ಬುಧವಾರ, ಮಾರ್ಚ್ 22, 2023
19 °C

ಕಾಮಗಾರಿಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ: ಶಾಸಕ ನೆಹರು ಓಲೇಕಾರ ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುತ್ತಲ: ‘ನವೋದಯ, ಪದವಿ ಕಾಲೇಜು, ಮೊರಾರ್ಜಿ ವಸತಿ ಶಾಲೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕಟ್ಟಡ ಕಾಮಗಾರಿಗೆ ಬಗರ್‌ಹುಕುಂ ಸಾಗುವಳಿ ರೈತರು ಅಡ್ಡಿಪಡಿಸಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಶಾಸಕ ನೆಹರು ಓಲೇಕಾರ ಎಚ್ಚರಿಕೆ ನೀಡಿದರು. 

ಹೊಸರಿತ್ತಿ ಹೊರವಲಯದ ಅಕ್ಕೂರ ಗ್ರಾಮದ ವ್ಯಾಪ್ತಿಗೆ ಬರುವ ಬಗರಹುಕುಂ ಸಾಗುವಳಿದಾರರ ಜಮೀನಿನಲ್ಲಿ ಅಲ್ಪಸಂಖ್ಯಾತರ ಮಾದರಿ ವಸತಿ ನವೋದಯ ಶಾಲೆಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. 

‘ಈ ಭಾಗದ ಮಕ್ಕಳು ಹಾವೇರಿ, ರಾಣೆಬೆನ್ನೂರು ಮತ್ತು ವಿವಿಧ ನಗರಗಳಿಗೆ ಹೋಗಿ ಪದವಿ ಪಡೆಯಬೇಕಾಗಿರುವುದರಿಂದ ವಿದ್ಯಾರ್ಥಿನಿಯರು ತಮ್ಮ ಶಿಕ್ಷಣವನ್ನು ಮೊಟುಕುಗೊಳಿಸುತ್ತಿದ್ದಾರೆ. ಇಲ್ಲಿಯೇ ಪದವಿ ಕಾಲೇಜು ಮತ್ತು ವಸತಿ ಶಾಲೆಗಳು ನಿರ್ಮಾಣವಾದರೆ ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ಬಗರ್‌ ಹುಕುಂ ಜಮೀನು ಉಳುಮೆ ಮಾಡಿದ ರೈತರಿಗೆ ಬೇರೆ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು. ಈ ಭಾಗದಲ್ಲಿ ಎಲ್ಲ ಶಿಕ್ಷಣ ಸಂಸ್ಥೆಯ ಶಾಲಾ ಕಾಲೇಜುಗಳು ನಿರ್ಮಾಣವಾದರೆ ರೈತರ ಜಮೀನುಗಳಿಗೆ ಬಂಗಾರದಂಥ ಬೆಲೆ ಬರುತ್ತದೆ’ ಎಂದರು.

‘ನೆರೆ ಹಾವಳಿಯಿಂದ ಮನೆ ಕಳೆದುಕೊಂಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಪಟ್ಟಾ ವಿತರಣೆ ಮಾಡಲಾಗುವುದು. ಎಲ್ಲರೂ ಸೇರಿ ಮಾತನಾಡಿ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳೋಣ. ಕಾಲೇಜು ಕಟ್ಟಡಗಳಿಗೆ ಅಡ್ಡಿಪಡಿಸಬೇಡಿ’ ಎಂದು ಮನವಿ ಮಾಡಿದರು. 

ಪೊಲೀಸ್ ಭದ್ರತೆಯೊಂದಿಗೆ ನವೋದಯ ಶಾಲೆ ಭೂಮಿಪೂಜೆ ನಡೆಸಲಾಯಿತು. ಬಗರ್‌ಹುಕುಂ ಸಾಗುವಳಿ ಮಾಡಿದ ಅಕ್ಕೂರ ಗ್ರಾಮದ ಸುತ್ತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಕಾಲೇಜು ಪ್ರಾಂಶುಪಾಲ ಪ್ರಶಾಂತ ಜೆ.ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಎಚ್.ಆರ್.ಯಡಳ್ಳಿ ಮಾತನಾಡಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ವಿಜಕುಮಾರ ಸಂತೋಷ, ಡಿವೈಎಸ್‌ಪಿ ಶಂಕರ ಮಾರಿಹಾಳ, ಗ್ರಾಮೀಣ ಸಿಪಿಐ ನಾಗಮ್ಮ ಕೆ., ಶಹರ ಸಿಪಿಐ ಪ್ರಹ್ಲಾದ ಚನ್ನಗಿರಿ, ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಚಿದಾನಂದ, ಗುಪ್ತದಳದ ಪಿಎಸ್‌ಐ ಶಿಲ್ಪಾ ವೈ ಹಾಗೂ ಪೊಲೀಸ್‌ ಸಿಬ್ಬಂದಿ ಇದ್ದರು. 

ತಹಶೀಲ್ದಾರ್‌ ಗಿರೀಶ ಸ್ವಾದಿ, ಪ್ರಾಧಿಕಾರದ ಅಧ್ಯಕ್ಷ ಈರಣ್ಣ ಸಂಗೂರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ ಗುಡ್ಡಪ್ಪ ಜಿಗಳಿಕೊಪ್ಪ, ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ, ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾರತಿ ಹಳ್ಳಿಕೇರಿ, ನಾಗರಾಜ ಬಸೇಗಣ್ಣಿ, ಬಸವರಾಜ ಕಳಸೂರ, ಎಪಿಎಂಸಿ ನಿರ್ದೇಶಕರಾದ ಉಮೇಶ ಮಾಗಳ, ಗೌಡಪ್ಪಗೌಡ ಪಾಟೀಲ್, ಶಂಬಣ್ಣ ಗೋಪಾಳಿ, ಕೆ.ಸಿ.ಕೋರಿ ಇದ್ದರು.

ದೌರ್ಜನ್ಯ ಸಹಿಸುವುದಿಲ್ಲ: ಸ್ವಾಮೀಜಿ

ಅಕ್ಕೂರ ಗ್ರಾಮದ ಬಗರ್‌ಹುಕುಂ ಸಾಗುವಳಿ ಮಾಡಿದ ರೈತರ ಜಮೀನುಗಳಿಗೆ ಸೋಮವಾರ ಸಂಜೆ ಭೇಟಿ ನೀಡಿದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಬೆಳೆ ನಾಶ ಮಾಡಿದ್ದನ್ನು ಕಂಡು ಸಿಡಿಮಿಡಿಗೊಂಡರು. 

ಪರಿಶಿಷ್ಟ ಪಂಗಡದ ಜನರ ಮೇಲೆ ದೌರ್ಜನ್ಯ ನಡೆಸಿ, ಸಾಗುವಳಿ ಜಮೀನಿನಲ್ಲಿ ಸರ್ಕಾರದ ಕಟ್ಟಡ ನಿರ್ಮಿಸಲು ಹೊರಟಿರುವ ಕ್ರಮವನ್ನು ಖಂಡಿಸಿದರು. ದೌರ್ಜನ್ಯವನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಪೊಲೀಸರನ್ನು ಬಿಟ್ಟು ಹೆದರಿಸುವುದು ಸರಿಯಲ್ಲ. ಜನರಿಂದ ಶಾಸಕ ಸ್ಥಾನ ಸಿಕ್ಕಿದೆ. ಅದನ್ನು ಮರೆಯಬಾರದು ಎಂದು ನೆಹರು ಓಲೇಕಾರ ವಿರುದ್ಧ ಪರೋಕ್ಷವಾಗಿ ಗುಡುಗಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು