ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: ₹17.80 ಕೋಟಿ ‘ನರೇಗಾ ಕೂಲಿ’ ಬಾಕಿ

ಒಂದೂವರೆ ತಿಂಗಳಿನಿಂದ ಪಾವತಿಯಾಗದ ಹಣ * ದುಡಿಮೆ ನಂಬಿದ್ದ ಕಾರ್ಮಿಕರ ಸಂಕಷ್ಟ
Published 10 ಆಗಸ್ಟ್ 2024, 15:59 IST
Last Updated 10 ಆಗಸ್ಟ್ 2024, 15:59 IST
ಅಕ್ಷರ ಗಾತ್ರ

ಹಾವೇರಿ: ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ) ಕೆಲಸ ಮಾಡಿದ್ದ ಜಿಲ್ಲೆಯ ಕಾರ್ಮಿಕರಿಗೆ ಒಂದೂವರೆ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಅರ್ಹ ಫಲಾನುಭವಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತ್ವರಿತವಾಗಿ ಕೂಲಿ ಹಣವನ್ನು ಪಾವತಿ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.

ದುಡಿಯುವ ಕೈಗಳಿಗೆ ಕೆಲಸ ನೀಡುವ ಉದ್ದೇಶದಿಂದ ನರೇಗಾ ಆರಂಭಿಸಲಾಗಿದೆ. ಇದೇ ಯೋಜನೆಯಡಿ ಅತಿ ಹೆಚ್ಚು ಉದ್ಯೋಗ ಸೃಜನೆ ಮಾಡಿದ ಜಿಲ್ಲೆಗಳ ಪಟ್ಟಿಯಲ್ಲಿ ಹಾವೇರಿ ಅತ್ಯುತ್ತಮ ಸ್ಥಾನದಲ್ಲಿದೆ. ಆದರೆ, ಇದೀಗ ಹಾವೇರಿಯ ಜಿಲ್ಲೆಯ ಕಾರ್ಮಿಕರಿಗೆ ನೀಡಬೇಕಾದ ₹ 17.80 ಕೋಟಿ ಕೂಲಿ ಬಾಕಿ ಉಳಿದಿದೆ.

ಮಳೆ ಅಭಾವದಿಂದ ರಾಜ್ಯದಲ್ಲಿ ಎದುರಾದ ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರಿಗೆ ನರೇಗಾ ಮೂಲಕ ಹೆಚ್ಚಿನ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಪ್ರಸಕ್ತ ವರ್ಷದ ಆರಂಭದಲ್ಲೂ ಫಲಾನುಭವಿಗಳಿಗೆ ಕೆಲಸ ನೀಡಲಾಗಿತ್ತು.

ಗ್ರಾಮ ಪಂಚಾಯಿತಿಗಳು ಹಾಗೂ ಇತರ ಇಲಾಖೆಗಳ ಸಹಕಾರದಿಂದ ಯೋಜನೆಯಡಿ ಕಾರ್ಮಿಕರಿಗೆ ಕೆಲಸ ಒದಗಿಸಲಾಗಿತ್ತು. ಆದರೆ, ಏಪ್ರಿಲ್‌ವರೆಗೂ ಫಲಾನುಭವಿಗಳ ಖಾತೆಗೆ ನೇರವಾಗಿ ವೇತನ ಪಾವತಿಯಾಗಿದೆ. ನಂತರದ ದಿನಗಳಲ್ಲಿ ವೇತನ ಪಾವತಿ ದಿನಗಳಲ್ಲಿ ವ್ಯತ್ಯಾಸವಾಗಿತ್ತು. ಒಂದೂವರೆ ತಿಂಗಳಿನಿಂದ ಯಾವುದೇ ಫಲಾನುಭವಿಗಳ ಖಾತೆಗಳಿಗೆ ಹಣ ಸಂದಾಯವಾಗಿಲ್ಲವೆಂದು ಕಾರ್ಮಿಕರು ದೂರುತ್ತಿದ್ದಾರೆ.

ಜಿಲ್ಲೆಯ 223 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಹೆಚ್ಚು ಕೆಲಸಗಳನ್ನು ಮಾಡಲಾಗುತ್ತಿದೆ. ಅಗತ್ಯವಿರುವ ಎಲ್ಲರಿಗೂ ಕೆಲಸ ನೀಡಲಾಗುತ್ತಿದೆ. ಈಚಿನ ದಿನಗಳಲ್ಲಿ ಸಮರ್ಪಕವಾಗಿ ವೇತನ ಪಾವತಿಯಾಗದಿದ್ದರಿಂದ, ಕಾರ್ಮಿಕರು ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

‘ನರೇಗಾ ಯೋಜನೆಯಡಿ ಕೆಲಸ ಮಾಡಿದ್ದ ಕಾರ್ಮಿಕರಿಗೆ ಒಂದೂವರೆ ತಿಂಗಳಿನಿಂದ ವೇತನ ಬಂದಿಲ್ಲ. ಶ್ರಾವಣ ಮಾಸ ಆರಂಭವಾಗಿರುವುದರಿಂದ ಹಬ್ಬಗಳು ಬರುತ್ತಿವೆ. ಹಬ್ಬದ ಆಚರಣೆಗೆ ಹಣದ ಅಗತ್ಯವಿದೆ. ವೇತನ ಬಂದರೆ, ಹಬ್ಬ ಮಾಡಬಹುದೆಂದು ಕಾರ್ಮಿಕರು ಅಂದುಕೊಂಡಿದ್ದರು. ಆದರೆ, ಈಗ ಹಣ ಸಂದಾಯವಾಗಿಲ್ಲ. ಕಾರ್ಮಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಮಹಾತ್ಮ ಗಾಂಧೀಜಿ ಕಟ್ಟಡ ಮತ್ತು ಇತರೆ ಕೂಲಿ ಕಾರ್ಮಿಕರ ಸಂಘಟನೆ ಪದಾಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರ ಸರ್ಕಾರವೇ ನರೇಗಾ ಯೋಜನೆ ಜಾರಿಗೆ ತಂದಿದೆ. ಹಣ ಬಿಡುಗಡೆ ಜವಾಬ್ದಾರಿಯೂ ಕೇಂದ್ರ ಸರ್ಕಾರದ ಮೇಲಿದೆ. ವೇತನ ಪಾವತಿ ವಿಳಂಬ ಮಾಡುತ್ತಿರುವುದಕ್ಕೆ ಕಾರಣವೇನು ಎಂಬ ಬಗ್ಗೆಯೂ ಮಾಹಿತಿಯಿಲ್ಲ. ಕೇಂದ್ರ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳು, ಕೂಡಲೇ ಹಣ ಬಿಡುಗಡೆ ಮಾಡಬೇಕು’ ಎಂದು ಅವರು ಹೇಳಿದರು.

ಹಲವರ ವೇತನ ಪಾವತಿಯಲ್ಲೂ ವಿಳಂಬ: ‘ಒಂದೂವರೆ ತಿಂಗಳಿನಿಂದ ಯಾರೊಬ್ಬರಿಗೂ ವೇತನ ಬಂದಿಲ್ಲ. ಜೊತೆಗೆ, ಕೆಲವರಿಗೆ 3–4 ತಿಂಗಳಿನಿಂದ ವೇತನ ಬರದಿರುವುದು ಗೊತ್ತಾಗಿದೆ. ಇಂಥ ವೈಯಕ್ತಿಕ ಪ್ರಕರಣಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದೆ’ ಎಂದು ತಿಳಿಸಿದರು.

‘ಬಾಕಿ ವೇತನ ಬಾಕಿ ಸಂಬಂಧ ಹಾವೇರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಕ್ಷಯ್ ಶ್ರೀಧರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದಿಂದಲೇ ಹಣ ಬಿಡುಗಡೆಯಾಗಿಲ್ಲವೆಂದು ಅವರು ಹೇಳುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

‘ಎಲ್ಲ ಜಿಲ್ಲೆಯಲ್ಲೂ ಕೂಲಿ ಬಾಕಿ’

‘ನರೇಗಾ ಯೋಜನೆಯ ಹಣ ಪಾವತಿ ನಿರ್ವಹಣೆಯನ್ನು ಕೇಂದ್ರ ಸರ್ಕಾರವೇ ನೋಡಿಕೊಳ್ಳುತ್ತಿದೆ. ಹಾವೇರಿ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಎಲ್ಲ ಜಿಲ್ಲೆಯಲ್ಲೂ ಒಂದೂವರೆ ತಿಂಗಳಿನಿಂದ ವೇತನ ಬಾಕಿ ಇದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ದುಡಿಮೆಯ ಹಣ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತದೆ. ಇದರಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲ. ಕೇಂದ್ರ ಸರ್ಕಾರ ಹಣ ಪಾವತಿ ಮಾಡಿದರೆ ಫಲಾನುಭವಿಗಳ ಖಾತೆಗೆ ಹೋಗುತ್ತದೆ. ಕೂಲಿ ಹಾಕಿದ ಬಗ್ಗೆ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ’ ಎಂದರು.

42 ದಿನಗಳಿಂದ ಕೂಲಿ ಬಾಕಿ ಇದೆ. ಈ ವಿಷಯವನ್ನು ಮೇಲಧಿಕಾರಿ ಗಮನಕ್ಕೆ ತರಲಾಗಿದೆ
-ಅಕ್ಷಯ್ ಶ್ರೀಧರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT