ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಿಷನ್‌ ಹಾವಳಿ ತಡೆಯಲು ಆಗ್ರಹ

ಸಮಸ್ಯೆ ಬಗೆಹರಿಸದ ಜನಪ್ರತಿನಿಧಿಗಳು: ರೈತರ ಗಂಭೀರ ಆರೋಪ
Last Updated 19 ಜನವರಿ 2021, 1:44 IST
ಅಕ್ಷರ ಗಾತ್ರ

ರಾಣೆಬೆನ್ನೂರು: ನಗರದ ಎಪಿಎಂಸಿ ಉಪ ಪ್ರಾಂಗಣದ ತರಕಾರಿ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ ದಲಾಲಿ ತೆಗೆದುಕೊಳ್ಳುತ್ತಿ ರುವುದನ್ನು ವಿರೋಧಿಸಿ ರೈತರು ಸೋಮವಾರ ತಹಶೀಲ್ದಾರ ಕಚೇರಿ ಎದುರುಗಡೆ ಪ್ರತಿಭಟನೆ ನಡೆಸಿದರು. ನಂತರ ಉಪತಹಶೀಲ್ದಾರ್ ಮಂಜುನಾಥ ಹಾದಿಮನಿ ಅವರ ಮೂಲಕ ಕೃಷಿ ಸಚಿವ ಬಿ.ಸಿ. ಪಾಟೀಲ ಹಾಗೂ ಸಹಕಾರ ಸಚಿವರಿಗೆ ಮನವಿ ಸಲ್ಲಿಸಿದರು.

ರೈತ ಮುಖಂಡ ಚಳಗೇರಿಯ ಮಲ್ಲಿಕಾರ್ಜುನ ತೆಗ್ಗಿನ ಮಾತನಾಡಿ, ರೈತರು ಕಳೆದ ಐದಾರು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿ ಮತ್ತು ಲಾಕ್‌ಡೌನ್‌ನಿಂದ ಸಾಕಷ್ಟು ಹಾನಿ ಅನುಭವಿಸಿದ್ದಾರೆ. ಅಲ್ಪ– ಸ್ವಲ್ಪ ಮಳೆಗೆ ಬೆಳೆದ ಉತ್ಪನ್ನಗಳನ್ನು ತೆಗೆದುಕೊಂಡು ಎಪಿಎಂಸಿ ಉಪಪ್ರಾಂಗಣಕ್ಕೆ ಹೋದರೆ ತರಕಾರಿ ಮಾರುಕಟ್ಟೆಯಲ್ಲಿ ರೈತರಿಗೆ ದಲ್ಲಾಳಿಗಳು ಕಾನೂನು ಬಾಹಿರವಾಗಿ ಹೆಚ್ಚಿನ ಕಮಿಷನ್‌ ವಸೂಲಿ ಮಾಡುತ್ತಿದ್ದಾರೆ ಎಂದರು.

ಎಪಿಎಂಸಿ ಮಾರುಕಟ್ಟೆ ಅಧಿಕಾರಿ ಪರಮೇಶ ನಾಯಕ ಅವರಿಗೆ ಮನವಿ ಸಲ್ಲಿಸಿದರೂ ಈ ವರೆಗೂ ಏನೂ ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಕಣ್ಣುಚ್ಚಿ ಕುಳಿತಿದ್ದಾರೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಕೃಷಿ ಸಚಿವರು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಬಗ್ಗೆ ಜನ ಪ್ರತಿನಿಧಿಗಳಿಗೆ ತಿಳಿಸಿದರೂ ಏನೂ ಕ್ರಮ ಕೈಗೊಂಡಿಲ್ಲ. ಇದರಲ್ಲಿ ಅಧಿಕಾರಿಗಳು ಸಹ ಭಾಗಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ಜನಪ್ರತಿನಿಧಿಗಳು ರೈತರಿಗೆ ಅಗುವ ಅನ್ಯಾಯವನ್ನು ಸರಿಪಡಿಸಬೇಕು. ಕಮಿಷನ್‌ ಹಾವಳಿ, ತೂಕದಲ್ಲಿ ವ್ಯತ್ಯಾಸ ಮತ್ತು ಹಮಾಲರು ರೈತರ ಉತ್ಪನ್ನಗಳನ್ನು ಸ್ಯಾಂಪಲ್‌ ಅಂತಾ ರೈತರ ಮಾಲನ್ನು ತೆಗೆದುಕೊಳ್ಳುವುದನ್ನು ತಡೆಯಬೇಕು. ಸಂಬಂಧಿಸಿದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ರೈತ ಸಂಘಟನೆಗಳಿಂದ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಈರಣ್ಣ ಹಲಗೇರಿ, ಶಿವಪ್ಪ ನಂದೀಗಾವಿ, ಗಂಗನಗೌಡ ಮುದಿಗೌಡ್ರ, ಎಂ.ಆರ್‌.ಅಂಗಡಿ, ಮಹೇಂದ್ರ ಪಾಟೀಲ, ಪ್ರದೀಪ ಪಾಟೀಲ, ಲೋಕೇಶ ಧೂಳೆಹೊಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT