ಗುರುವಾರ , ಆಗಸ್ಟ್ 18, 2022
26 °C

ಹಾಲು ಉತ್ಪಾದನೆ: ರಾಜ್ಯಕ್ಕೆ 2ನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಭಾರತ ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ರಾಜ್ಯವು ಎರಡನೇ ಸ್ಥಾನದಲ್ಲಿದೆ. ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ಕೃತಕ ಗರ್ಭಧಾರಣೆ ಸಹಾಯಕರು ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣನವರ ತಿಳಿಸಿದರು. 

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರ ಹಾಗೂ ಹಾವೇರಿ ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹಾವೇರಿ ಹಾಗೂ ಸಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಾವೇರಿಯ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಸಭಾಭವನದಲ್ಲಿ ಕೃತಕ ಗರ್ಭಧಾರಣೆ ಸಹಾಯಕರು ಮತ್ತು ಹಾಲು ಪರೀಕ್ಷಕರಿಗೆ ಮಂಗಳವಾರ ಏರ್ಪಡಿಸಿದ್ದ ‘ಅಗೋಚರ ಕೆಚ್ಚಲ ಭಾವು ನಿಯಂತ್ರಣ’ ಕುರಿತು ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. 

ಸಹಕಾರ ಸಂಘಗಳ ಉಪನಿಬಂಧಕ ಅಜ್ಮತ ಉಲ್ಲಾಖಾನ್ ಮಾತನಾಡಿ, ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಖ್ಯಕಾರ್ಯನಿರ್ವಾಹಕರುಗಳು ಹಾಗೂ ಅಧ್ಯಕ್ಷರು ಹಾಗೂ ಸದಸ್ಯರು ಸಹಕಾರ ಸಂಘಗಳ ಕಾಯ್ದೆ ಕಾನೂನಗಳ ಬಗ್ಗೆ ತಿಳಿದುಕೊಂಡು, ಸಂಘಗಳು ಉನ್ನತ ಮಟ್ಟದಲ್ಲಿ ಸದಸ್ಯರಿಗೆ ಸೇವೆಯನ್ನು ಒದಗಿಸಬೇಕು ಎಂದು ಸಲಹೆ ನೀಡಿದರು. 

ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಹಾವೇರಿ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ಮಾತನಾಡಿ, ‘ಹಾವೇರಿ ಜಿಲ್ಲಾ ಸಹಕಾರ ಒಕ್ಕೂಟವು ಅವಿಭಜಿತ ಧಾರವಾಡ ಹಾಲು ಒಕ್ಕೂಟದಿಂದ ಪ್ರತ್ಯೆಕಗೊಂಡಿದ್ದು ಜಿಲ್ಲೆಯ ರೈತರು ಇದರ ಸದುಪಯೋಗ ಪಡೆಯಬೇಕು. ಸಹಕಾರ ಸಂಘಗಳಲ್ಲಿ ಶುದ್ಧ ಹಾಲು ಶೇಖರಣೆಗೆ ಹೆಚ್ಚಿನ ಗಮನಹರಿಸಬೇಕು’ ಎಂದು ಸಂಘಗಳ ಕಾರ್ಯದರ್ಶಿಗಳಿಗೆ ಸಲಹೆ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಶಿವಾನಂದ ಗು. ರಾಮಗೇರಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಬಸವರಾಜ ನೀ ಅರಬಗೊಂಡ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು. 

ಎನ್. ಕೃಷ್ಣಾ ರೆಡ್ಡಿ, ಆರ್.ಎಸ್.ಹೆಗಡೆ ಹಾಗೂ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು. ಯೂನಿಯನ್‍ದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಶರಣಬಸಪ್ಪ ಕಾಟ್ರಳ್ಳಿ ಸ್ವಾಗತಿಸಿ, ವಂದಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು