ಗುರುವಾರ , ಮೇ 6, 2021
23 °C
ನಲ್ಲಿಗಳಲ್ಲಿ ಹಳದಿ ಬಣ್ಣದ ಕಲುಷಿತ ನೀರು ಪೂರೈಕೆ: ಹಂದಿಗಳ ಕಾಟಕ್ಕೆ ಬೇಸತ್ತ ಜನ

ಚರಂಡಿ ಹೂಳು; ನಿವಾಸಿಗಳ ಗೋಳು

ಮಾರುತಿ ಪೇಟಕರ Updated:

ಅಕ್ಷರ ಗಾತ್ರ : | |

Prajavani

ಹಾನಗಲ್: ಪಟ್ಟಣದ ಮಖಬೂಲಿಯಾ ನಗರ ಮೂಲಸೌಕರ್ಯಗಳಿಂದ ವಂಚಿತವಾಗಿದ್ದು, ಸೊಳ್ಳೆ, ಹಂದಿಗಳ ತಾಣವಾಗಿದೆ. ಇಲ್ಲಿ ಚರಂಡಿಗಳು ಹೂಳು ತುಂಬಿಕೊಂಡು ಗಬ್ಬು ನಾರುತ್ತಿವೆ. 

ಸುಮಾರು 150 ಮನೆಗಳ ಈ ಪ್ರದೇಶ 30 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದೆ. ಬಹುತೇಕ ಮುಸ್ಲಿಂ ಜನರು ಇಲ್ಲಿನ ನಿವಾಸಿಗಳು. ಒಂದು ಓಣಿಯ ರಸ್ತೆ ಮಾತ್ರ ಕಾಂಕ್ರೀಟ್‌‌ ಕಂಡಿತ್ತು. ಈಗ ನಾಲ್ಕೈದು ತಿಂಗಳ ಹಿಂದೆ ಇನ್ನುಳಿದ ರಸ್ತೆಗಳು ಅಲ್ಪಸಂಖ್ಯಾತರ ಕಾಲೊನಿಗಳ ಅಭಿವೃದ್ಧಿ ಅನುದಾನದಲ್ಲಿ ಸುಧಾರಣೆಗೊಂಡಿವೆ.

ಆದರೆ, 15 ದಿನಗಳ ಹಿಂದೆ ನಡೆದ ಗ್ರಾಮದೇವಿ ಜಾತ್ರೆ ನಿಮಿತ್ತ ಮುಖ್ಯರಸ್ತೆ ಬಂದ್ ಆಗಿದ್ದರಿಂದ ದೊಡ್ಡ ಗಾತ್ರದ ವಾಹನಗಳು ಮಖಬೂಲಿಯಾ ನಗರ ಮೂಲಕ ಸಂಚರಿಸಿದ್ದವು. ಹೀಗಾಗಿ ಹೊಸದಾಗಿ ನಿರ್ಮಾಣಗೊಂಡ ಇಲ್ಲಿನ ಕಾಂಕ್ರೀಟ್‌‌ ರಸ್ತೆಗಳು ಎಲ್ಲೆಂದರಲ್ಲಿ ಕಿತ್ತುಕೊಂಡಿವೆ.

‘ಬಹಳ ವರ್ಷಗಳ ಬಳಿಕ ನಮ್ಮ ಬಡಾವಣೆಗೆ ರಸ್ತೆ ದುರಸ್ತಿ ಮಾಡಲಾಗಿತ್ತು. ಆದರೆ, ರಸ್ತೆ ನಿರ್ಮಾಣ ಕಳಪೆಯಾಗಿದೆ. ರಸ್ತೆಗುಂಟ ನಿರ್ಮಿಸಲಾದ ಚರಂಡಿಗಳ ಗುಣಮಟ್ಟವೂ ಸರಿಯಿಲ್ಲ’ ಎಂದು ನಿವಾಸಿಗಳು ದೂರಿದರು. 

‘ಇಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸಿ, ಸುಮಾರು 6 ತಿಂಗಳ ಮೇಲಾಗಿದೆ. ಹೀಗಾಗಿ ಚರಂಡಿಗಳಲ್ಲಿ ಹೂಳು ತುಂಬಿಕೊಂಡಿದೆ. ಮಳೆ ಬಿದ್ದರೆ, ನೀರು ಸರಾಗವಾಗಿ ಹರಿಯಲು ಸಾಧ್ಯವಿಲ್ಲ. ರಸ್ತೆ ಮೇಲೆ ತ್ಯಾಜ್ಯ ಮತ್ತು ಚರಂಡಿ ನೀರು ಹರಿಯುತ್ತದೆ. ಕೂಡಲೇ ಚರಂಡಿ ಹೂಳು ತೆಗೆಸಬೇಕು’ ಎಂದು ಇಲ್ಲಿನ ನಿವಾಸಿ ಅಬ್ದುಲ್‌ ರಜಾಕ್‌ ನಾಶಿಪುಡಿ ಒತ್ತಾಯಿಸಿದರು.  

‘ಚರಂಡಿಗುಂಟ ಹಂದಿಗಳ ಹಾವಳಿ ಇಲ್ಲಿದೆ. ಚರಂಡಿಯಲ್ಲಿ ಬಿದ್ದು ಒದ್ದಾಡುವುದು ಮತ್ತು ಚರಂಡಿ ತ್ಯಾಜ್ಯವನ್ನು ಕದಡಿ, ರಸ್ತೆಗೆ ಹರಡುತ್ತವೆ. ಹೀಗಾಗಿ ಅನೈರ್ಮಲ್ಯ ವಾತಾವರಣ ಉಂಟಾಗಿದೆ. ಸಂಜೆಯಾಗುತ್ತಲೇ ಸೊಳ್ಳೆಗಳ ಕಾಟ ಹೆಚ್ಚಾಗುತ್ತದೆ. ರಸ್ತೆ, ಚರಂಡಿ ಒಂದಾಗಿರುವ ಈ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಕೊರೊನಾ ಭಯದ ಜೊತೆಗೆ ಮತ್ತಷ್ಟು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದೇವೆ’ ಎಂದು ಶಬ್ಬೀರ್ ‌ಅಹ್ಮದ್‌ ಉಪ್ಪಿನ‌ ಹೇಳಿದರು.

ಹಂದಿಗಳ ನಿಗ್ರಹದ ಬಗ್ಗೆ ಮಾತನಾಡುವ ಪುರಸಭೆಯವರು ಇಲ್ಲಿ ಒಂದು ಹಂದಿಯನ್ನೂ ಹಿಡಿದು ಬೇರೆಡೆ ಸಾಗಿಸಿಲ್ಲ. ಚರಂಡಿಗಳನ್ನು ಸ್ಚಚ್ಛಗೊಳಿಸಿ, ಫಾಗಿಂಗ್‌ ಮಾಡುವ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕು. ಇದು ರಂಜಾನ್‌‌ ಉಪವಾಸದ ದಿನಗಳು. ಮನೆಯಿಂದ ಹೊರ ಬಂದರೆ ಕೆಟ್ಟ ವಾಸನೆ ಹರಡಿರುತ್ತದೆ. ಸ್ವಚ್ಛತೆ, ಮೂಲಸೌಕರ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲಾನಿ ಖಿಲ್ಲೇದಾರ್‌ ಆಗ್ರಹಿಸಿದರು. 

ಹಲವು ತಿಂಗಳಿನಿಂದ ವಾಸನೆಯುಕ್ತ ಮತ್ತು ಹಳದಿ ಬಣ್ಣದ ನೀರು ನಲ್ಲಿಗಳಲ್ಲಿ ಬರುತ್ತಿದೆ. ಹೀಗಾಗಿ ಶುದ್ಧ ನೀರು ಸಿಗದೆ ನಿವಾಸಿಗಳು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ಜನರ ಆರೋಗ್ಯದ ದೃಷ್ಟಿಯಿಂದ ಶುದ್ಧ ನೀರು ಪೂರೈಸಬೇಕು ಎಂದು ಬಡಾವಣೆಯ ಮಹಿಳೆಯರು ಒತ್ತಾಯಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.