ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶಭಕ್ತರು ಅಧಿಕಾರದ ಚುಕ್ಕಾಣಿ ಹಿಡಿಯಲಿ

‘ಗ್ರಾಮ ಸ್ವರಾಜ್ಯ ಸಮಾವೇಶ’ದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ
Last Updated 30 ನವೆಂಬರ್ 2020, 14:51 IST
ಅಕ್ಷರ ಗಾತ್ರ

ಹಾವೇರಿ: ‘ದೆಹಲಿ ಮತ್ತು ಬೆಂಗಳೂರಿನಲ್ಲಿ ದೇಶಭಕ್ತರು ಆಡಳಿತ ನಡೆಸುತ್ತಿದ್ದಾರೆ. ಅದೇ ರೀತಿ ಗ್ರಾ.ಪಂ. ಚುನಾವಣೆಯಲ್ಲಿ ಜನಪರ ಆಡಳಿತ ನೀಡುವ ದೇಶಭಕ್ತರು ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರ್ಯಕರ್ತರು ಸಂಕಲ್ಪ ತೊಡಬೇಕು. ಲೂಟಿ ಹೊಡೆಯುವವರು ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು’ ಎಂದು ಜಿಲ್ಲಾ ಉಸ್ತುವಾರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಜಿಲ್ಲಾ ಘಟಕ ಸೋಮವಾರ ಏರ್ಪಡಿಸಿದ್ದ ಹಾವೇರಿ, ಹಾನಗಲ್‌, ಶಿಗ್ಗಾವಿ– ಸವಣೂರು ವಿಧಾನಸಭಾ ಕ್ಷೇತ್ರಗಳ ‘ಗ್ರಾಮ ಸ್ವರಾಜ್ಯ ಸಮಾವೇಶ’ವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್‌. ಸಂಪೂರ್ಣವಾಗಿ ಜನರ ವಿಶ್ವಾಸ ಕಳೆದುಕೊಂಡಿರುವುದು ಇತ್ತೀಚಿನ ಚುನಾವಣೆಗಳಲ್ಲಿ ಸಾಬೀತಾಗಿದೆ. ಇಂಥವರು ಗ್ರಾ.ಪಂ. ಚುನಾವಣೆಯಲ್ಲಿ ಗೆಲ್ಲಲು ಅವಕಾಶ ಕೊಡಬಾರದು. ಹಾವೇರಿ ಗ್ರಾಮ ಪಂಚಾಯ್ತಿಗಳು ಕಾಂಗ್ರೆಸ್‌ ಮುಕ್ತವಾಗಬೇಕು ಎಂದು ಅಭಿಪ್ರಾಯಪಟ್ಟರು.

ಗಾಂಧಿ ವಿಚಾರಧಾರೆಗೆ ತಿಲಾಂಜಲಿ:

‘ಕಾಂಗ್ರೆಸ್‌ನವರು ಗಾಂಧೀಜಿಯವರ ಹೆಸರನ್ನು ಬಳಸಿಕೊಂಡರು. ಆದರೆ ಅವರ ವಿಚಾರಧಾರೆಗಳಿಗೆ ತಿಲಾಂಜಲಿ ನೀಡಿದರು. ಆಟಲ್‌ ಬಿಹಾರಿ ವಾಜಪೇಯಿ ಅವರು ‘ಗ್ರಾಮ ಸ್ವರಾಜ್ಯ’ ಸ್ಥಾಪಿಸುವ ಬಗ್ಗೆ ಕನಸು ಕಂಡು, ‘ಪ್ರಧಾನ ಮಂತ್ರಿ ಗ್ರಾಮ ಸಡಕ್’‌ ಯೋಜನೆ ಸೇರಿದಂತೆ ಹಲವಾರು ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದರು. ಇದೇ ಮಾರ್ಗದಲ್ಲಿ ನಡೆದ ಪ್ರಧಾನಿ ಮೋದಿ ಅವರು ಕಗ್ಗತ್ತಲಲ್ಲಿದ್ದ 19 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದರು. ‘ಕಿಸಾನ್‌ ಸಮ್ಮಾನ್‌ ಯೋಜನೆ’ಯಡಿ ರೈತರ ನೆರವಿಗೆ ಧಾವಿಸಿದರು’ ಎಂದು ಕೇಂದ್ರದ ಸಾಧನೆಗಳನ್ನು ಬಿಚ್ಚಿಟ್ಟರು.

ಆರ್ಥಿಕ ವಿಕೇಂದ್ರೀಕರಣ:

‘ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯವಾಗಬೇಕು, ಶಾಂತಿ–ಸೌಹಾರ್ದ ನೆಲೆಸಬೇಕು, ಯಾರಿಗೂ ಅನ್ಯಾಯವಾಗದ ಪಾರದರ್ಶಕ ಆಡಳಿತ ಜಾರಿಗೆ ಬರಬೇಕು ಎಂದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಅಧಿಕಾರ ವಿಕೇಂದ್ರೀಕರಣ ಈಗಾಗಲೇ ಆಗಿದೆ. ಆರ್ಥಿಕ ವಿಕೇಂದ್ರೀಕರಣವಾಗಿ, ಗ್ರಾಮಕ್ಕೆ ಬೇಕಾದ ಸೌಲಭ್ಯಗಳನ್ನು ಗ್ರಾಮ ಪಂಚಾಯ್ತಿಗಳೇ ಕಲ್ಪಿಸಿಕೊಳ್ಳುವ ಆರ್ಥಿಕ ಸ್ವಾತಂತ್ರ್ಯವನ್ನು ನೀಡುವುದು ಪಕ್ಷದ ಉದ್ದೇಶವಾಗಿದೆ’ ಎಂದರು.

38 ಹೆಣ್ಣುಮಕ್ಕಳಿಗೆ ಸೌಲಭ್ಯ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಸಾಮಾನ್ಯ ಕಾರ್ಯಕರ್ತರು ನಾಯಕರಾಗಲು ಗ್ರಾ.ಪಂ. ಚುನಾವಣೆ ಸುವರ್ಣಾವಕಾಶ. ರಾಜ್ಯ ಸರ್ಕಾರದಲ್ಲಿ ಅನುದಾನದ ಕೊರತೆಯಿಲ್ಲ. ಆದರೆ, ಅದು ಸದ್ಬಳಕೆ ಆಗಬೇಕು ಅಂದರೆ, ಪಕ್ಷದ ಪ್ರಾಮಾಣಿಕ ನಿಷ್ಠಾವಂತ ಕಾರ್ಯಕರ್ತರನ್ನು ಬೆಂಬಲಿಸಿ. ಮೋದಿ ಅವರು ‘ಜನ– ಧನ’ ಯೋಜನೆ ಜಾರಿಗೆ ತಂದು, ದೇಶದಲ್ಲಿ 38 ಕೋಟಿ ಹೆಣ್ಣುಮಕ್ಕಳಿಗೆ ಸೌಲಭ್ಯ ಕಲ್ಪಿಸಿದರು ಎಂದರು.

‘ಪೂರ್ಣ ಪ್ರಮಾಣದ ಬಿಜೆಪಿ ಸದಸ್ಯನಾದೆ’

‘ನಾನು ಬಿಜೆಪಿಗೆ ಸೇರ್ಪಡೆಯಾಗಿ ಒಂದು ವರ್ಷ ಹದಿನಾಲ್ಕು ದಿನವಾಯಿತು. ಇಂದು ಪೂರ್ಣ ಪ್ರಮಾಣದ ಬಿಜೆಪಿಯ ಸದಸ್ಯನಾಗಿದ್ದೇನೆ. ಚುನಾವಣೆಯಲ್ಲಿ ಗೆದ್ದು ಸಚಿವನಾದೆ. ನಂತರ ಕೋವಿಡ್‌ ಬಂತು. ಹಾಗಾಗಿ ಕಾರ್ಯಕರ್ತರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಸಮಾವೇಶ ಕಾರ್ಯಕರ್ತರನ್ನು ಭೇಟಿ ಮಾಡುವ ಸದವಕಾಶ ಕಲ್ಪಿಸಿದೆ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಸಂತಸ ವ್ಯಕ್ತಪಡಿಸಿದರು.

ಹಾವೇರಿ ನಗರದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್‌ ಸಮಾವೇಶದಲ್ಲಿ ಎಲ್ಲರೂ ಪಶ್ಚಿಮಕ್ಕೆ ಮುಖ ಮಾಡಿ ಕೂರುತ್ತಿದ್ದರು. ಬಿಜೆಪಿಯವರು ಪೂರ್ವಕ್ಕೆ ಮುಖ ಮಾಡಿ ಕುಳಿತಿದ್ದಾರೆ. ಹಾಗಾಗಿ ಬಿಜೆಪಿ–ಕಾಂಗ್ರೆಸ್‌ ಅಂದ್ರೆ ಪೂರ್ವ–ಪಶ್ಚಿಮ ಅಂತ ಅರ್ಥವಾಯಿತು ಎಂದು ಹಾಸ್ಯ ಚಟಾಕಿ ಹಾರಿಸಿದರು.

ಪತ್ನಿಯರ ಹೆಸರಿನಲ್ಲಿ ಪತಿಯರು ದರ್ಬಾರ್ ನಡೆಸುವುದು‌ ಎಲ್ಲೆಡೆ ಕಂಡು ಬರುತ್ತಿದೆ. ಹಾಗಾಗಿ ಗ್ರಾ.ಪಂ. ಚುನಾವಣೆಯಲ್ಲಿ ಗೆಲ್ಲುವ ಮಹಿಳೆಯರು, ಆಡಳಿತವನ್ನು ನೀವೇ ನಡೆಸಿ, ನಿಮ್ಮ ಪತಿಗೆ ಬಿಟ್ಟುಕೊಡಬೇಡಿ ಎಂದು ಕಿವಿಮಾತು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್‌, ಸಂಸದರಾದ ಶಿವಕುಮಾರ ಉದಾಸಿ, ಅಣ್ಣಾಸಾಹೇಬ್‌ ಜೊಲ್ಲೆ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಶಾಸಕ ನೆಹರು ಓಲೇಕಾರ, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್‌, ಮುಖಂಡರಾದ ಲಿಂಗರಾಜ ಪಾಟೀಲ, ಮಾಜಿ ಶಾಸಕ ಶಿವರಾಜ ಸಜ್ಜನ, ಹೇಮಲತಾ ನಾಯ್ಕ, ಶಿವಕುಮಾರ ಸಂಗೂರ ಹಾಗೂ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT