ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯಲ್ಲೇ ಕೋವಿಡ್‌ ಲಸಿಕೆ ಪಡೆದ ಕೃಷಿ ಸಚಿವ ಬಿ.ಸಿ.ಪಾಟೀಲ್!

ಮಾರ್ಗಸೂಚಿ ಉಲ್ಲಂಘನೆ ಆರೋಪ: ಟಿಎಚ್ಒಗೆ ನೋಟಿಸ್‌
Last Updated 2 ಮಾರ್ಚ್ 2021, 11:48 IST
ಅಕ್ಷರ ಗಾತ್ರ

ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಹಿರೇಕೆರೂರಿನ ತಮ್ಮ ಮನೆಯಲ್ಲೇ ಮಂಗಳವಾರ ಸರ್ಕಾರಿ ವೈದ್ಯರಿಂದ ಕೋವಿಡ್‌ ಲಸಿಕೆ ಪಡೆಯುವ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

ಕೋವಿಡ್‌ ಮಾರ್ಗಸೂಚಿ ಪ್ರಕಾರ ಜಿಲ್ಲಾಡಳಿತ ನಿಗದಿಪಡಿಸಿದ ಸರ್ಕಾರಿ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳಲ್ಲೇ ಕೋವಿಡ್‌ ಲಸಿಕೆ ಪಡೆಯಬೇಕು. ಆದರೆ, ಸಚಿವ ಬಿ.ಸಿ.ಪಾಟೀಲರು ತಮ್ಮ ಮನೆಗೇ ವೈದ್ಯಕೀಯ ಸಿಬ್ಬಂದಿ ಕರೆಸಿಕೊಂಡು, ಅವರು ಮತ್ತು ಅವರ ಪತ್ನಿ ವನಜಾ ಅವರು ಲಸಿಕೆ ಹಾಕಿಸಿಕೊಂಡಿರುವುದು ಕೋವಿಡ್‌ ಮಾರ್ಗಸೂಚಿಯ ಉಲ್ಲಂಘನೆ ಎಂಬ ಆರೋಪ ಕೇಳಿಬರುತ್ತಿದೆ.

ಮಾರ್ಗಸೂಚಿ ಗೊತ್ತಿರಲಿಲ್ಲ:

‘ಮನೆ ಬಳಿ ಬಹಳಷ್ಟು ಜನರು ಕಾಯುತ್ತಿದ್ದರು. ಇಂದು ಹಲವಾರು ಕಾರ್ಯಕ್ರಮಗಳು ಇದ್ದವು. ಹೀಗಾಗಿ ಮನೆಗೆ ಕೋವಿಡ್‌ ಲಸಿಕೆ ತರಿಸಿಕೊಂಡು ಹಾಕಿಸಿಕೊಂಡೆ. ಕೆಮ್ಮು, ಜ್ವರ ಬಂದಾಗ ವೈದ್ಯರನ್ನು ಕರೆಸಿಕೊಂಡು ಚಿಕಿತ್ಸೆ ಪಡೆಯುವ ರೀತಿಯೇ ಪಡೆದುಕೊಂಡೆ. ಲಸಿಕೆ ಹಾಕಿಸಿಕೊಂಡ ನಂತರ 30 ನಿಮಿಷ ರೆಸ್ಟ್‌ ತೆಗೆದುಕೊಳ್ಳಬೇಕು ಎಂಬುದು ಗೊತ್ತಿತ್ತು. ನನಗೆ ಕೋವಿಡ್‌ ಮಾರ್ಗಸೂಚಿ ಬಗ್ಗೆ ಗೊತ್ತಿರಲಿಲ್ಲ’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದ್ದಾರೆ.

ಟಿ.ಎಚ್‌.ಒ.ಗೆ ನೋಟಿಸ್‌:

‘ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ ಹಿರೇಕೆರೂರು ತಾಲ್ಲೂಕು ವೈದ್ಯಾಧಿಕಾರಿಗೆ ಕಾರಣ ಕೇಳಿ ನೋಟಿಸ್‌ ಕೊಡಲಾಗಿದೆ’ ಎಂದು ಡಿಎಚ್‌ಒ ಡಾ.ರಾಜೇಂದ್ರ ದೊಡ್ಡಮನಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕೊರೊನಾಗೆ ತುತ್ತಾಗಿದ್ದ ಸಚಿವ:

2020ರ ಜುಲೈ ತಿಂಗಳಲ್ಲಿ ಬಿ.ಸಿ.ಪಾಟೀಲ, ಅವರ ಪತ್ನಿ, ಅಳಿಯ ಸೇರಿದಂತೆ ಒಟ್ಟು ಐವರಿಗೆ ಕೊರೊನಾ ಸೋಂಕು ತಗುಲಿತ್ತು. ಬೆಂಗಳೂರಿನ ನಿವಾಸದಲ್ಲಿ ಕ್ವಾರಂಟೈನ್‌ ಆಗಿ, ಚಿಕಿತ್ಸೆ ಪಡೆದು ಗುಣಮಖರಾಗಿದ್ದರು ಎಂಬುದನ್ನು ನೆನಪಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT