ತರಕಾರಿ ಬೆಲೆಗಳು ಬಹುತೇಕ ಸ್ಥಿರ, ಬೀದಿಗೆ ಬಂದ ‘ಮೀನು’

7

ತರಕಾರಿ ಬೆಲೆಗಳು ಬಹುತೇಕ ಸ್ಥಿರ, ಬೀದಿಗೆ ಬಂದ ‘ಮೀನು’

Published:
Updated:
Deccan Herald

ಹಾವೇರಿ: ಲಾರಿ ಮುಷ್ಕರದ ಪರಿಣಾಮ ಕಳೆದ ವಾರ ಮಾರುಕಟ್ಟೆಯಲ್ಲಿ ಸ್ವಲ್ಪ ಏರುಗತಿ ಕಂಡಿದ್ದ ತರಕಾರಿ ದರವು ಗುರುವಾರ ಸ್ಥಿರವಾಗಿದ್ದರೆ, ಪರವಾನಗಿ ಹೊಂದದ ಮಾರಾಟ ಮಳಿಗೆಗಳಿಗೆ ನಗರಸಭೆ ಬೀಗ ಜಡಿದ ಪರಿಣಾಮ ಮೀನು–ಮಾಂಸದ ಮಾರುಕಟ್ಟೆಯು ಬೀದಿಗೆ ಬಂದಿದೆ.

ಜಿಲ್ಲಾ ಕೇಂದ್ರವಾದ ಹಾವೇರಿಯಲ್ಲಿ ಗುರುವಾರ ಮಾರುಕಟ್ಟೆಯ ದಿನವಾಗಿದ್ದು, ಗ್ರಾಮೀಣ ಭಾಗದಿಂದಲೂ ರೈತರು, ಗ್ರಾಹಕರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿ ನಡೆಯುತ್ತದೆ. ಆದರೆ, ಈ ಗುರುವಾರ ಉತ್ತರ ಕರ್ನಾಟಕ ಬಂದ್ ಕಾರಣ ಮಾರುಕಟ್ಟೆಯಲ್ಲಿ ದಟ್ಟಣೆ ಇರಲಿಲ್ಲ. ಆದರೂ ವ್ಯಾಪಾರ ಎಂದಿನಂತೆ ನಡೆದಿತ್ತು.

ಕಳೆದ ವಾರ ಲಾರಿ ಮುಷ್ಕರದ ಕಾರಣ ತರಕಾರಿ, ದಿನಸಿಗಳಲ್ಲಿ ಸ್ವಲ್ಪ ಏರುಗತಿ ಕಂಡಿತ್ತು. ಆದರೆ, ಈ ವಾರ ಇಳಿಕೆಯಾಗಿದೆ. ಆಲೂಗಡ್ಡೆ, ಈರುಳ್ಳಿ, ಬೀನ್ಸ್, ಕ್ಯಾರೆಟ್, ಹೀರೆಕಾಯಿ, ಬೆಂಡೆಕಾಯಿ ಮತ್ತಿತರ ತರಕಾರಿಗಳ ದರವು ಈ ವಾರ ಕೆಜಿಯಲ್ಲಿ ಸುಮಾರು ₹10ರಷ್ಟು ಕಡಿಮೆಯಾಗಿದೆ. ತುಂತುರು ಮಳೆ, ಬಂದ್‌ ಬಿಸಿ ಮತ್ತಿತರ ಕಾರಣಕ್ಕೆ ಬೇಡಿಕೆಯೂ ಕಡಿಮೆ ಇದೆ. ಆದರೆ, ಮುಂದಿನ ವಾರದಿಂದ ದರ ಹೆಚ್ಚಳವಾಗಬಹುದು ಎಂದು ವ್ಯಾಪಾರಿ ಎನ್.ಪಿ.ಗೌಳಿ ತಿಳಿಸಿದರು.

ನಗರದಲ್ಲಿ ಮೀನು, ಮಟನ್ ಹಾಗೂ ಮಾಂಸ ಮಾರಾಟದ ಮಳಿಗೆಗಳಿವೆ. ಈ ಮಾರಾಟ ಮಳಿಗೆಗಳ ಹರಾಜುಗೊಂಡಿಲ್ಲ. ಇನ್ನೊಂದೆಡೆ ಮಾರಾಟಗಾರರು ಪರವಾನಗಿ ಪಡೆದಿಲ್ಲ. ಅಲ್ಲದೇ, ದನದ ಮಾಂಸದ ಕಸಾಯಿಖಾನೆಯನ್ನು ನಗರ ಹೊರವಲಯಕ್ಕೆ ವರ್ಗಾಯಿಸಬೇಕು ಎಂಬ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನಗರಸಭೆಯು ಕ್ರಮಕೈಗೊಂಡಿದೆ. ಹೀಗಾಗಿ, ಎಲ್ಲ ಮೀನು ಮತ್ತು ಮಾಂಸ ಮಾರಾಟ ಮಳಿಗೆಗಳಿಗೆ ಬೀಗ ಹಾಕಲಾಗಿದೆ. ಇದನ್ನು ಖಂಡಿಸಿರುವ ಮಾರಾಟಗಾರರು ಗುರುವಾರ ಬೀದಿ ಬದಿಯಲ್ಲೇ ಮೀನು ಮಾರಾಟ ಮಾಡಿದರು.

‘ಮೀನು ಹಾಗೂ ಮಾಂಸವನ್ನು ಇಟ್ಟುಕೊಳ್ಳಲು ಬರುವುದಿಲ್ಲ. ಅದು ಕೆಡುತ್ತದೆ. ಹೀಗಾಗಿ, ಬೆಳಿಗ್ಗೆ ಬಂದ ಮೀನನ್ನು ನಾವು ಅನಿವಾರ್ಯವಾಗಿ ಮಾರಾಟ ಮಾಡಬೇಕಾಗಿದೆ. ಅದಕ್ಕಾಗಿ ಬೀದಿ ಬದಿಯಲ್ಲಿಟ್ಟು ಮಾರುತ್ತಿದ್ದೇವೆ. ಆದರೆ, ಬೆಲೆ ಹೆಚ್ಚಳವಾಗಿಲ್ಲ. ಹಿಂದಿನಂತೆಯೇ ಇದೆ’ ಎಂದು ಮೀನು ವ್ಯಾಪಾರಿಯೊಬ್ಬರು ಪ್ರತಿಕ್ರಿಯಿಸಿದರು. ಕಳೆದ ವಾರ ನೂರಕ್ಕೆ ₹450 ಇದ್ದ ಮೊಟ್ಟೆ ದರವು ಈ ವಾರ ₹435ಕ್ಕೆ ಕುಸಿದಿದೆ.

ಒಟ್ಟಾರೆ, ಲಾರಿ ಮುಷ್ಕರ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಬಂದ್ ಹಾಗೂ ನಗರಸಭೆಯ ಕಾರ್ಯಾಚರಣೆಯು ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿತ್ತು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !