ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವಣೂರ | ಕ್ರೀಡಾ ಸಾಧನೆಗೆ ಅಡ್ಡಿಯಾಗದ ವೈಕಲ್ಯ!

ವೀಲ್‌ಚೇರ್‌ ಬ್ಯಾಸ್ಕೆಟ್‌ಬಾಲ್‌, ಟೆನಿಸ್‌, ಪಂಜುಕುಸ್ತಿಯಲ್ಲಿ ಮಿಂಚಿದ ಮೆಹಬೂಬಿ
Last Updated 3 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಸವಣೂರ: ‘ಮನಸ್ಸಿದ್ದರೆ ಮಾರ್ಗ’ ಎಂಬ ಮಾತನ್ನು ದೃಢವಾಗಿ ನಂಬಿದ ಮೆಹಬೂಬಿ ಸೌದಾಗರ, ಅಂಗವೈಕಲ್ಯವನ್ನು ಮೀರಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಮಿಂಚುವ ಮೂಲಕ ಅನನ್ಯ ಕ್ರೀಡಾ ಸಾಧಕಿ ಎನಿಸಿದ್ದಾರೆ.

ಬಾಲ್ಯದಿಂದಲೇ ಅಂಗವೈಕಲ್ಯ ಸಮಸ್ಯೆಗೆ ತುತ್ತಾದ ಮೆಹಬೂಬಿ, ಪಿಯು ವ್ಯಾಸಂಗ ಮುಗಿಸಿದ ನಂತರ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಸದಾ ಹಂಬಲಿಸುತ್ತಿದ್ದರು.

ಬಿಸ್ಮಿಲ್ಲಾ ಮುಲ್ಲಾ ಎಂಬುವವರ ಸಾಧನೆಯ ಕತೆಯನ್ನು ಪತ್ರಿಕೆಯಲ್ಲಿ ಓದಿ, ಸ್ಫೂರ್ತಿ ಪಡೆದರು.ನಂತರದ ದಿನಗಳಲ್ಲಿ ಅವರ ಮಾರ್ಗದರ್ಶನ ಪಡೆದುಕೊಂಡು 2019 ಜನವರಿ 26ರಂದು ಬೆಳಗಾವಿಯಲ್ಲಿ ನಡೆದ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು.

ಪಂಜು ಕುಸ್ತಿಯಲ್ಲಿ ಭಾಗವಹಿಸಬೇಕು ಎನ್ನುವ ಮಹದಾಸೆಯಿಂದ ಹರಿಹರದ ಬ್ರದರ್ ಜಿಮ್‌ನಲ್ಲಿ ತರಬೇತಿ ಪಡೆದುಕೊಂಡು ಛತ್ತೀಸಗಡದಲ್ಲಿ ನಡೆದ ಅಂಗವಿಕಲರ ರಾಷ್ಟ್ರಮಟ್ಟದ ಕ್ರೀಡಾಕೂಟದ ಪಂಜು ಕುಸ್ತಿಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಹಾಗೂ ಉಡುಪಿಯಲ್ಲಿ ನಡೆದ ಕ್ರೀಡಾಕೂಟದಲ್ಲೂ ಸಾಧನೆ ಮೆರೆದಿದ್ದಾರೆ.

ತಮಿಳುನಾಡಿನ ಇರೋಡ್‌ನಲ್ಲಿ ನಡೆದ ಅಂಗವಿಕಲರ ರಾಷ್ಟ್ರಮಟ್ಟದ ಕ್ರೀಡಾಕೂಟದ ಮಹಿಳೆಯರ ವಿಭಾಗದ ಸಿಟಿಂಗ್‌ ವಾಲಿಬಾಲ್ ಕ್ರೀಡೆಯಲ್ಲಿ ತಮ್ಮ ಪ್ರತಿಭೆಯನ್ನು ಸಾಬೀತು ಮಾಡಿ, ನಾಲ್ಕನೇ ಸ್ಥಾನ ತಮ್ಮದಾಗಿಸಿಕೊಂಡರು.

ಈ ಮಧ್ಯೆ, ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟ ಅವರು,2009ರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ, ಪುರಸಭೆ ಸದಸ್ಯರಾಗಿ ಆಯ್ಕೆಯಾಗಿ ಬಿಜೆಪಿಗೆ ಬೆಂಬಲ ಸೂಚಿಸಿ ಅದೇ ಅವಧಿಯಲ್ಲಿ ಪುರಸಭೆ ಅಧ್ಯಕ್ಷರಾದರು. ಪಟ್ಟಣದ ಪ್ರಥಮ ಪ್ರಜೆಯಾಗುವ ಮೂಲಕ ಸಾರ್ವಜನಿಕರ ಸೇವೆಯಲ್ಲಿ ನೆಮ್ಮದಿ ಕಂಡುಕೊಂಡರು.

ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾಕೂಟದ ಮಹಿಳಾ ವಿಭಾಗದ ಪಂಜು ಕುಸ್ತಿಯಲ್ಲಿ ದ್ವಿತೀಯ ಸ್ಥಾನ ಹಾಗೂ ವೀಲ್‌ಚೇರ್‌ ಬ್ಯಾಸ್ಕೆಟ್‌ಬಾಲ್‌ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಸವಣೂರಿನ ಪವರ ಹೌಸ್ ಜಿಮ್‌ನ ಸಚಿನ ಸಣ್ಣಪೂಜಾರ ಅವರಿಂದ ತರಬೇತಿ ಪಡೆದ ಕಾರಣ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಮೆಹಬೂಬಿ ಹರ್ಷ ವ್ಯಕ್ತಪಡಿಸಿದರು.

2019 ಅಕ್ಟೋಬರ್‌ನಲ್ಲಿ ಹೈದರಾಬಾದ್‌ನ ಚಾರ್‌ಮಿನಾರ್‌ನಲ್ಲಿ ನಡೆದ ವೀಲ್‌ಚೇರ್‌ ಟೆನಿಸ್‌ ಕ್ರೀಡೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಮಂಡ್ಯ ಜಿಲ್ಲೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಅಂಗವಿಕಲರ ಕ್ರೀಡಾಕೂಟದ ಸಿಟಿಂಗ್‌ ವಾಲಿಬಾಲ್ ಕ್ರೀಡೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ಜಿಲ್ಲೆಯ ಕೀರ್ತಿಯನ್ನು ಬೆಳಗಿದ್ದಾರೆ.

‘ಅಂಗವಿಕಲರ ಅಂತರರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದೆ. ಆದರೆ, ಪಾಸ್‌ಪೋರ್ಟ್‌ ಇಲ್ಲದ ಕಾರಣ ಕ್ರೀಡೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದೊಂದು ದಿನ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿಯೇ ತೀರುತ್ತೇನೆ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡುತ್ತಾರೆ’ ಮೆಹಬೂಬಿ ಸೌದಾಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT