ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳಿಂದ ತೆವಳುತ್ತಿರುವ ಕ್ರೀಡಾ ಇಲಾಖೆ

ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್‌ ಟ್ರ್ಯಾಕ್‌ ಮರೀಚಿಕೆ: ಕಾಯಂ ನೌಕರರ ಕೊರತೆಯಿಂದ ನಿರ್ವಹಣೆಗೆ ಅಡ್ಡಿ
Last Updated 19 ಮೇ 2022, 6:07 IST
ಅಕ್ಷರ ಗಾತ್ರ

ಹಾವೇರಿ: ಕ್ರೀಡೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿಸಿ, ನವೋಲ್ಲಾಸ ನೀಡುತ್ತವೆ. ಇಂಥ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ, ಯುವಜನರಲ್ಲಿ ಕ್ರೀಡಾ ಮನೋಭಾವ ಬೆಳೆಸಬೇಕಾದ ಕ್ರೀಡಾ ಇಲಾಖೆಯೇ ಮೂಲಸೌಕರ್ಯಗಳಿಂದ ವಂಚಿತವಾಗಿ, ಸಮಸ್ಯೆಗಳಿಂದ ಬಳಲುತ್ತಿದೆ.

ಜಿಲ್ಲಾ ಮತ್ತು ತಾಲ್ಲೂಕು ಕ್ರೀಡಾಂಗಣಗಳಿಗೆ ಕಾಲಿಟ್ಟರೆ ಹೆಜ್ಜೆ–ಹೆಜ್ಜೆಗೂ ಸಮಸ್ಯೆಗಳು ಗೋಚರಿಸುತ್ತವೆ. ಅನುದಾನದ ಕೊರತೆ, ಕಾಯಂ ಸಿಬ್ಬಂದಿ ಕೊರತೆ, ಸೌಲಭ್ಯಗಳ ಕೊರತೆ ಹಾಗೂ ಕಳಪೆ ಕಾಮಗಾರಿಯಿಂದ ಕ್ರೀಡಾ ಇಲಾಖೆ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯವಾಗದೆ ತೆವಳುತ್ತಿದೆ.

ವೇಗ ಮತ್ತು ಸುರಕ್ಷತೆಗೆ ಪೂರಕವಾಗಿರುವ ‘ಸಿಂಥೆಟಿಕ್‌ ಟ್ರ್ಯಾಕ್‌’ ಅಥ್ಲೀಟ್‌ಗಳಿಗೆ ಚಿಮ್ಮುಹಲಗೆ ಇದ್ದಂತೆ. ಆದರೆ, ಹಾವೇರಿ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳ ಪಾಲಿಗೆ ಸಿಂಥೆಟಿಕ್‌ ಟ್ರ್ಯಾಕ್‌ ಎಂಬುದು ಮರೀಚಿಕೆಯಾಗಿದೆ.

ಕಲ್ಲು, ಇಟ್ಟಿಗೆ ಮತ್ತು ಮಣ್ಣಿನಿಂದ ಕೂಡಿದ ಅಥ್ಲೆಟಿಕ್‌ ಟ್ರ್ಯಾಕ್‌ನಲ್ಲಿ ಬರಿಗಾಲಿನಲ್ಲಿ ಅಭ್ಯಾಸ ಮಾಡುವ ಕ್ರೀಡಾಪಟುಗಳನ್ನು ನೋಡಿದರೆ, ಕ್ರೀಡಾ ಇಲಾಖೆಯ ದುಸ್ಥಿತಿ ಅರ್ಥವಾಗುತ್ತದೆ. ಓಟ ಮತ್ತು ರಿಲೇ ಸ್ಪರ್ಧೆಗಳಲ್ಲಿ ಆಟಗಾರರನ್ನು ಗಾಯಗೊಳ್ಳದಂತೆ ಜೋಪಾನ ಮಾಡುವ ಸಿಂಥೆಟಿಕ್‌ ಟ್ರ್ಯಾಕ್‌ ನಿರ್ಮಿಸುವುದಕ್ಕೆ ಇಲಾಖೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೀನ–ಮೇಷ ಎಣಿಸುತ್ತಿದ್ದಾರೆ ಎಂಬುದು ಕ್ರೀಡಾಪ್ರೇಮಿಗಳ ದೂರು.

ಕ್ರೀಡಾ ಅಂಕಣಗಳ ಕೊರತೆ:

ಕ್ರೀಡಾಂಗಣದ ಸುತ್ತ ಕಾಂಪೌಂಡ್‌ ಹಾಗೂ ವಾಕಿಂಗ್ ಪಾತ್‌ ನಿರ್ಮಾಣವಾಗದ ಕಾರಣ ಮೈದಾನದ ಒಳಗಡೆಯೇ ಸಾರ್ವಜನಿಕರು ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್‌ ಮಾಡುತ್ತಾರೆ. ಜನಸಂದಣಿಯ ನಡುವೆಯೇ ಕ್ರೀಡಾಪಟುಗಳು ವಾಲಿಬಾಲ್‌, ಫುಟ್‌ಬಾಲ್‌, ಕಬಡ್ಡಿ, ಹಾಕಿ ಮತ್ತು ಓಟದ ಅಭ್ಯಾಸ ನಡೆಸುವಂತಾಗಿದೆ. ವಿಶೇಷವೆಂದರೆ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಅಂಕಣಗಳೇ ಇಲ್ಲ. ಕ್ರೀಡಾ ಚಟುವಟಿಕೆಗಳಿಗಿಂತ ಹೆಚ್ಚಾಗಿ ಜಯಂತಿ, ಸಮಾರಂಭಗಳಿಗೆ ಬಳಕೆಯಾಗುತ್ತಿದೆ.

ಫೆಡ್‌ಲೈಟ್‌ ಇಲ್ಲ:

8.5 ಎಕರೆ ವಿಸ್ತೀರ್ಣದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆಡ್‌ಲೈಟ್‌ ವ್ಯವಸ್ಥೆಯಿಲ್ಲ. ಈ ಕಟ್ಟಡದ ಮೇಲ್ಭಾಗದಲ್ಲಿ ದೊಡ್ಡ ಡಾರ್ಮೆಟರಿ ನಿರ್ಮಿಸಿದರೆ ವಿವಿಧ ಕ್ರೀಡಾಕೂಟಗಳನ್ನು ನಡೆಸುವ ಸಮಯದಲ್ಲಿ ಕ್ರೀಡಾಪುಟಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಅನುಕೂಲವಾಗುತ್ತದೆ. ಜತೆಗೆ ಕ್ರೀಡಾಂಗಣದ ಸುತ್ತಲೂ ಪ್ರೇಕ್ಷಕರ ಗ್ಯಾಲರಿ ನಿರ್ಮಿಸುವ ಕಾರ್ಯ ಇದುವರೆಗೂ ಆರಂಭವಾಗಿಲ್ಲ.

ಈಜುಕೊಳ ಬಂದ್‌:

ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಈಜುಕೊಳ ಒಂದೂವರೆ ತಿಂಗಳಿನಿಂದ ಬಂದ್‌ ಆಗಿದೆ. ಈಜುಕೊಳದ ಮಷಿನ್‌ ರೂಂನಲ್ಲಿರುವ ಮರಳಿನಿಂದ ತುಂಬಿರುವ ನೀರು ಶುದ್ಧೀಕರಣದ ಎರಡು ಟ್ಯಾಂಕ್‌ಗಳ ಮೇಲೆ ಅಳವಡಿಸಲಾಗಿದ್ದ ಕ್ಯಾಪ್‌ಗಳು ಹಾರಿ ಹೋಗಿವೆ. ಮಷಿನ್‌ ರೂಂನಲ್ಲಿ ಅಳವಡಿಸಿರುವ ಪೈಪ್‌ಗಳು ಮತ್ತು ವಾಲ್‌ಗಳು, ಬಲ್ಬ್‌ಗಳು, ಮಷಿನ್‌ ಕೊಠಡಿಯ ಬಾಗಿಲು, ಕಿಟಕಿ ಸಂಪೂರ್ಣ ಹಾಳಾಗಿವೆ. ಪುರುಷ ಮತ್ತು ಮಹಿಳಾ ಶೌಚಾಲಯಗಳು ದುಸ್ಥಿತಿಯಲ್ಲಿವೆ.ಕಾಮಗಾರಿಗೆ ತಗಲುವ ₹10 ಲಕ್ಷ ಅನುದಾನವನ್ನು ಬಿಡುಗಡೆ ಮಾಡಬೇಕು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಆಯುಕ್ತರಿಗೆ ಏಪ್ರಿಲ್‌ 11ರಂದು ಪತ್ರ ಬರೆದಿದ್ದಾರೆ.

‘ಒಳಾಂಗಣ ಕ್ರೀಡಾಂಗಣದಲ್ಲಿ ವುಡನ್‌ ಫ್ಲೋರಿಂಗ್‌ ಕೋರ್ಟ್‌ ದುರಸ್ತಿ ಮಾಡಿಸಿ, ಪಾಲಿಶ್‌ ಮಾಡಿಸಬೇಕಿದೆ. ಲೈಟಿಂಗ್‌ ವ್ಯವಸ್ಥೆ ಕೂಡ ಉತ್ತಮವಾಗಿಲ್ಲ. ಮೇಲ್ಭಾಗದ ವೆಂಟಿಲೇಟರ್‌ ಒಳಗೆ ಪಾರಿವಾಳಗಳು ಪ್ರವೇಶ ಮಾಡಿ ಗೂಡುಕಟ್ಟಿ ಶುಚಿತ್ವ ಹಾಳಾಗಿದೆ. ಅದಕ್ಕೆ ಮೆಟಲ್‌ ಶೀಟ್‌ ಅಳವಡಿಸಿ ಮುಚ್ಚಬೇಕಿದೆ. ಮೂಲಸೌಕರ್ಯ ಕಲ್ಪಿಸಿ ಕ್ರೀಡಾ ಸಾಧನೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಕ್ರೀಡಾಪಟುಗಳು ಒತ್ತಾಯಿಸಿದರು.

ಹಾರಿ ಹೋದ ಸಿಮೆಂಟ್‌ ಶೀಟು

ಏಪ್ರಿಲ್‌ ತಿಂಗಳಲ್ಲಿ ಭಾರಿ ಗಾಳಿ–ಮಳೆಗೆ ಜಿಲ್ಲಾ ಕ್ರೀಡಾಂಗಣದ ಪೆವಿಲಿಯನ್‌ ಕಟ್ಟಡಕ್ಕೆ ಅಳವಡಿಸಿದ್ದ ಸಿಮೆಂಟ್‌ ಶೀಟುಗಳು ಹಾರಿ ಹೋಗಿವೆ. ಹೊಸದಾಗಿ ಶೀಟುಗಳನ್ನು ಅಳವಡಿಸುವ ಕಾರ್ಯ ಇನ್ನೂ ಆರಂಭಗೊಂಡಿಲ್ಲ. ಫೆವಿಲಿಯನ್‌ ಕಟ್ಟಡದ ಬಣ್ಣ ಮಾಸಿದ್ದು, ಅಂದಗೆಟ್ಟಿದೆ. ಶೌಚಾಲಯ ಸಂಪೂರ್ಣ ಹಾಳಾಗಿದೆ. ಹೀಗಾಗಿ ಕ್ರೀಡಾಪಟುಗಳಿಗೆ ತೀವ್ರ ತೊಂದರೆಯಾಗಿದೆ.

ಸಿಬ್ಬಂದಿ, ಕೋಚ್‌ಗಳ ಕೊರತೆ

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾವೇರಿ ಕಚೇರಿಯಲ್ಲಿ ಸಹಾಯಕ ನಿರ್ದೇಶಕ, ಅಧೀಕ್ಷಕ, ದ್ವಿತೀಯ ದರ್ಜೆ ಸಹಾಯಕ, ದಲಾಯತ್‌ ಹುದ್ದೆಗಳು ಮಂಜೂರಾಗಿವೆ. ಆದರೆ, ಸಹಾಯಕ ನಿರ್ದೇಶಕ ಹುದ್ದೆ ಹೊರತುಪಡಿಸಿದರೆ ಉಳಿದ 3 ಹುದ್ದೆಗಳಿಗೆ ಕಾಯಂ ನೌಕರರೇ ಇಲ್ಲ, ಎಲ್ಲರೂ ಹೊರಗುತ್ತಿಗೆ ನೌಕರರು.

‘ಉತ್ಸಾಹಿ ಯುವಕರನ್ನು ಹುರಿದುಂಬಿಸಿ, ಕ್ರೀಡಾ ತರಬೇತಿ ನೀಡಿ, ಉತ್ತಮ ಸಾಧನೆ ಮಾಡುವಂತೆ ಮಾರ್ಗದರ್ಶನ ಮಾಡಬೇಕಾದ ಕ್ರೀಡಾ ತರಬೇತುದಾರರ (ಕೋಚ್‌) ಹುದ್ದೆಗಳೇ ಮಂಜೂರಾಗಿಲ್ಲ. ಹಾಕಿ ಮತ್ತು ವಾಲಿಬಾಲ್‌ ಕ್ರೀಡೆಗಳಿಗೆ 20 ವರ್ಷಗಳಿಂದಹೊರಗುತ್ತಿಗೆ ಆಧಾರಿತ ಕೋಚ್‌ಗಳೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ ಆಟಗಳಿಗೂ ಇವರೇ ದಿಕ್ಕು ಎಂಬಂತಾಗಿದೆ’ ಎಂದು ಕ್ರೀಡಾಪಟುಗಳು ಸಮಸ್ಯೆ ತೋಡಿಕೊಂಡರು.

**

ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿ ಮತ್ತು ಮೂಲಸೌಕರ್ಯ ಕಲ್ಪಿಸಲು ₹61 ಲಕ್ಷ ಅನುದಾನ ಬಿಡುಗಡೆಗೆ ಕೇಂದ್ರ ಕಚೇರಿಗೆ ಪತ್ರ ಬರೆಯಲಾಗಿದೆ
– ಲತಾ ಬಿ.ಎಚ್‌., ಸಹಾಯಕ ನಿರ್ದೇಶಕಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

**

ಜಿಲ್ಲಾ ಕ್ರೀಡಾಂಗಣ ಅಭಿವೃದ್ದಿಗಾಗಿ ಹೋರಾಟ ನಡೆಸಿದ್ದೇವೆ. ಸಿಬ್ಬಂದಿ ಮತ್ತು ತರಬೇತುದಾರರ ಹುದ್ದೆಗಳ ಭರ್ತಿಗೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕು
– ಪ್ರಭು ಹಿಟ್ನಳ್ಳಿ, ಹಿರಿಯ ಕ್ರೀಡಾಪಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT