ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಗೆ ಆತಂಕ, ಒಳಗೆ ನಿರಾಳ: ಹೆಡ್‌ ಕಾನ್‌ಸ್ಟೆಬಲ್‌ ವೀರನಗೌಡ ಎಸ್‌. ಪಾಟೀಲ

ಗೆದ್ದು ಬಂದವರು
Last Updated 23 ಜುಲೈ 2020, 2:28 IST
ಅಕ್ಷರ ಗಾತ್ರ

ಹಾವೇರಿ: ‘ನಿಜ ಹೇಳಬೇಕು ಅಂದ್ರೆ ಕೊರೊನಾ ಬಗ್ಗೆ ಹೊರಗಡೆ ಇದ್ದಾಗ ಆದ ಭಯ, ಆತಂಕ; ಕೋವಿಡ್‌ ಆಸ್ಪತ್ರೆಯೊಳಗಿದ್ದಾಗ ಇರಲಿಲ್ಲ. ಏಕೆಂದರೆ ಅಲ್ಲಿ ಎಲ್ಲರೂ ಸೋಂಕಿತರೇ ಇದ್ದೆವು. ಸಮಾನ ಮನಸ್ಕರಾಗಿದ್ದೆವು’ ಎಂದು ಕೋವಿಡ್‌ ಗೆದ್ದುಬಂದ ಹಾವೇರಿ ನಗರ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ ವೀರನಗೌಡ ಎಸ್‌. ಪಾಟೀಲ ಮನದಾಳದ ಮಾತನ್ನು ಹಂಚಿಕೊಂಡರು.

ಒಂದೂವರೆ ವರ್ಷದಿಂದ ಜಿಲ್ಲಾ ಆಸ್ಪತ್ರೆಯ ಔಟ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ನನ್ನ ಕಣ್ಣ ಮುಂದೆಯೇ ಕೊರೊನಾ ಸೋಂಕಿತರನ್ನು ಕರೆದುಕೊಂಡು ಹೋಗುತ್ತಿದ್ದರು. ನಾನು ಸದಾ ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡು, ಅಲ್ಲಿಗೆ ಬರುವ ಜನರನ್ನು ನಿಯಂತ್ರಿಸುತ್ತಿದ್ದೆ. ಮುನ್ನೆಚ್ಚರಿಕಾ ಕ್ರಮವಾಗಿ ಮೇ ತಿಂಗಳಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದೆ. ‘ನೆಗೆಟಿವ್‌’ ಬಂದ ಕಾರಣ ನಿರಾಳನಾಗಿದ್ದೆ.

ಜೂನ್‌ 29ರಂದು 2ನೇ ಬಾರಿ ಪರೀಕ್ಷೆ ಮಾಡಿಸಿಕೊಂಡಿದ್ದೆ. ಜುಲೈ 3ರಂದು ವರದಿ ‘ಪಾಸಿಟಿವ್‌‘ ಬಂದಿತು. ಆಸ್ಪತ್ರೆಯಿಂದ ಕರೆ ಬಂದಾಗ, ಆಂಬುಲೆನ್ಸ್‌ ಸೌಲಭ್ಯ ಬೇಡ ಎಂದು ಹೇಳಿ, ಕೋರ್ಟ್‌ ಮುಂಭಾಗದಿಂದ ಅಂತರ ಕಾಯ್ದುಕೊಂಡು ಜಿಲ್ಲಾಸ್ಪತ್ರೆಗೆ ನಡೆದುಕೊಂಡೇ ಹೋದೆ. ಪರಿಚಿತ ಸೋಂಕಿತರು ‘ಯಾಕ್ರೀ ಪೊಲೀಸ್ನೋರೇ ಇಲ್ಯಾಕೆ ಬಂದ್ರಿ’ ಎಂದು ಕಾಲೆಳೆದರು. ಆಸ್ಪತ್ರೆಯ ಸಿಬ್ಬಂದಿ ಗೊತ್ತಿದ್ದ ಕಾರಣ ಮನೆಯ ಸದಸ್ಯರಂತೆ ನೋಡಿಕೊಂಡರು. ಕಾಲಕ್ಕೆ ಸರಿಯಾಗಿ ಒಳ್ಳೆಯ ಊಟ, ಬಿಸಿನೀರು, ಸಂಜೆ ಕಾಫಿ ಕೊಡುತ್ತಿದ್ದರು.

ಆಸ್ಪತ್ರೆಯಲ್ಲಿದ್ದಾಗ ಎಸ್ಪಿ ಸಾಹೇಬರು ಮತ್ತು ಅನೇಕ ಸಹೋದ್ಯೋಗಿಗಳು ಕರೆ ಮಾಡಿ ಧೈರ್ಯ ಹೇಳಿದರು. ಸಂಬಂಧಿಕರು ಕರೆ ಮಾಡಿ ಆತಂಕ ವ್ಯಕ್ತಪಡಿಸಿದರು. ಅವರಿಗೆ ನಾನೇ ಧೈರ್ಯ ಹೇಳಿದೆ. ಜುಲೈ 9ರಂದು ಗುಣಮುಖರಾಗಿ ಮನೆಗೆ ಬಂದೆ. ನಮ್ಮ ಮನೆಯಲ್ಲಿದ್ದ ಪತ್ನಿ, ಮಗ ಮತ್ತು ಮಗಳು ಗಂಟಲು ದ್ರವ ಕೊಟ್ಟಿದ್ದರು. 12 ದಿನಗಳ ನಂತರ ಅಂದ್ರೆ, ಜುಲೈ 18ರಂದು ಎಲ್ಲರ ವರದಿ ‘ಪಾಸಿಟಿವ್‌‘ ಬಂದಿತು. 50 ವರ್ಷದ ನಾನೇ ಗುಣಮುಖನಾಗಿ ಬಂದಿದ್ದೇನೆ. ಹಾಗಾಗಿ ನೀವೆಲ್ಲರೂ ಗುಣಮುಖರಾಗಿ ಬರುತ್ತೀರಾ ಎಂದು ಹಾರೈಸಿ ಕಳುಹಿಸಿದೆ. ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾಕ್ಕೆ ಹೆದರುವ ಅವಶ್ಯವಿಲ್ಲ. ವಯಸ್ಸಾಗಿ ಕಾಯಿಲೆಯಿಂದ ಬಳಲುತ್ತಿದ್ದವರು ಸ್ವಲ್ಪ ಹೆಚ್ಚು ಎಚ್ಚರಿಕೆ ವಹಿಸಬೇಕು ಅಷ್ಟೆ. ಏನೋ ಆಗಾಯ್ತು ಅಂತ ಎದೆ ಒಡೆದುಕೊಳ್ಳದೆ, ಆತ್ಮಸ್ಥೈರ್ಯ ಬೆಳೆಸಿಕೊಳ್ಳಬೇಕು. 18 ವರ್ಷದಿಂದ ನಾನು ನಿತ್ಯ ವಾಕಿಂಗ್‌, ಯೋಗ ಮಾಡುತ್ತೇನೆ. ಹಾಗಾಗಿ ಬಿ.ಪಿ., ಶುಗರ್‌ ಯಾವುದೇ ಸಮಸ್ಯೆಯಿಲ್ಲದೆ ಆರೋಗ್ಯವಾಗಿದ್ದೇನೆ’ ಎಂದು ಮುಗುಳ್ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT