ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆ ಕ್ಷಣದಲ್ಲಿ ಜೆಡಿಎಸ್‌ ಬಿ.ಫಾರಂ ಗಿಟ್ಟಿಸಿ ನಾಮಪತ್ರ ಸಲ್ಲಿಸಿದ ರವಿಕುಮಾರ್

Last Updated 24 ಏಪ್ರಿಲ್ 2018, 9:00 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಮೇಲೂರು ಬಿ.ಎನ್.ರವಿಕುಮಾರ್ ಅವರು ಸೋಮವಾರ ಜೆಡಿಎಸ್ ಅಭ್ಯರ್ಥಿಯಾಗಿ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ನಾಮಪತ್ರವನ್ನು ಸಲ್ಲಿಸಿದರು.

ಶಾಸಕ ಎಂ.ರಾಜಣ್ಣ ಅವರಿಗೆ ಈಗಾಗಲೇ ಜೆಡಿಎಸ್‌ ಪಕ್ಷದಿಂದ ಬಿ.ಫಾರಂ ನೀಡಲಾಗಿತ್ತು ಆದರೆ ಸೋಮವಾರ ಮುಂಜಾನೆ ನಡೆದ ಬೆಳವಣಿಗೆಯಲ್ಲಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು ಹೊಸ ಎ ಮತ್ತು ಬಿ.ಫಾರಂ ನೀಡಿ ಚುನಾವಣಾಧಿಕಾರಿಗೆ ಪತ್ರ ಸಹ ಬರೆದಿದ್ದಾರೆ.

ಚುನಾವಣಾಧಿಕಾರಿಗೆ ಎಚ್.ಡಿ.ದೇವೇಗೌಡ ಅವರು ಬರೆದಿರುವ ಪತ್ರದಲ್ಲಿ ‘ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಿಂದ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಎಂ.ರಾಜಣ್ಣ ಅವರನ್ನು ಆಯ್ಕೆ ಮಾಡಿ ಅವರಿಗೆ ಈ ಮೊದಲು ನಮೂನೆ ‘ಎ’ ಮತ್ತು ‘ಬಿ’ ಯನ್ನು ನೀಡಲಾಗಿತ್ತು. ಸದರಿಯವರ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದು ಬಿ.ಎನ್.ರವಿಕುಮಾರ್ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿರುತ್ತದೆ. ಈ ಪತ್ರದೊಂದಿಗೆ ಪರಿಷ್ಕೃತ ‘ಎ’ ಮತ್ತು ‘ಬಿ’ ನಮೂನೆಯನ್ನು ನೀಡಲಾಗುತ್ತಿದೆ. ದಯಮಾಡಿ ಇವರನ್ನು ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಪರಿಗಣಿಸಲು ಕೋರಿದೆ’ ಎಂದು ಪತ್ರದಲ್ಲಿ ಬರೆದಿದ್ದಾರೆ.

ನಗರದ ಬಸ್‌ನಿಲ್ದಾಣದ ಪೆಟ್ರೋಲ್‌ ಬಂಕ್‌ ಬಳಿಯಿಂದ ಮೆರವಣಿಗೆಯಲ್ಲಿ ಬಂದ ರವಿಕುಮಾರ್‌ ಅವರನ್ನು ದಾರಿಯುದ್ದಕ್ಕೂ ಹೂ ಚೆಲ್ಲಿ ಕರೆತರಲಾಯಿತು. ಓ.ಟಿ ವೃತ್ತದ ಅರಳಿಕಟ್ಟೆಯ ಬಳಿ ರವಿಕುಮಾರ್‌ ಅಭಿಮಾನಿಗಳು ನೂರ ಒಂದು ತೆಂಗಿನ ಕಾಯಿ ಒಡೆದು ಸ್ವಾಗತಿಸಿದರು. ರೈಲ್ವೆ ಅಂಡರ್‌ಪಾಸ್‌ ಬಳಿ ಓಂ ಶಕ್ತಿ ಮಹಿಳೆಯರು ಆರತಿ ಬೆಳಗಿದರು.

ಬಿ.ಎನ್‌.ರವಿಕುಮಾರ್‌ ಮಾತನಾಡಿ, ‘ಎಂ.ರಾಜಣ್ಣ ಅವರ ಗೆಲುವಿಗೆ ನಾವು ಹೇಗೆ ಶ್ರಮಿಸಿದ್ದೆವೋ ಅವರೂ ಅದೇ ರೀತಿ ನಮಗೆ ಸಹಕರಿಸುವರು ಎಂದು ಭರವಸೆ ಇದೆ. ಕಳೆದ ಹದಿನೈದು ವರ್ಷಗಳಿಂದ ಪಕ್ಷಕ್ಕೆ ಸಲ್ಲಿಸಿರುವ ಸೇವೆ ಪರಿಗಣಿಸಿ ಈ ಬಾರಿಯೂ ಜೆಡಿಎಸ್‌ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ವರಿಷ್ಠರು ಟಿಕೆಟ್‌ ನೀಡಿದ್ದಾರೆ’ ಎಂದು ತಿಳಿಸಿದರು.

ನಾಮಪತ್ರ ಸಲ್ಲಿಸಿದ ರಾಜಣ್ಣ: ಸೋಮವಾರ ಬೆಳಿಗ್ಗೆ ಶಾಸಕ ಎಂ. ರಾಜಣ್ಣ ಚುನಾವಣಾಧಿಕಾರಿ ಮಲ್ಲಿಕಾರ್ಜುನ್‌ ಅವರಿಗೆ ತಮಗೆ ಈಗಾಗಲೇ ನೀಡಿದ್ದ ಪಕ್ಷದ ಬಿ ಫಾರಂ ಸಹಿತವಾಗಿ ನಾಮಪತ್ರವನ್ನು ಸಲ್ಲಿಸಿದರು.

‘ಈ ಬೆಳವಣಿಗೆಯ ಬಗ್ಗೆ ವರಿಷ್ಠರೇ ಉತ್ತರಿಸಬೇಕು. ನಾನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರ ಸಹಾಯಕರು, ನೀವು ತಲೆ ಕೆಡಿಸಿಕೊಳ್ಳಬೇಡಿ, ಎಲ್ಲ ಸರಿಪಡಿಸಲಾಗುವುದು ಎಂದು ಹೇಳಿದರು. ವರಿಷ್ಠರು ನನಗೆ ಬಿ.ಫಾರಂ ತಪ್ಪಿಸಿದ್ದಕ್ಕೆ ಕಾರಣ ಕೊಡಬೇಕು. ನಾನೇನು ತಪ್ಪು ಮಾಡಿದ್ದೇನೆ, ಪಕ್ಷಕ್ಕೇನು ದ್ರೋಹ ಮಾಡಿದ್ದೇನೆ ಎಂಬುದನ್ನು ತಿಳಿಸಿದ ನಂತರ ನನ್ನ ಮುಂದಿನ ನಡೆಯ ಬಗ್ಗೆ ತೀರ್ಮಾನಿಸುವೆ. ಅದುವರೆಗೂ ಸತ್ಯಾಗ್ರಹ ಕೂರುತ್ತೇನೆ’ ಎಂದು ರಾಜಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT