ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲಾಮು ಹೊಡೆಯುವ ಸಾಹಿತ್ಯ ಬೇಡ

ಕಿಕ್ಕಿರಿದು ತುಂಬಿದ ಕವಿಗೋಷ್ಠಿ, ಓದು ಹೆಚ್ಚಿಸಿಕೊಳ್ಳಲು ಯುವಕವಿಗಳಿಗೆ ಸಲಹೆ
Last Updated 20 ಜನವರಿ 2019, 14:55 IST
ಅಕ್ಷರ ಗಾತ್ರ

ಬ್ಯಾಡಗಿ (ಸಂತ ಕನಕದಾಸ ಪ್ರಧಾನ ವೇದಿಕೆ):ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ, ದೊಡ್ಡ ಮನೆಯ ಕಟ್ಟಿದ್ದೇವೆ, ಚಂದ್ರನಲ್ಲಿ ಕಾಲಿಟ್ಟಿದ್ದೇವೆ. ಆದರೂ ನಾವು ಬದಲಾಗಿಲ್ಲ... ಇದು ಕಲಿಗಾಲ...

ಪಟ್ಟಣದಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ 11ನೇ ಕನ್ನಡಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ನಡೆದ ಕವಿಗೋಷ್ಠಿಯಲ್ಲಿ ಕವಿ ನಾಗಪ್ಪ ಬೆಂತೂರ ವಾಚಿಸಿದ ಕವನದ ಸಾಲುಗಳು.

ಚನ್ನಬಸಪ್ಪ ಮಾರೇರ, ‘ಶಾಸಕರೇ, ಮಂತ್ರಿಗಳೆ, ಸಂಸದರೇ, ಮುಖ್ಯಮಂತ್ರಿಗಳೆ ಅಣೂರ ಕೆರೆಗೆ ನೀರು ತನ್ನಿ’ ಎಂದು ವಾಚಿಸಿದ ಕವನವು ಮೆಚ್ಚುಗಗೆ ಪಾತ್ರವಾಯಿತು.

ವರದಕ್ಷಿಣೆ ಕುರಿತು ‘ನಾವು ನಿಮಗೇನು ವರದಕ್ಷಿಣೆ ಕೆಳೋದಿಲ್ಲಾ, ಕೊಟ್ಟರೆ ಬೇಡೆಂದು ಹೇಳೋದಿಲ್ಲ, ಅದಕ್ಕೆ ನೀವು ಸಾಲ ಮಾಡಬೇಕಿಲ್ಲ’ ಎಂದು ಯುವ ಕವಿ ಹೇಳಿದ್ದು, ಮನ ಸೆಳೆಯಿತು.

ಎಸ್‌.ಡಿ. ಹಾವನೂರ ವಾಚಿಸಿದ ‘ವಿಧಾನ ಸೌಧ’ ಕವನದಲ್ಲಿ ಕೆಂಗಲ್ ಹನುಮಂತಯ್ಯ ಅವರ ಕಾರ್ಯವನ್ನು ಶ್ಲಾಘಿಸಿದರು.

ರಮ್ಜಾನ್ ಕಿಲ್ಲೇದಾರ ಅವರ ‘ಗಾಂಧಿ ಪೋಸ್ಟ್‌ ಮಾರ್ಟಮ್‌’ ಕವನದ ‘ಗಾಂಧಿ ಎಂದರೆ ಮೂರು ಮಂಗನಾಟ, ಊರೆಲ್ಲ ಹಾರಾಟ’ ಎಂಬ ಸಾಲುಗಳು ಅರ್ಥಗರ್ಭಿತವಾಗಿತ್ತು. ಕಲಬುರ್ಗಿ ಕಗ್ಗೊಲೆ, ಮರೆತ ಮಂತ್ರ, ಗೊತ್ತಾಗಲಿಲ್ಲ ಎಂಬ ಕವನಗಳು ಪ್ರೇಕ್ಷಕರನ್ನು ಗಂಭೀರತೆಗೆ ಸೆಳೆಯಿತು.

ನಾ ಬಾಳ ಒಳ್ಳೆಯ್ಯಾಂವ ದೇಶ ಕಟ್ಟಂವಾ, ಕಕಾ ಬಳ್ಳಿ ನೀ ಬಾರೆ ಹೊಳ್ಳಿ, ಮಗು ಇಲ್ಲದವಳು, ಜೀವನ್ಮುಖಿ, ಹೆತ್ತಕರಳು, ಏಕ್‌ ದಿನ್‌ ಕಾ ಸುಲ್ತಾನ, ಎಲ್ಲಿ ಹೋದವು ಗೆಳತಿ, ಪ್ರಾಣ ಕಿತ್ತರು, ಜಾತಿ ಜಾತಿ ಎಂದು ಬೀಗ ಬೇಡವೋ, ಸತ್ಯ ಸುಳ್ಳಿನ ಬದುಕು ಸಾಕೇ, ನಾಲ್ಕು ಒಂದರ ಅನುಪಾತ, ಅಂದಾಭಿಮಾನ, ಗೊರಕೆ, ನಾ ಕೇಳುವೇ ಸಂಶಯವಾಗಿ, ಸಮಯದ ಮೌಲ್ಯ, ಸಮಯದ ಮೌಲ್ಯ, ನನಗೊಂದು ಹೆಣ್ಣಕೊಡ್ರಿ, ಪ್ರೀತಿಯ ಒಯಾಸಿಸ್‌, ಎಳೆ ಕಂಗಳಿಗೆ ಹಳೆ ಕನ್ನಡಕ, ಸಂಸ್ಕಾರ, ಮೌನ, ಯಾಕಾದ್ರು ಬಂತು 21ನೇ ಶತಮಾನ, ಅಂದು ಇಂದು, ತಪ್ತೋಥಾನ ಶಿರ್ಷಿಕೆಯ ಕವನಗಳನ್ನು ಕವಿಗಳು ವಾಚಿಸಿದರು.

ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಾರುತಿ ಶಿಡ್ಲಾಪುರ ಮಾತನಾಡಿ, ಯುವ ಕವಿಗಳಿಗೆ ಓದಿನ ಕೊರತೆ ಇದೆ. ಕನಿಷ್ಠ ಪಕ್ಷ ತಾವೇ ಬರೆದ ಕವನವನ್ನು ಹತ್ತಾರು ಬಾರಿ ಓದಿದರೆ, ಇನ್ನಷ್ಟು ತಿದ್ದುಪಡಿ ಮಾಡಬಹುದು. ಇದರಿಂದ ಉತ್ತಮ ಕವನ ರಚನೆಯಾಗುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಕವನ ರಚನೆ, ಓದುವ, ತಿದ್ದುಪಡಿ ಮಾಡುವ ತರಬೇತಿ ಕಮ್ಮಟವನ್ನು ಮಾಡಬೇಕು. ಬರವಣಿಗೆಯನ್ನು ಗೌರವಿಸಬೇಕು. ಯಾರಿಗೂ ಸಲಾಮು ಹೊಡೆಯುವ ಸಾಹಿತ್ಯದ ಅಗತ್ಯವಿಲ್ಲ ಎಂದರು.

ಜಿಲ್ಲೆಯಲ್ಲಿ ಸಾವಿರಾರು ಕವಿಗಳು ಇದ್ದಾರೆ. ಆದರೆ, ಕಥೆಗಾರರು, ಕಾದಂಬರಿಗಾರರು ಬೇಕಾಗಿದ್ದಾರೆ. ಕಸಾಪ ಸದಸ್ಯರು ಕೇವಲ ‘ಮತ’ಕ್ಕೆ ಸೀಮಿತಗೊಳ್ಳದೇ, ಸಾಹಿತ್ಯ, ಸಮ್ಮೇಳನಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಜೀವರಾಜ ಛತ್ರದ, ವಿನಾಯಕ ಯಲಗಚ್ಚ, ಗೀತಾ ಸಾಲಿಮಠ, ಸೋಮಲಿಂಗಪ್ಪ ಚಿಕ್ಕಳವರ, ರಂಗಪ್ಪ ಯಲಬುರ್ಗಿ, ಮಹಾಂತೇಶ ಮರಿಗೊಳಪ್ಪನವರ, ಗುರುರಾಜ ಹುಚ್ಚಣ್ಣನವರ, ಚಂದ್ರು ಹವಳಮ್ಮನವರ, ಸಂಧ್ಯಾರಾಣಿ ದೇಶಪಾಂಡೆ, ಅನುರಾಧಾ ಶೇತಸನದಿ, ನನ್ನೇಸಾಬ ರಸ್ಸಿವಾಲೆ, ಬಿ.ಎಸ್‌.ಪಾಟೀಲ, ಸಂಗೀತ ವಣಗೇರಿ, ಸುಮಾ ಹೂಲಿಹಳ್ಳಿ, ಪೃಥ್ವಿರಾಜ ಬೆಟಗೇರಿ, ಎಸ್‌.ಎನ್‌.ಮುಗಳಿ, ಬಸವರಾಜ ಪೂಜಾರ, ಸರೋಜಾ ರಾಯ್ಕರ್‌, ವೆಂಕಟರೆಡ್ಡಿ, ಚನಬಸಪ್ಪ ನಾಡರ, ಉಷಾ ಪಾಟೀಲ, ಸಂತೋಷ ಬಿದರಗಡ್ಡಿ, ವಸಂತ ಕಡತಿ ಮತ್ತಿತರರು ಕವನ ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT