ಗುರುವಾರ , ಜನವರಿ 21, 2021
29 °C
ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಕೃಷಿ ಸಚಿವ ವ್ಯಂಗ್ಯ

ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ: ಬಿ.ಸಿ.ಪಾಟೀಲ ವ್ಯಂಗ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪದೇ ಪದೇ ಬಾಂಬ್‌ ಸಿಡಿಸಿದ್ದರಿಂದ, ಶಿರಾ ಮತ್ತು ಆರ್‌.ಆರ್‌.ನಗರ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ನೆಲ ಕಚ್ಚಿತು. ‘ಜಟ್ಟಿ ನೆಲಕ್ಕೆ ಬಿದ್ರು ಮೀಸೆ ಮಣ್ಣಾಗಲಿಲ್ಲ’ ಅನ್ನೋ ಮನೋಭಾವ ಅವರದ್ದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ವ್ಯಂಗ್ಯವಾಡಿದರು. 

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಬಿಜೆಪಿಯ ಕೆಲ ಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ’ ಎಂಬ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ, ಶಿವಕುಮಾರ್‌ ಹೇಳಿಕೆ ಸತ್ಯಕ್ಕೆ ದೂರವಾದದ್ದು. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕಾಂಗ್ರೆಸ್ ಈಗ‌ ಮೀನಮೇಷ ಎಣಿಸುತ್ತಿದೆ. ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ನೆಲಕಚ್ಚಿ ಹೋಗಿದೆ ಎಂದು ಟೀಕಿಸಿದರು. 

ಕಾಂಗ್ರೆಸ್‌ ನಾಯಕನನ್ನು ಮಣಿಸಲು ಬಿಜೆಪಿ ಸಿಬಿಐ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ ಆರೋಪಕ್ಕೆ, ‘ಮಾಡಿದ್ದುಣ್ಣೋ ಮಾರಾಯ’ ಎಂಬಂತೆ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಡಳಿತ ಪಕ್ಷದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದರು. 

ಸುಳ್ಳಾದ ಭವಿಷ್ಯ:

ಕೋಡಿಹಳ್ಳಿ ಶ್ರೀಗಳ ರಾಜಕೀಯ ವಿಪ್ಲವ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಒಮ್ಮೆ ಕೋಡಿಹಳ್ಳಿ ಶ್ರೀಗಳು ನನಗೆ ಭವಿಷ್ಯ ಹೇಳಿದ್ದರು. ‘ನೀವು ರಾಜಕೀಯಕ್ಕೆ ಬರಬೇಡಿ, ನಿಮಗೆ ಭವಿಷ್ಯವಿಲ್ಲ’ ಅಂದಿದ್ರು. ಆದರೆ, ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ, ಈಗ ಸಚಿವನಾಗಿದ್ದೇನೆ. ಹಾಗಾದರೆ ಅವರು ಹೇಳಿದ ಭವಿಷ್ಯ ಏನಾಯ್ತು? ಎಲ್ಲವೂ ಭವಿಷ್ಯದ ಮೇಲೆ ನಿರ್ಧಾರವಾಗುವುದಿಲ್ಲ. ಮಾಟ–ಮಂತ್ರ ಮಾಡಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಜನಸೇವೆ, ಜನಸಂಪರ್ಕದಿಂದ ಚುನಾವಣೆ ಗೆಲ್ಲಬಹುದು ಎಂದು ಹೇಳಿದರು. 

ವಿಜಯನಗರ ಜಿಲ್ಲೆ ಘೋಷಣೆ ಸ್ವಾಗತಾರ್ಹ:

ಎಲ್ಲ ಶಾಸಕರ ಅಭಿಪ್ರಾಯ ಪಡೆದು ಮುಖ್ಯಮಂತ್ರಿಯವರು ವಿಜಯನಗರ ಜಿಲ್ಲೆ ಘೋಷಣೆ ಮಾಡಿದ್ದಾರೆ. ಈ ಹಿಂದೆ, ಧಾರವಾಡ, ರಾಯಚೂರು, ಕಲ್ಬುರ್ಗಿ, ರಾಯಚೂರು ಜಿಲ್ಲೆಗಳು ವಿಭಜನೆಯಾಗಿವೆ. ಆದರೆ, ವಿಜಯನಗರ ಜಿಲ್ಲೆ ರಚನೆಗೆ ಈಗ ವಿರೋಧ ಯಾಕೆ? ಆಡಳಿತಾತ್ಮಕ ದೃಷ್ಟಿಯಿಂದ ಘೋಷಣೆ ಮಾಡಲಾಗಿದೆ. ಇದು ಸ್ವಾಗತಾರ್ಹ ಎಂದು ಸಮರ್ಥಿಸಿಕೊಂಡರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು