ ರೈತರು, ಪತ್ರಕರ್ತರು ಮತ್ತಿತರರನ್ನು ಒಳಗೊಂಡ ‘ಕೆ.ವಿ.ಕೆ. ಹನುಮನಮಟ್ಟಿ’ ಹೆಸರಿನ ಎಂಬ ಗ್ರೂಪ್ ರಚಿಸಲಾಗಿದೆ.

ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಅಶೋಕ ಪಿ. ಗ್ರೂಪ್‌ ರಚಿಸಿದ್ದು, ಕೀಟತಜ್ಞರು, ಬೇಸಾಯಶಾಸ್ತ್ರಜ್ಞ, ಮಣ್ಣುವಿಜ್ಞಾನಿಗಳು, ತೋಟಗಾರಿಕೆ ಪರಿಣಿತರು, ಪ್ರಗತಿಪರ ಕೃಷಿಕರು, ಕೃಷಿ ತಜ್ಞರು, ನಿವೃತ್ತ ಅಧಿಕಾರಿಗಳು, ಪಶು ವಿಜ್ಞಾನಿಗಳು ಹಾಗೂ ಕೃಷಿ ಸಂಬಂಧಿ ಉತ್ಪನ್ನಗಳ ಕಂಪನಿ ಸಲಹೆಗಾರರು, ಪತ್ರಕರ್ತರು ಸೇರಿದಂತೆ ಹಲವರನ್ನು ಸೇರ್ಪಡೆಗೊಳಿಸಲಾಗಿದೆ.

ನಿವೃತ್ತ ಜಂಟಿ ಕೃಷಿ ನಿರ್ದೇಶಕ ಆರ್.ಜಿ. ಗೊಲ್ಲರ, ಪ್ರಗತಿಪರ ರೈತ ಚನ್ನಬಸಪ್ಪ ಕೊಂಬಳಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ, ಸಹಾಯಕ ಕೃಷಿ ನಿರ್ದೇಶಕರುಗಳು, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್. ಭೋಗಿ ಮತ್ತಿತರರು ಇದ್ದಾರೆ.

ಈ ಭಾಗದದಲ್ಲಿ ಯಾವುದೇ ಬೆಳೆಗಳಿಗೆ ರೋಗ, ಕೀಟಬಾಧೆ ಮತ್ತಿತರ ಸಮಸ್ಯೆಗಳು ಬಂದ ತಕ್ಷಣವೇ ಗ್ರೂಪ್ ಸದಸ್ಯರು ಬೆಳೆಯ ಫೋಟೊ ಸಹಿತ ಮಾಹಿತಿ ಹಾಕುತ್ತಿದ್ದಾರೆ. ರೋಗ ಅಥವಾ ನ್ಯೂನತೆಯ ಗುಣಲಕ್ಷಣಗಳನ್ನು ಆಧರಿಸಿಕೊಂಡು ತಜ್ಞರು–ವಿಜ್ಞಾನಿಗಳು ಇನ್ನಷ್ಟು ಮಾಹಿತಿಗಳನ್ನು ಪಡೆಯುತ್ತಾರೆ. ಆ ಮಾಹಿತಿ ಆಧಾರದ ಮೇಲೆ ರೋಗ ನಿರ್ಣಯ ಮಾಡಿ, ಸಲಹೆ ಸೂಚನೆಗಳನ್ನು ನೀಡುತ್ತಿದ್ದಾರೆ. ಸಮಸ್ಯೆ ಗಂಭೀರವಾಗಿದ್ದರೆ, ಕೆವಿಕೆ ವಿಜ್ಞಾನಿಗಳು ಖುದ್ದು ಜಮೀನಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ರೈತರೇ ಹೆಚ್ಚು:
ಜಿಲ್ಲೆಯಾದ್ಯಂತ ರೈತರ ಸಂಖ್ಯೆ ಹೆಚ್ಚಿದೆ. ಅದಕ್ಕಾಗಿ ವಲಯ, ಗ್ರಾಮ, ರೈತ ಸಂಪರ್ಕ ಕೇಂದ್ರ ಮತ್ತಿತರ ವಿಭಾಗಗಳ ಆಧಾರದಲ್ಲಿ ಹೆಚ್ಚುವರಿ ಗ್ರೂಪ್‌ಗಳನ್ನು ಮಾಡಿಕೊಂಡಿದ್ದೇವೆ. ಅಲ್ಲದೇ, ಕೃಷಿ, ತೋಟಗಾರಿಕೆ, ಪಶುಪಾಲನೆ, ರೇಷ್ಮೆ ಇಲಾಖೆಗಳವಾರು ಗ್ರೂಪ್ ಮಾಡಿದ್ದೇವೆ. ಕೆವಿಕೆಯು ರೈತರಿಗೆ ನೀಡಬೇಕಾದ ಮಾಹಿತಿಗಳನ್ನು ಈ ಗ್ರೂಪ್‌ಗಳಿಗೆ ಹಾಕುತ್ತಿದೆ. ಗ್ರೂಪ್‌ನಲ್ಲಿರುವ ರೈತರು ಈ ಮಾಹಿತಿಗಳನ್ನು ಇತರ ರೈತರ ಜೊತೆಗೂ ಹಂಚಿಕೊಳ್ಳುತ್ತಿದ್ದಾರೆ. ಇದು ಕೃಷಿಯ ತಾಂತ್ರಿಕ ಸಮಸ್ಯೆ ಬಗೆಹರಿಸಲು ಸಹಕಾರಿಯಾಗಿದೆ ಎನ್ನುತ್ತಾರೆ ಕೆವಿಕೆ ಮುಖ್ಯಸ್ಥ ಡಾ.ಅಶೋಕ ಪಿ.

ಮಾಧ್ಯಮ ಮಾಹಿತಿ:
ಕೇವಲ ಬೆಳೆಗಳ ಸಮಸ್ಯೆ ಮಾತ್ರವಲ್ಲ, ಕೃಷಿಯಲ್ಲಿನ ಆವಿಷ್ಕಾರ– ಪ್ರಯೋಗಗಳು, ಜಲ ಸಂರಕ್ಷಣೆ, ಪರಿಸರ ರಕ್ಷಣೆ, ರೈತರ ಸಾಧನೆಗಳು, ಕೃಷಿ ವೆಚ್ಚ ಇಳಿಕೆ ಸೇರಿದಂತೆ ಮಾಧ್ಯಮಗಳಲ್ಲಿ ಪ್ರಕಟಗೊಂಡ ಕೃಷಿ ಸಂಬಂಧಿತ ಮಾಹಿತಿಗಳನ್ನೂ ಇಲ್ಲಿ ಹಾಕಲಾಗುತ್ತಿದೆ. ಇಂತಹ ಮಾಹಿತಿ, ವಿಡಿಯೊ ಕ್ಲಿಪ್‌ಗಳು ರೈತರಿಗೆ ಪ್ರೇರಣೆಯಾಗಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !