ಶನಿವಾರ, ಸೆಪ್ಟೆಂಬರ್ 18, 2021
21 °C

ಹಾವೇರಿ: 'ಬಾಳೆಹಣ್ಣು' ಗ್ರಾಹಕರಿಗೆ ಸಿಹಿ, ವ್ಯಾಪಾರಿಗಳಿಗೆ ಕಹಿ

ಮಂಜುನಾಥ ಸಿ. ರಾಠೋಡ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ಮಾರುಕಟ್ಟೆಯಲ್ಲಿ ಎಲ್ಲ ಹಣ್ಣುಗಳ ಬೆಲೆ ಸ್ಥಿರವಾಗಿದ್ದು, ಬಾಳೆ ಹಣ್ಣಿನ ಬೆಲೆ ಇಳಿಕೆಯಾಗಿದೆ. ಲಾಲ್‌ಬಹದ್ದೂರ್ ಶಾಸ್ತ್ರಿ ಮಾರುಕಟ್ಟೆಯಲ್ಲಿ ಗುರುವಾರ ಚವಳಿಕಾಯಿ ಹಾಗೂ ಬದನೆಕಾಯಿ ಸೇರಿದಂತೆ ಕೆಲವು ತರಕಾರಿ ಬೆಲೆಯೂ ಇಳಿಕೆಯಾಗಿದೆ.

ಹಿಂದಿನ ವರ್ಷ ಸುರಿದ ಮಳೆ- ಗಾಳಿಗೆ ಬಾಳೆ ಬೆಳೆ ಹಾಳಾಗಿತ್ತು. ಆಗ ಬೇರೆ ಊರುಗಳಿಂದ ಹಣ್ಣು ಆವಕವಾಗುತ್ತಿತ್ತು. ಆಗ ಬೆಲೆ ₹ 35ರಿಂದ 40ರ ದರವಿತ್ತು. ಈಗ ಮಾರುಕಟ್ಟೆಗೆ ಬಾಳೆಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಆವಕವಾಗಿದ್ದು, ಡಜನ್‌ಗೆ ₹25ರಿಂದ ₹30ರವರೆಗೆ ಮಾರಾಟವಾಗುತ್ತಿದೆ ಎನ್ನುತ್ತಾರೆ ವ್ಯಾಪಾರಿಗಳು.

ರೈತರು ಸ್ಥಳೀಯವಾಗಿ ಬೆಳೆದ ಬಾಳೆ ಹಾಗೂ ಬೇರೆ ಬೇರೆ ಜಿಲ್ಲೆಯಿಂದಲೂ ಬಾಳೆಹಣ್ಣು ಮಾರುಕಟ್ಟೆಗೆ ಆವಕವಾಗುತ್ತಿದೆ. ಪಚ್ಚ ಬಾಳೆ ಡಜನ್‌ಗೆ ₹25 ರಿಂದ 30ರಂತೆ ಹಾಗೂ ಮಿಟ್ಲಿ ಬಾಳೆ ₹20 ರಿಂದ 25ರಂತೆ ಮಾರಾಟ ಮಾಡುತ್ತಿದ್ದೇವೆ. ಆದರೂ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಬಾಳೆಹಣ್ಣು ವ್ಯಾಪಾರಿ ಈರಣ್ಣ ಬಡ್ಡಿ ಬೇಸರ ವ್ಯಕ್ತಪಡಿಸಿದರು.

‘ಒಂದು ಬಾಳೆಗೊನೆಗೆ ₹300 ರಿಂದ ₹350 ಬೆಲೆ ಇದೆ. ಆದರೆ, ಗ್ರಾಹಕರು ಗೊನೆಯನ್ನು ₹150ಕ್ಕೆ ಕೇಳುತ್ತಾರೆ. ಹೀಗೆ ಕೇಳುವುದರಿಂದ ನಾವು ಖರೀದಿಸಿದ ಬೆಲೆಯೂ ಸಿಗದಂತಾಗಿದೆ. ದಿನದ ದುಡಿಮೆಯೂ ನಮಗೆ ಆಗುವುದಿಲ್ಲ ಎಂದು ಅವರು ಅಳಲು ತೋಡಿಕೊಂಡರು.

ನಗರದ ಮಾರುಕಟ್ಟೆಗೆ ಬೆಳಗಾವಿಯಿಂದ ತರಕಾರಿ ಆವಕವಾಗುತ್ತಿದೆ. ಅಲ್ಲದೆ, ಸ್ಥಳೀಯ ರೈತರು ಬೆಳೆದ ತರಕಾರಿಯೂ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿದೆ. ಇದರಿಂದ ಬೆಲೆ ಇಳಿಕೆಯಾಗಿದೆ. ಹಿಂದಿನ ವಾರ ₹30 ರಂತೆ ಮಾರಾಟವಾಗುತ್ತಿದ್ದ, ಚವಳಿಕಾಯಿ, ಬದನೆಕಾಯಿ ಬೆಲೆ ಈ ವಾರ ₹20ಕ್ಕೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿ ಮುರ್ನಾಸಾಬ್ ತಿಳಿಸಿದರು.

ಈರುಳ್ಳಿ ಬೆಲೆ ಇಳಿಕೆ: ಹಿಂದಿನ ವಾರ ಕೆ.ಜಿ.ಗೆ ₹40ರಂತೆ ಮಾರಾಟವಾಗುತ್ತಿದ್ದು, ಈರುಳ್ಳಿ ಈ ವಾರ ₹30 ರಂತೆ ಮಾರಾಟವಾಗುತ್ತಿದೆ. ಮುಂದಿನ ದಿನದಲ್ಲಿಯೂ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿ ಇಸ್ಮಾಯಿಲ್‌ ತಿಳಿಸಿದರು.

ಈ ವಾರ ಮಾರುಕಟ್ಟೆಯಲ್ಲಿ ಸೌತೆಕಾಯಿ ಕೆ.ಜಿ.ಗೆ ₹ 20, ಮೆಣಸಿನಕಾಯಿ ₹ 30, ಹೀರೇಕಾಯಿ ₹40, ಬೆಂಡೆಕಾಯಿ ₹ 30, ಹಾಗಲಕಾಯಿ ₹ 50 ಇದೆ. ಅಲ್ಲದೆ, ಕ್ಯಾರೆಟ್‌ ₹ 40, ಬೀಟ್‌ರೂಟ್‌ ₹30, ಬೀನ್ಸ್‌ ₹30 ರಂತೆ ಮಾರಾಟವಾಗುತ್ತಿದೆ’ ಎಂದು ವ್ಯಾಪಾರಿ ತೌಸಿಫ್‌ ಮಾಹಿತಿ ನೀಡಿದರು.

‘ಹಣ್ಣಿನ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದೆ. ಹಿಂದಿನ ವಾರದ ಬೆಲೆಯಲ್ಲಿಯೇ ಮಾರಾಟವಾಗುತ್ತಿದೆ. ಸೇಬು ₹ 100, ದಾಳಿಂಬೆ ₹ 120, ಮೂಸಂಬಿ ₹ 100, ಚಿಕ್ಕು (ಸಪೋಟಾ) ₹50, ದ್ರಾಕ್ಷಿ ₹80 ರಿಂದ ₹60, ಕಪ್ಪುದ್ರಾಕ್ಷಿ ₹120 ಹಾಗೂ ಆರೆಂಜ್‌ ₹60, ಸ್ಟ್ರಾಬೆರಿ ಬಾಕ್ಸ್‌ಗೆ ₹ 60, ಕಿವಿ ಹಣ್ಣು ಬಾಕ್ಸ್‌ಗೆ ₹ 80ರಂತೆ ಮಾರಾಟವಾಗುತ್ತಿದೆ’ ಎಂದು ವ್ಯಾಪಾರಿ ಮಹಮ್ಮದ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು