ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಬುತ್ತಿ ಕಟ್ಟುತ್ತ ಸಾಹಿತ್ಯ ಸಮ್ಮೇಳನ ಸವಿಯುತ್ತ..

Last Updated 6 ಜನವರಿ 2023, 21:37 IST
ಅಕ್ಷರ ಗಾತ್ರ

ಹಾವೇರಿ: ಅಮ್ಮಾ... ನಂಗ ಆ ಲೈಟು ಕೊಡಸ...ನೂರು ರುಪಾಯಿಗೆ ಜಾಕೆಟ್‌ ಅಂತ ಒಂದೆರಡು ನೋಡೂನೇನು..
ಯಾರುಟ್ಟು ಬಿಟ್ಟಿದ್ದು ಯಾರಿಗೆ ಗೊತ್ತು..ಚುರುಮುರಿ ತೊಗೊಳ್ಳೂನು.. ದೂಳಿಂದ ಹೆಚ್ಚು ರುಚಿ ಬಂದಿರಬೇಕು.. ಉಸ್ಸಪ‍್ಪ.. ಒಂದು ಸುತ್ತು ಹಾಕೂದ್ರಾಗ ಸಾಕಾಯ್ತು.. ಜೂಸು ಹೀರೂನು ಇಕಾ.. ಐಸು ಬ್ಯಾಡಂತ ಹೇಳು.. ಇನ್ನಾ ಎಷ್ಟು ದೂರ ನಡೀಬೇಕು.. ಸೇಂಗಾ ತೊಗೊಳ್ಳೂನು ತಿನ್ನಾಕ..

ಹತ್ತು ಹಲವು ಕುಟುಂಬಗಳು, ನೂರೆಂಟು ಮಾತುಗಳು. ಸಮ್ಮೇಳನದ ಹೊರ ಅಂಗಳದಲ್ಲಿ ಜಾತ್ರೆಯ ಸ್ವರೂಪ. ಅದೆಷ್ಟು ಬಯಕೆಗಳು, ಅವೆಷ್ಟು ಬೇಡಿಕೆಗಳು... ಕೋಟೆಯ ಹೊರಗೆ ಸೆಲ್ಪಿ, ಫೋಟೊ ಕ್ಲಿಕ್ಕಿಸುವ ಸಂಭ್ರಮ, ಭುವನೇಶ್ವರಿಯ ಬದಿಗೆ ನಿಂತು ನಗೆ ಬೀರುವ ಮಕ್ಕಳು. ಹಲ್ಲಿಲ್ಲದಿದ್ದರೂ ಕಡಲೆಕಾಯಿ ತಿಂದರಾಯಿತು ಎಂಬಂತೆ ಕುದಿಸಿದ ಸೇಂಗಾದಿಂದ ಉಪ್ನೀರು ಹೀರುವ ಹಿರಿಯರು.

ಸಾಂಸ್ಕೃತಿಕ ಕಾರ್ಯಕ್ರಮವನ್ನು ಮುಂದಿನ ಸಾಲಿನಲ್ಲಿಯೇ ಕುಳಿತು ಕಣ್ತುಂಬಿಕೊಳ್ಳಬೇಕೆನ್ನುವವರು, ಸ್ಕ್ರೀನಿದೆ, ಆರಾಮಾಗಿ ಹೋಗಿ ಕೂರಣ ಎನ್ನುವ ಯುವ ಮಕ್ಕಳು, ಸೈಡಿಗೆ ಕುಳಿತರೆ ತಂಗಾಳಿ ಸೂಸಿ, ಚರ್ಮ ಬಿರುಕು ಬಿಡುವುದೆಂಬ ಚಿಂತೆಯಲ್ಲಿ ಪಾಲಕರು, ಮಂದಿ ಭಾಳಾದ್ರ ಥಂಡಿಯಾಗೂದಿಲ್ಲ ಎಂಬ ಸಮಾಧಾನದೊಂದಿಗೆ ಮತ್ತೆ ವೇದಿಕೆಯತ್ತ ಹೆಜ್ಜೆ ಹಾಕಿದರು.

ಊಟಕ್ಕೆ ಹೋಗುವುದೋ.. ಎಂಬ ಚರ್ಚೆ ಒಂದೆಡೆಯಾದರೆ, ಉಂಡು ಬಂದವರು, ಜೀರಾರೈಸು ಉದುರಾಯಿತು, ಉಣ್ಣಲಾಗಲಿಲ್ಲ ಎಂಬ ದೂರು, ಪಲಾವ್‌ ಚೆನ್ನಾಗಿತ್ತು, ಉಪ್ಪಿರಬೇಕಿತ್ತು ಎನ್ನುವವರು ಇನ್ನಷ್ಟು, ಯಾರಿಗೆ ಏನು ಕೊಟ್ಟರೂ ದೂರು ಮುಗಿಯುವುದಿಲ್ಲ ಎಂಬಂತೆ ಸಂಘಟಕರು..

ಗೊಣಗು, ಗುನುಗು, ಮೆಲುಕು ಹಾಕುತ್ತ, ನೆನಪಿನ ಬುತ್ತಿಗೆ ಮೊದಲ ದಿನದ ಸಾಹಿತ್ಯ ಸಮ್ಮೇಳನದ ನೆನಪುಗಳನ್ನು ಕಟ್ಟಿಕೊಂಡು ಹೊರಟರು, ಕನ್ನಡಿಗರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT