ಮಂಗಳವಾರ, ಮಾರ್ಚ್ 21, 2023
29 °C
ಮೊದಲ ಹೆರಿಗೆಗೆ ₹5 ಸಾವಿರ ಪ್ರೋತ್ಸಾಹಧನ: 2019–20ನೇ ಸಾಲಿನಲ್ಲಿ ಶೇ 95ರಷ್ಟು ಸಾಧನೆ

ಮಾತೃವಂದನಾ: ಹಾವೇರಿ ಜಿಲ್ಲೆಗೆ 8ನೇ ಸ್ಥಾನ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೇಂದ್ರ ಸರ್ಕಾರದ ‘ಪ್ರಧಾನಮಂತ್ರಿ ಮಾತೃವಂದನಾ ಯೋಜನೆ’ (Maternity Benefit Programme) ಅನುಷ್ಠಾನದಲ್ಲಿ 2019–20ನೇ ಸಾಲಿನಲ್ಲಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶೇ 95.19ರಷ್ಟು ಪ್ರಗತಿ ಸಾಧಿಸಿದ್ದು, ರಾಜ್ಯಕ್ಕೆ 8ನೇ ಸ್ಥಾನ ಗಳಿಸಿದೆ. 

ಗುರಿ ಮೀರಿದ ಸಾಧನೆ ಮಾಡಿರುವ ಬೆಂಗಳೂರು ನಗರ (ಶೇ 117), ಧಾರವಾಡ (ಶೇ 113) ಉಡುಪಿ (ಶೇ 107.46) ಜಿಲ್ಲೆಗಳು ಮೊದಲ ಮೂರು ಸ್ಥಾನಗಳನ್ನು ಗಳಿಸಿವೆ. ಕೊಡಗು (ಶೇ 53), ರಾಮನಗರ (ಶೇ 56) ಹಾಗೂ ಚಿಕ್ಕಬಳ್ಳಾಪುರ (ಶೇ 58) ಜಿಲ್ಲೆಗಳು ಕಡೆಯ ಸ್ಥಾನದಲ್ಲಿವೆ. 

2017–18ನೇ ಸಾಲಿನಲ್ಲಿ 4,557 ಫಲಾನುಭವಿಗಳು, 2018–19ನೇ ಸಾಲಿನಲ್ಲಿ 13,087 ಹಾಗೂ 2019–20ನೇ ಸಾಲಿನಲ್ಲಿ 9107 ಫಲಾನುಭವಿಗಳಿಗೆ ಜಿಲ್ಲೆಯಲ್ಲಿ ಮಂಜೂರಾತಿ ನೀಡಲಾಗಿದೆ. 2020ರ ಏಪ್ರಿಲ್‌ನಿಂದ ಆಗಸ್ಟ್‌ ಅಂತ್ಯದವರೆಗೆ ಬ್ಯಾಡಗಿ ತಾಲ್ಲೂಕು (ಶೇ 92) ಹೊರತುಪಡಿಸಿ, ಉಳಿದ ಎಲ್ಲ ತಾಲ್ಲೂಕುಗಳಲ್ಲಿ
ಶೇ 100ರಷ್ಟು ಪ್ರಗತಿ ಸಾಧಿಸಲಾಗಿದೆ.

ಏನಿದು ಮಾತೃವಂದನಾ?

ಕೇಂದ್ರ ಸರ್ಕಾರ 2017–18ನೇ ಸಾಲಿನಲ್ಲಿ ಮಾತೃವಂದನಾ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸಿತು. ಈ ಯೋಜನೆಯಡಿ ಕುಟುಂಬದ ಮೊದಲ ಜೀವಂತ ಹೆರಿಗೆಗೆ ₹5 ಸಾವಿರ ಪ್ರೋತ್ಸಾಹಧನವನ್ನು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿ ಬ್ಯಾಂಕ್‌ ಖಾತೆಗೆ 3 ಕಂತುಗಳಲ್ಲಿ ನೀಡಲಾಗುತ್ತದೆ. ಕೇಂದ್ರ ಸರ್ಕಾರ ಶೇ 60 ಮತ್ತು ರಾಜ್ಯ ಸರ್ಕಾರ ಶೇ 40ರಷ್ಟು ಅನುದಾನವನ್ನು ನೀಡುತ್ತದೆ. 

‘ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತುಪಡಿಸಿ ಎಲ್ಲ ಗರ್ಭಿಣಿ ಮತ್ತು ಬಾಣಂತಿಯರು ಈ ಯೋಜನೆಗೆ ಅರ್ಹ ಫಲಾನುಭವಿಗಳಾಗುತ್ತಾರೆ. ಗರ್ಭಿಣಿ ಎಂದು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿಯಾದ 150 ದಿನಗಳೊಳಗಾಗಿ ಮೊದಲನೇ ಕಂತು ₹1 ಸಾವಿರ, ಗರ್ಭಿಣಿಯಾಗಿ 6 ತಿಂಗಳ ನಂತರ ಎರಡನೇ ಕಂತು ₹2 ಸಾವಿರ, ಮಗು ಜನಿಸಿ ಮೊದಲ ಹಂತದ ಚುಚ್ಚುಮದ್ದು ಮಾಡಿಸಿದ ನಂತರ ಮೂರನೇ ಕಂತು ₹2 ಸಾವಿರ ಹಣವನ್ನು ಖಾತೆಗೆ ಜಮಾ ಮಾಡಲಾಗುತ್ತದೆ’ ಎಂದು ಪಿ.ಎಂ.ಎಂ.ವಿ.ವೈ ಜಿಲ್ಲಾ ಸಂಯೋಜಕ ಯಲ್ಲಪ್ಪ ಬಾಲಣ್ಣನವರ ತಿಳಿಸಿದರು.

ನೋಂದಣಿ ಹೇಗೆ?

ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿಯ ಹೆಸರು ನೋಂದಣಿ ಮಾಡಿಸಬೇಕು. ನಮೂನೆ 1ಎ ಅರ್ಜಿ ಜತೆಗೆ ಸಂಬಂಧಿಸಿದ ದಾಖಲಾತಿಗಳಾದ ಫಲಾನುಭವಿ ಮತ್ತು ಗಂಡನ ಆಧಾರ್‌ ಕಾರ್ಡ್‌ ಪ್ರತಿಗಳು, ಮೊಬೈಲ್‌ ಸಂಖ್ಯೆ, ತಾಯಿ ಕಾರ್ಡ್‌ನ ಪ್ರತಿ, ಗುರುತಿನ ಚೀಟಿ, ಬ್ಯಾಂಕ್‌/ಅಂಚೆ ಕಚೇರಿಯ ಖಾತೆಯ ವಿವರಗಳನ್ನು ಸಲ್ಲಿಸಬೇಕು. 

ಹೆಚ್ಚಿನ ಮಾಹಿತಿಗೆ ಹಾವೇರಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದೂ:08375–232164 ಸಂಪರ್ಕಿಸಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.