ಲಿಂಗಾಯತ ಪ್ರತ್ಯೇಕ ಧರ್ಮ: ಪರ–ವಿರೋಧ

7

ಲಿಂಗಾಯತ ಪ್ರತ್ಯೇಕ ಧರ್ಮ: ಪರ–ವಿರೋಧ

Published:
Updated:

ಹಾವೇರಿ: ಲಿಂಗಾಯತ ಪ್ರತ್ಯೇಕ ಧರ್ಮದ ಪ್ರಸ್ತಾವವನ್ನು ತಿರಸ್ಕರಿಸಿರುವುದಾಗಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರವು ತಿಳಿಸಿದ ಹಿನ್ನೆಲೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಇಲ್ಲಿವೆ.

ಮನುವಾದಿಗಳ ಮುಷ್ಠಿಯಲ್ಲಿ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರವು ಮನುವಾದಿಗಳ ಮುಷ್ಠಿಯಲ್ಲಿದ್ದು, ಪ್ರತ್ಯೇಕ ಲಿಂಗಾಯತ ಧರ್ಮವನ್ನು ತಿರಸ್ಕರಿಸುವ ಮೂಲಕ ಬಸವಣ್ಣವರ ಅನುಯಾಯಿಗಳಿಗೆ ಅನ್ಯಾಯ ಮಾಡಿದೆ. ಬಸವಣ್ಣನವರು ಸಮಾನತೆಯನ್ನು ಸಾರಿದ ಧರ್ಮವನ್ನು ನೀಡಿದ್ದು, ಮನುವಾದಿಗಳಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಗುರು ಬಸವಣ್ಣನವರು 12ನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪಿಸಿದ್ದು, ಇಷ್ಟಲಿಂಗವೇ ಲಾಂಛನವಾಗಿದೆ. ಕೂಡಲಸಂಗಮ ಮತ್ತಿತರ ಪವಿತ್ರ ಕ್ಷೇತ್ರಗಳಿವೆ. ವಚನ ಸಾಹಿತ್ಯದಲ್ಲಿ ಲಿಂಗವಂತ, ಲಿಂಗಾಯತ ಎಂಬ ಉಲ್ಲೇಖಗಳಿವೆ. ಸಂವಿಧಾನ ರಚನೆ ಸಮಯದಲ್ಲಿ ಅಂಬೇಡ್ಕರ್ ನೇತೃತ್ವದ ಸಮಿತಿಯು ಲಿಂಗವಂತ ಭಾರತ ಪ್ರಮುಖ ಧರ್ಮ ಎಂದು ಹೇಳಿದೆ. ಹಿಂದೂ ಕಾನೂನು ಹಾಗೂ ಕಾಯಿದೆಗಳಲ್ಲಿ ಲಿಂಗಾಯತ ಸ್ವತಂತ್ರ ಧರ್ಮ ಎಂದೇ ಹೇಳಲಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಆಸ್ತಿ, ಕ್ರಯ ಪತ್ರದಲ್ಲಿ ಲಿಂಗವಂತ ಧರ್ಮ ಎಂದೇ ಬರೆಯಲಾಗಿದೆ. ಆದರೆ, ಸ್ವಾತಂತ್ರ್ಯದ ಬಳಿಕ ಪಟ್ಟಭದ್ರ ಹಿತಾಸಕ್ತಿಗಳು ಹಿಂದೂ ಲಿಂಗವಂತ ಎಂದು ನಮೂದಿಸಿದರು. ಈಗ ಕೇಂದ್ರ ಕೈಗೊಂಡ ನಿರ್ಧಾರವನ್ನು ಖಂಡಿಸುತ್ತೇವೆ.
–ಇಂದೂಧರ ಯರ್ರೇಶೀಮೆ, ಬಸವ ಬಳಗದ ಸದಸ್ಯರು, ಹಾವೇರಿ

ಪ್ರತ್ಯೇಕ ಧರ್ಮ ತಿರಸ್ಕಾರ: ಸ್ವಾಗತಾರ್ಹ

ಲಿಂಗಾಯತ ಪ್ರತ್ಯೇಕ ಧರ್ಮ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು ಸ್ವಾಗತಾರ್ಹ. ವೀರಶೈವ –ಲಿಂಗಾಯತ ‌ಒಂದೇ ನಾಣ್ಯದ ಎರಡು ಮುಖಗಳು. ಇದರಲ್ಲಿ ಯಾವುದೇ ವ್ಯತ್ಯಾಸವೇ ಇಲ್ಲ. ವೀರಶೈವ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿಲ್ಲ. ಅವರಿಗಿಂತ ಮೊದಲೇ ವೀರಶೈವ ಧರ್ಮ ಇತ್ತು.

ಶೈವದ ಪ್ರಭೇದ ವೀರಶೈವ. ಇದು ಪಕ್ವವಾಗಿ ಅಧ್ಯಾತ್ಮಿಕವಾಗಿ ಮತ್ತು ದರ್ಶನಾತ್ಮಕವಾಗಿ ವೀರಶೈವ ಲಿಂಗಾಯತ ಧರ್ಮ ಆಯ್ತು. ಶಿವನನ್ನು ಉಪಾಸಿಸುವುದು, ವೀರನಂತೆ ದೃಢವಾಗಿ ಅನುಸರಿಸುವುದು ವೀರಶೈವ ಲಿಂಗಾಯತ ಧರ್ಮ. 12ನೇ ಶತಮಾನದಲ್ಲಿ ಬಸವಣ್ಣನವರು ಜಾತ ಮುನಿಗಳಿಂದ ವೀರಶೈವ ಸಂಪ್ರದಾಯದ ಪ್ರಕಾರ ವೇದ, ಉಪನಿಷತ್ತು, ಕಲಿತರು. ನಂತರ ಕಂದಾಚಾರ ಮೌಡ್ಯಗಳನ್ನು ದೂರ ಮಾಡಲು ಮುಂದಾದರು. ಬಸವಣ್ಣನವರನ್ನು ಆರಾಧಿಸುವುದು ತಪ್ಪಲ್ಲ. ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮುಂದಾಗಿದ್ದು ಸರಿಯಲ್ಲ.

ಪ್ರೊ.ಅ.ಸಿ.ಹಿರೇಮಠ, ಸಾಹಿತಿ, ರಾಣೆಬೆನ್ನೂರು

ಮೋದಿ ಮೇಲಿನ ನಂಬಿಕೆ ಹುಸಿಯಾಗಿದೆ

ಪ್ರಧಾನಿ ಮೋದಿ ಅವರ ಬಗ್ಗೆ ಲಿಂಗಾಯತರಿಗೆ ಇದ್ದ ನಂಬಿಕೆ ಹುಸಿಯಾಗಿದೆ. ಅವರ ಬಗ್ಗೆ ಅಪಾರ ನಂಬಿಕೆಯನ್ನಿಟ್ಟು ನಾವು ಸಾಗಿದ್ದೆವು. ಇಂದಿನ ಬೆಳವಣಿಗೆಯಿಂದ ತುಂಬಾ ನೋವಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಗಾರರಿಗೆ ಆಘಾತವಾಗಿದೆ. ಇಡಿ ಜಗತ್ತು ಬಸವಣ್ಣನವರನ್ನು ಒಪ್ಪಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಬಸವಣ್ಣನವರ ಮೇಲೆ ಅಪಾರ ನಂಬಿಕೆಯನ್ನಿಟ್ಟ ಮಾತುಗಳನ್ನಾಡಿದ್ದರು. ಆದರೆ, ಬಸವಣ್ಣ ಪ್ರತಿಪಾದಿಸಿದ ಲಿಂಗಾಯತ ಧರ್ಮವನ್ನು ತಿರಸ್ಕರಿಸಿದ್ದೇವೆ ಎಂದು ಕೋರ್ಟಿಗೆ ಸೂಚಿಸಿದ್ದು ಒಳ್ಳೆಯ ಬೆಳವಣಿಗೆಯಲ್ಲ. ಈ ಬಗ್ಗೆ ಪ್ರಧಾನಿಯವರು ಮತ್ತೆ ಪರಾಮರ್ಶಿಸಬೇಕು.

-ಸುವರ್ಣಮ್ಮ ಪಾಟೀಲ, ಅಧ್ಯಕ್ಷರು, ಬಸವಜ್ಯೋತಿ ಮಹಿಳಾ ಮಂಡಳಿ ರಾಣೆಬೆನ್ನೂರು 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !