ಸೋಮವಾರ, ಏಪ್ರಿಲ್ 6, 2020
19 °C
ಜಿಲ್ಲಾ ವಕೀಲರ ಸಂಘದ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ

ವಕೀಲರು ಇತರರಿಗೆ ಮಾದರಿಯಾಗಲಿ: ಕೋರ್ಟ್‌ ನ್ಯಾಯಮೂರ್ತಿ ಆರ್‌.ದೇವದಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಕಟ್ಟಡ ಕಟ್ಟುವುದು ಮುಖ್ಯವಲ್ಲ, ಅದರ ಸದ್ಬಳಕೆಯಾಗುವುದು ಮುಖ್ಯ. ವಕೀಲರ ಸೇವೆ ಮತ್ತು ಈ ಎಲ್ಲ ಸೌಲಭ್ಯಗಳ ಪ್ರಯೋಜನ ಕಕ್ಷಿದಾರರಿಗೆ ಸಿಗಬೇಕು. ವಕೀಲರು ಇತರರಿಗೆ ಮಾದರಿಯಾಗಬೇಕು’ ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಆರ್‌.ದೇವದಾಸ್‌ ಹೇಳಿದರು. 

ನಗರದ ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಕೀಲರ ಸಂಘದ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. 

ಹೈಕೋರ್ಟ್‌ ಕಡೆಯಿಂದ ವಕೀಲರ ಎಲ್ಲ ಬೇಡಿಕೆಗಳನ್ನು ಈಡೇರಿಸಲು ಸಿದ್ಧವಿದ್ದೇವೆ. ಸರ್ಕಾರ ಕೂಡ ಉತ್ತಮ ಬೆಂಬಲ ನೀಡುತ್ತಿದೆ. ಯಾವುದೇ ಕುಂದುಕೊರತೆ ಇದ್ದರೆ ತಿಳಿಸಿ, ವಿಳಂಬ ಮಾಡದೆ ಕೆಲಸ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು. 

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಎಸ್‌.ಎಚ್‌. ರೇಣುಕಾದೇವಿ ಮಾತನಾಡಿ, ‘ವಕೀಲರಲ್ಲಿ ಭಿನ್ನಮತ ಇರಬಾರದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸೌಹಾರ್ದಯುತವಾಗಿ ಸಂಘವನ್ನು ಮುನ್ನಡೆಸಬೇಕು’ ಎಂದು ತಿಳಿ ಹೇಳಿದರು. 

ಕಟ್ಟಡ ನಿರ್ಮಾಣದ ಹುಮ್ಮಸ್ಸು, ಪ್ರಕರಣ ವಿಲೇವಾರಿ ಮಾಡುವಲ್ಲೂ ಇರಬೇಕು. ರಾಜಿಯಾಗಬಹುದಾದ ಪ್ರಕರಣಗಳನ್ನು ರಾಜಿ ಮಾಡಿಸಿ. ನ್ಯಾಯಾಲಯದಲ್ಲಿರುವ ಪ್ರಕರಣಗಳ ಕಡತಗಳನ್ನು ವೇಗವಾಗಿ ವಿಲೇವಾರಿ ಮಾಡಲು ಸಹಕರಿಸಿ. ಕಕ್ಷಿದಾರರನ್ನು ನೆನಪಿನಲ್ಲಿ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ‌

ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾವಲಿ ಮಾತನಾಡಿ, ‘ನ್ಯಾಯಾಲಯ ಸಂಕೀರ್ಣ ಉದ್ಘಾಟನೆಯಾಗಿ ಎಂಟು ವರ್ಷವಾಗಿತ್ತು. ಆದರೆ ವಕೀಲರ ಸಂಘಕ್ಕೆ ಸುಸಜ್ಜಿತ ಕಟ್ಟಡ ಇರಲಿಲ್ಲ. ಆದರೆ, ಸ್ವಂತ ಕಟ್ಟಡ ಹೊಂದುವ ಸುಸಮಯ ಈಗ ಕೂಡಿ ಬಂದಿದೆ. ಎರಡು ಲಿಫ್ಟ್‌, ಹವಾನಿಯಂತ್ರಿತ ಕಟ್ಟಡ, ಪಾರ್ಕಿಂಗ್‌ ಜಾಗ, ಶಾಪಿಂಗ್ ಕಾಂಪ್ಲೆಕ್ಸ್‌ ಸೇರಿದಂತೆ ಸಕಲ ಸೌಲಭ್ಯ ಒಳಗೊಂಡ ಕಟ್ಟಡ ನಿರ್ಮಾಣವಾಗಲಿದೆ’ ಎಂದು ಆಶಾಭಾವನೆ ವ್ಯಕ್ತಪಡಿಸಿದರು. 

ವಕೀಲರ ಸಂಘದ ಕಾರ್ಯದರ್ಶಿ ಪಿ.ಎಂ.ಬೆನ್ನೂರ, ಜಂಟಿ ಕಾರ್ಯದರ್ಶಿ ಸಿ.ಸಿ.ಗಬ್ಬುರಮಠ, ಎಕ್ಸಿಕ್ಯೂಟಿವ್ ಎಂಜಿನಿಯರ್‌ ಭಾವನಾಮೂರ್ತಿ, ವಕೀಲರ ಸಂಘದ ಸದಸ್ಯರು, ನ್ಯಾಯಾಧೀಶರು ಹಾಜರಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು