ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸ: ಸಚಿವ ಜಗದೀಶ ಶೆಟ್ಟರ್‌

Last Updated 18 ಅಕ್ಟೋಬರ್ 2020, 12:28 IST
ಅಕ್ಷರ ಗಾತ್ರ

ಹಾವೇರಿ: ‘ನಾವು ಸಾಧನೆಯ ಮೇಲೆ ಮತ ಕೇಳುತ್ತಿದ್ದೇವೆ. ಹಾಗಾಗಿವಿಧಾನ ಪರಿಷತ್‌ ಚುನಾವಣೆಯ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಭಾರಿಸಲಿದ್ದಾರೆ’ ಎಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಭೂಸುಧಾರಣೆ, ಎಪಿಎಂಸಿ, ಕಾರ್ಮಿಕ ಕಾಯ್ದೆ ಮುಂತಾದ ಮಸೂದೆಗಳಿಗೆ ತಿದ್ದುಪಡಿ ತರುವ ಮೂಲಕ ದೊಡ್ಡ ಬದಲಾವಣೆಗೆ ನಾಂದಿ ಹಾಡಿದ್ದೇವೆ. ವಿರೋಧ ಮಾಡುವ ಕೆಲಸ ಕಾಂಗ್ರೆಸ್‌ನದ್ದು. ಅವರು ಅಧಿಕಾರದಲ್ಲಿದ್ದಾಗ ಇಂಥ ಮಸೂದೆಗಳನ್ನು ಜಾರಿಗೆ ತರಲಿಲ್ಲ’ ಎಂದು ಟೀಕಿಸಿದರು.

ಸುಗಮ ಆಡಳಿತಕ್ಕೆ ತೊಡಕು: ನಮಗೆ ವಿಧಾನಸಭೆಯಲ್ಲಿ ಬಹುಮತ ಇರುವುದರಿಂದ ಮಸೂದೆಗಳು ಪಾಸ್‌ ಆಗುತ್ತಿವೆ. ಆದರೆ, ವಿಧಾನ ಪರಿಷತ್‌ನಲ್ಲಿ ಉತ್ತಮ ಮಸೂದೆಗಳಿಗೆ ಬೆಂಬಲ ಸಿಗುತ್ತಿಲ್ಲ. ಇದರಿಂದ ಸುಗಮ ಆಡಳಿತಕ್ಕೆ ತೊಡಕಾಗಿದೆ. ಹಾಗಾಗಿ ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಪರಿಷತ್‌ನಲ್ಲೂ ಬಹುಮತಕ್ಕೆ ಹತ್ತಿರ ಹೋಗುವ ವಿಶ್ವಾಸವಿದೆ. ಸಂಕನೂರ ಅವರಿಗೆ 25 ಸಾವಿರ ಅಂತರದ ಗೆಲುವು ಸಿಗಲಿದೆ ಎಂದು ಹೇಳಿದರು.

ಹಾವೇರಿ ಬಿಜೆಪಿ ಭದ್ರಕೋಟೆ: 23 ವಿಧಾನಸಭಾ ಕ್ಷೇತ್ರಗಳಲ್ಲಿ 19ರಲ್ಲಿ ಬಿಜೆಪಿ ಶಾಸಕರು ಹಾಗೂ 4ರಲ್ಲಿ ಕಾಂಗ್ರೆಸ್‌ ಶಾಸಕರು ಇದ್ದಾರೆ. 75 ಸಾವಿರ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. 20 ಮತದಾರರಿಗೆ ಒಬ್ಬ ಕಾರ್ಯಕರ್ತನನ್ನು ನಿಯೋಜಿಸಿದ್ದೇವೆ. ನರೇಂದ್ರ ಮೋದಿ ಮತ್ತು ಬಿಎಸ್‌ವೈ ಅವರ ಉತ್ತಮ ಆಡಳಿತ, ಬಿಜೆಪಿ ಶಾಸಕರು ಮತ್ತು ಮುಖಂಡರ ಪರಿಶ್ರಮ ಗೆಲುವಿಗೆ ಕಾರಣವಾಗಲಿವೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮತದಾರರ ಸಂಖ್ಯೆ ಈ ಬಾರಿ ಹೆಚ್ಚಳವಾಗಿರುವುದು, ಚುನಾವಣೆಯ ಬಗ್ಗೆ ಜನರಿಗೆ ಇರುವ ಆಸಕ್ತಿಯನ್ನು ತೋರಿಸುತ್ತದೆ. 35 ವರ್ಷಗಳಿಂದ ಶಿಕ್ಷಣ ಕ್ಷೇತ್ರದೊಂದಿಗೆ ಸಂಕನೂರ ಒಡನಾಟ ಇಟ್ಟುಕೊಂಡಿದ್ದಾರೆ. ಪಿಯು ಉಪನ್ಯಾಸಕರ ಸಂಘಟನೆ ಮತ್ತು ರಾಜ್ಯದ ಪ್ರತಿ ಜಿಲ್ಲೆಯಲ್ಲೂ ‘ಸೈನ್ಸ್‌ ಕ್ಲಬ್‌’ ತೆರೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಸಂಕನೂರ ಎಸ್‌.ವಿ., ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಪ್ರದೀಪ ಶೆಟ್ಟರ್‌, ಸಿದ್ದರಾಜ ಕಲಕೋಟಿ ಹಾಗೂ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT