ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC: ಹಾವೇರಿ- ಮಧು, ಪ್ರವೀಣ್ ರಾಜ್ಯಕ್ಕೆ ಪ್ರಥಮ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಾವೇರಿ ಜಿಲ್ಲೆಗೆ ಶೇ 88.1 ಫಲಿತಾಂಶ; ಬಾಲಕಿಯರ ಮೇಲುಗೈ
Last Updated 19 ಮೇ 2022, 14:49 IST
ಅಕ್ಷರ ಗಾತ್ರ

ಹಾವೇರಿ: ಹಾವೇರಿ ನಗರದ ಕಾಳಿದಾಸ ಪ್ರೌಢಶಾಲೆಯ ಮಧು ಶೇತಸನದಿ ಮತ್ತು ಸವಣೂರು ತಾಲ್ಲೂಕಿನ ಹಿರೇಮನ್ನಂಗಿ ಗ್ರಾಮದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಪ್ರವೀಣ ನೀರಲಗಿ ಅವರು 625ಕ್ಕೆ 625 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ, ಜಿಲ್ಲೆಯ ಕೀರ್ತೀಯನ್ನು ಹೆಚ್ಚಿಸಿದ್ದಾರೆ.

ಕಳೆದ ಬಾರಿ ಸ್ನೇಹಾ ಹಾವೇರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಳು. ಈ ಬಾರಿ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಶೇ 100 ಫಲಿತಾಂಶ ಪಡೆದಿರುವುದು ಜಿಲ್ಲೆಯ ಜನರ ಸಂತಸವನ್ನು ಹೆಚ್ಚಿಸಿದೆ. ಅಷ್ಟೇ ಅಲ್ಲ, ಜಿಲ್ಲೆಯ 77 ಶಾಲೆಗಳು ಶೇ 100ರಷ್ಟು ಫಲಿತಾಂಶ ಪಡೆದಿರುವುದು ವಿಶೇಷವಾಗಿದೆ.

ಜಿಲ್ಲೆಯಲ್ಲಿ ಒಟ್ಟು 23,019 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 20,274 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಅದರಲ್ಲಿ 9,519 ಬಾಲಕರು ಹಾಗೂ 10,755 ಬಾಲಕಿಯರು ಸೇರಿ ಶೇ.88.1 ರಷ್ಟು ಫಲಿತಾಂಶ ಲಭಿಸಿದೆ. 11,327 ಬಾಲಕರ ಪೈಕಿ 9519 ಬಾಲಕರು (ಶೇ 84.03) ಉತ್ತೀರ್ಣರಾಗಿದ್ದಾರೆ. 11,892 ಬಾಲಕಿಯರ ಪೈಕಿ 10,755 ಬಾಲಕಿಯರು ತೇರ್ಗಡೆ ಹೊಂದುವ ಮೂಲಕ ಶೇ 91.99 ಫಲಿತಾಂಶ ಪಡೆದಿದ್ದಾರೆ. ಬಾಲಕರಿಗಿಂತ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಶೇ 100 ಫಲಿತಾಂಶ:

ಕನ್ನಡ ಭಾಷೆಯಲ್ಲಿ 1314 ಮಕ್ಕಳು, ಇಂಗ್ಲಿಷ್‌ನಲ್ಲಿ 143 ಮಕ್ಕಳು, ಹಿಂದಿಯಲ್ಲಿ 1472 ಮಕ್ಕಳು, ಸಮಾಜ ವಿಜ್ಞಾನದಲ್ಲಿ 1735 ಮಕ್ಕಳು, ವಿಜ್ಙಾನದಲ್ಲಿ 138 ಮಕ್ಕಳು ಹಾಗೂ ಗಣಿತದಲ್ಲಿ 224 ಮಕ್ಕಳು 100ಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ.

ಸರ್ಕಾರಿ ಶಾಲೆಗಳು– ಶೇ 87.02, ಅನುದಾನಿತ ಶಾಲೆಗಳು– 87.08, ಅನುದಾನರಹಿತ ಶಾಲೆಗಳು– ಶೇ 93.19 ಫಲಿತಾಂಶ ಪಡೆದಿವೆ. ಅನುದಾನರಹಿತ ಶಾಲೆಗಳೇ ಫಲಿತಾಂಶದಲ್ಲಿ ಮುನ್ನಡೆ ಸಾಧಿಸಿವೆ.

‘ನೆರವಾದ ರಸಪ್ರಶ್ನೆ, ಫೋನ್‌–ಇನ್‌’

‘ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ವಿಶೇಷ ಬಹುಮಾನದೊಂದಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಿದ್ದು ಹಾಗೂ ಸಕಾಲದಲ್ಲಿ ಪ್ರಜಾವಾಣಿ ಫೋನ್‌–ಇನ್‌ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಸಮಸ್ಯೆ, ಗೊಂದಲಗಳನ್ನು ಬಗೆಹರಿಸಿದ್ದು ಹೆಚ್ಚಿನ ಫಲಿತಾಂಶಕ್ಕೆ ಕಾರಣವಾಗಿದೆ’ ಎಂದು ಡಿಡಿಪಿಐ ಜಗದೀಶ್ವರ ಬಿ.ಎಸ್‌. ತಿಳಿಸಿದರು.

ಮೂರು ಪೂರ್ವ ಸಿದ್ಧತಾ ಪರೀಕ್ಷೆ ಮಾಡಿ, ಫಲಿತಾಂಶ ಕ್ರೋಢೀಕರಿಸಿ ವಿಶ್ಲೇಷಣೆ ಮಾಡಿ ಫಲಿತಾಂಶ ಕಡಿಮೆ ಬಂದ ಶಾಲೆಗಳ ಕಡೆ ಗಮನಹರಿಸಿದ್ದು. ವಿದ್ಯಾರ್ಥಿಗಳಿಗೆ ಕಲಿಯಲು ಸುಲಭವಾಗಲು ವಿಷಯವಾರು ಸರಳ ಸಾಹಿತ್ಯ ಒದಗಿಸಲಾಗಿತ್ತು.ಶಿಕ್ಷಕರು ಬೆಳಗಿನ ಅವಧಿ ಮತ್ತು ಸಂಜೆ‌ ಒಂದು ಗಂಟೆ ವಿಶೇಷ ತರಗತಿಗಳನ್ನು ತೆಗೆದುಕೊಂಡಿದ್ದರು. ಜಿಲ್ಲಾಡಳಿತದ ಸಹಕಾರ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪರಿಶ್ರಮದ ಅಭೂತಪೂರ್ವ ಫಲಿತಾಂಶ ಸಿಕ್ಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT