ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನ–ಜಾನುವಾರು, ಮಣ್ಣಿನ ಪೌಷ್ಟಿಕತೆಗೆ ಸಿರಿಧಾನ್ಯ

ಹಿರೇಕೆರೂರಿನಲ್ಲಿ ಸಾವಯವ ಮತ್ತು ಸಿರಿಧಾನ್ಯ ಮೇಳ ಇಂದು
Last Updated 3 ಜನವರಿ 2019, 19:46 IST
ಅಕ್ಷರ ಗಾತ್ರ

ಹಾವೇರಿ: ಜನ, ಜಾನುವಾರು ಮತ್ತು ಮಣ್ಣಿನ ಪೌಷ್ಟಿಕತೆ ಹಾಗೂ ಆರೋಗ್ಯದ ದೃಷ್ಟಿಯಿಂದ ‘ಸಿರಿಧಾನ್ಯ’ಗಳಿಗೆ ಒತ್ತು ನೀಡಲಾಗುತ್ತಿದ್ದು, ಹಿರೇಕೆರೂರಿನಲ್ಲಿ ಶುಕ್ರವಾರ ನಡೆಯುವ ಕೃಷಿ ಸಮ್ಮೇಳನದಲ್ಲಿ ಪ್ರಾಮುಖ್ಯತೆ ಪಡೆದಿದೆ.

ನವಣೆ, ಊದಲು, ಆರ್ಕ, ಸಾವೆ, ಕೊರಲು, ಸೆಜ್ಜೆ, ಬರಗು, ರಾಗಿ ಮತ್ತು ಬಿಳಿ ಜೋಳವು ಪ್ರಮುಖ ಸಿರಿಧಾನ್ಯಗಳಾಗಿವೆ. ಇವು ಗೋಧಿ ಮತ್ತು ಅಕ್ಕಿಗಿಂತಲೂ ಅತ್ಯಧಿಕ ಪ್ರಮಾಣದಲ್ಲಿ ಪ್ರೊಟೀನ್, ಲವಣಾಂಶ, ನಾರಿನಾಂಶಳನ್ನು ಹೊಂದಿವೆ. ಹೀಗಾಗಿ, ಈ ‘ತೃಣಧಾನ್ಯ’ಗಳನ್ನು ‘ಸಿರಿಧಾನ್ಯ’ ಎಂದು ಕರೆಯುತ್ತಾರೆ.

ಇವು ಹವಾಮಾನ ವೈಪರೀತ್ಯದ ಸಂದರ್ಭ, ಉಷ್ಣತೆ ವ್ಯತ್ಯಾಸ, ನೀರಿನ ಕೊರತೆ, ಫಲವತ್ತತೆ ಕೊರತೆ ಮತ್ತಿತರ ಸಮಸ್ಯೆಗಳನ್ನು ಸಹಿಸಿಕೊಂಡು ಬೆಳೆಯುತ್ತವೆ. ಸಿರಿಧಾನ್ಯಗಳ ಆಹಾರ ಪದ್ಧತಿ ಬಗ್ಗೆ ಯಜುರ್ವೇದದಲ್ಲಿ ಉಲ್ಲೇಖವಿದ್ದು, ದೇಶದಲ್ಲಿ ಅನಾದಿ ಕಾಲದಿಂದಲೂ ಬಳಕೆಯಲ್ಲಿತ್ತು ಎನ್ನುತ್ತಾರೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಅಶೋಕ ಪಾತೇನವರ. ಸಿರಿಧಾನ್ಯಗಳ ಕುರಿತು ಅಧ್ಯಯನ ನಡೆಸಿರುವ ಅವರು, ಪ್ರಬಂಧ ಮಂಡಿಸಲಿದ್ದಾರೆ.

ಆರೋಗ್ಯ: ಬದಲಾಗುತ್ತಿರುವ ಜೀವನ ಶೈಲಿಯಿಂದ ರಕ್ತದೊತ್ತಡ, ಮಧುಮೇಹ, ಹೃದಯ ರೋಗ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇವುಗಳನ್ನು ಹತೋಟಿಯಲ್ಲಡಲು ಈ ‘ಕಿರುಧಾನ್ಯ’ಗಳು ವರದಾನವಾಗಿವೆ. ಹೀಗಾಗಿ, ಬಡವರ ಆಹಾರವಾಗಿದ್ದ ‘ಕಿರು ಧಾನ್ಯ’ವು ಈಗ ಸಿರಿವಂತರ ‘ಸಿರಿಧಾನ್ಯ’ವಾಗಿದೆ.

ಇವು ಗ್ಲುಟೇನ್ ಮುಕ್ತ ಆಹಾರಧಾನ್ಯಗಳಾಗಿವೆ. ದೇಹದಲ್ಲಿನ ಇನ್ಸುಲಿನ್ ಉತ್ಪಾದನಾ ಪ್ರಮಾಣವನ್ನು ಕಾಪಾಡುವುದರಿಂದ ಮಧುಮೇಹಿಗಳಿಗೆ ಉತ್ತಮ ಆಹಾರ. ಕ್ಯಾನ್ಸರ್ ರೋಗ ನಿರೋಧಕತೆಯನ್ನು ಹೆಚ್ಚಿಸುತ್ತವೆ. ಒತ್ತಡ ಹಾಗೂ ಬೊಜ್ಜನ್ನು ನಿಯಂತ್ರಿಸುತ್ತವೆ. ಮಧುಮೇಹ, ರಕ್ತದೊತ್ತಡ, ಹೃದಯಘಾತ ಹಾಗೂ ಬೊಜ್ಜು ಮೈಯುಳ್ಳ ರೋಗಿಗಳಿಗೆ ಉತ್ತಮ ಆಹಾರವಾಗಿದೆ ಇದರಿಂದ ನಿರೋಗಿಯಾಗಿರಲು ಸಾಧ್ಯ ಎಂಬುದು ವೈದ್ಯಕೀಯವಾಗಿ ದೃಢಪಟ್ಟಿದೆ ಎನ್ನುತ್ತಾರೆ ಪಾತೇನವರ.

ಇವು ಅಕ್ಕಿ, ಗೋಧಿಗಿಂತ 4ರಿಂದ 5 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ, ಜೀವಸತ್ವಗಳು, ನಾರಿನಂಶ ಮತ್ತು ಖನಿಜಗಳನ್ನು ಹೊಂದಿವೆ. ಪೋಷಕಾಂಶ ಮತ್ತು ಆರೋಗ್ಯದ ದೃಷ್ಟಿಯಿಂದಲೂ ಹೆಚ್ಚು ಉಪಯುಕ್ತವಾಗಿವೆ ಎನ್ನುತ್ತಾರೆ ಅವರು.

ಭೂಮಿ ಆರೋಗ್ಯ–ಮೇವು:ರಾಸಾಯನಿಕ ಗೊಬ್ಬರಗಳನ್ನು ಕಡಿಮೆ ಅಥವಾ ಬಳಸದೇ ಬೆಳೆಯಬಹುದು. ರೋಗ ಮತ್ತು ಕೀಟಗಳ ಬಾಧೆಯೂ ಕಡಿಮೆಯಿದ್ದು, ಕೀಟ–ರೋಗ ನಾಶಕಗಳ ಅಗತ್ಯವಿಲ್ಲ. ಇದರಿಂದ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣಧರ್ಮಗಳು ಕಾಪಾಡಿ, ಮಣ್ಣಿನ ಆರೋಗ್ಯ ಸುಧಾರಿಸುತ್ತದೆ.

ಇವು ಕಡಿಮೆ ಮಳೆ, ಫಲವತ್ತತೆ ಕೊರತೆ, ಬರಗಾಲ ಪೀಡಿತ ಪ್ರದೇಶದಲ್ಲೂ ಉತ್ತಮ ಇಳುವರಿ ನೀಡುತ್ತದೆ. ಅಲ್ಪಾವಧಿ ಬೆಳೆಗಳಾದ ಇವು ಬಿತ್ತಿದ ಕೇವಲ 60 ರಿಂದ 90 ದಿನಗಳಲ್ಲಿ ಫಸಲು ನೀಡುತ್ತವೆ. ಬಂಜರು ಭೂಮಿಯಲ್ಲೂ ಬೆಳೆಯಬಹುದು.

1.70 ಕೋಟಿ ಹೆಕ್ಟೇರ್ ವ್ಯಾಪ್ತಿ
ದೇಶದಲ್ಲಿ 1.70 ಕೋಟಿ ಹೆಕ್ಟೇರ್ ಹಾಗೂ ರಾಜ್ಯದಲ್ಲಿ 19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಸುಮಾರು 700 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯನ್ನು ಪ್ರೋತ್ಸಾಹದ ಮೂಲಕ ಬೆಳೆಯಲಾಗುತ್ತಿದೆ.

ಸಿರಿಧಾನ್ಯಗಳ ಕುರಿತು ಸಾಹಿತ್ಯದಲ್ಲಿರುವ ಕೆಲವು ಉಲ್ಲೇಖಗಳು
*ನವಣೆ ತಿಂದವರು ಬುದ್ಧಿ ವಂತರಾಗುವರು
*ಕೊರಲು ತಿಂದವರು ಹಕ್ಕಿಯಂತೆ ಹಾರಾಡುವರು
*ಆರ್ಕ ತಿಂದವರು ಮಾರಕ ರೋಗಗಳಿಂದ ಮುಕ್ತರಾಗುವರು
*ಸಾಮೆ ತಿಂದವರು ಆಮೆಯಂತೆ ದೀರ್ಘಾಯುಷಿಯಾಗುವರು
*ಸಜ್ಜೆ ತಿಂದವರು ಸಲಕೆಯಂತೆ ಸಜ್ಜಾಗುವರು
*ಊದಲು ತಿಂದವರು ಉತ್ಸಾಹದ ಕಹಳೆ ಊದುವರು
*ರಾಗಿ ತಿಂದವರು ನಿರೋಗಿಯಾಗುವರು
*ಜೋಳ ತಿಂದವರು ಗೂಳಿಯಂತೆ ಬಲಿಷ್ಠರಾಗುವರು
*ಬರಗು ತಿಂದವರು ಬೆಳಗುವರು ದೇಹ ಕಾಂತಿಯಿಂದ

*
ದೇಶದಲ್ಲಿ ಪ್ರತಿ ವರ್ಷ ಶೇ 40ಷ್ಟು ಆಹಾರಧಾನ್ಯಗಳು ಕೀಟ–ರೋಗ ಬಾಧೆ ಅಥವಾ ‌ಗೋದಾಮುಗಳಲ್ಲಿ ಹಾಳಾಗಿ ನಷ್ಟವಾಗುತ್ತವೆ. ಆದರೆ, ಸಿರಿಧಾನ್ಯಗಳನ್ನು 10ರಿಂದ 12 ವರ್ಷಗಳ ಬಳಿಕವೂ ಉಪಯೋಗಿಸಬಹುದು.
–ಡಾ.ಅಶೋಕ ಪಾತೇನವರ,ಮಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT