ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಕಾಲವಲ್ಲ, ಸಂತ್ರಸ್ತರ ಕಣ್ಣೊರೆಸಬೇಕು: ಬಸವರಾಜ ಬೊಮ್ಮಾಯಿ

ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವ
Last Updated 20 ಆಗಸ್ಟ್ 2019, 20:20 IST
ಅಕ್ಷರ ಗಾತ್ರ

ಹಾವೇರಿ: ‘ರಾಜ್ಯದ ಜನ ಭೀಕರ ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ಸಿಕ್ಕಿದೆ. ಹೀಗಾಗಿ, ಇದು ಸಂಭ್ರಮಿಸುವ ಕಾಲವಲ್ಲ. ಆದರೂ, ಸಂತ್ರಸ್ತರ ಕಣ್ಣೊರೆಸುವ ದೊಡ್ಡ ಜವಾಬ್ದಾರಿ ಸದ್ಯ ನನ್ನ ಹೆಗಲ ಮೇಲಿದೆ. ಬುಧವಾರದಿಂದಲೇ ಆ ಕೆಲಸ ಶುರು ಮಾಡುತ್ತೇನೆ...’

ಸಚಿವರಾಗಿ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದ ಶಿಗ್ಗಾವಿ–ಸವಣೂರು ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರು ತಮ್ಮ ಮುಂದಿರುವ ಸವಾಲನ್ನು ಈ ರೀತಿ ಹೇಳಿಕೊಂಡರು.

‘ಪ್ರಜಾವಾಣಿ’ ಜತೆ ಮಾತನಾಡಿದ ಅವರು,‘ನಮ್ಮ ಜಿಲ್ಲೆಯಲ್ಲೇ ಬಿಜೆಪಿಯ ನಾಲ್ವರು ಶಾಸಕರಿದ್ದೇವೆ. ಎಲ್ಲರ ಸಲಹೆಗಳನ್ನೂ ಪಡೆದು ಮುನ್ನಡೆಯುತ್ತೇನೆ. ಮೂರು ದಿನ ಜಿಲ್ಲಾ ಪ್ರವಾಸ ಮಾಡಿ, ನೆರೆಪೀಡಿತ ಪ್ರದೇಶಗಳ ಪರಿಶೀಲನೆ ನಡೆಸುತ್ತೇನೆ. ಆ ನಂತರ ರಾಜ್ಯದ ಎಲ್ಲ ನೆರೆಪೀಡಿತ ಜಿಲ್ಲೆಗಳಿಗೂ ಹೋಗಲಿದ್ದೇನೆ. ನಿರ್ದಿಷ್ಟ ಜವಾಬ್ದಾರಿ ಏನೆಂಬುದು ಇನ್ನೂ ಗೊತ್ತಾಗಿಲ್ಲ. ಆದರೆ, ಯಾವುದೇ ಹೊಣೆಗಾರಿಕೆ ಕೊಟ್ಟರೂ, ಜನ ನೆನಪಿನಲ್ಲಿ ಇಟ್ಟುಕೊಳ್ಳುವಂತಹ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.‌

‘ಉತ್ತರ ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿ ಮುಖ್ಯ. ಅದಕ್ಕಾಗಿ ಅಧಿಕಾರ ಸಿಕ್ಕಾಗಲೆಲ್ಲಾ ಕೆಲಸ ಮಾಡಿದ್ದೇನೆ. ನಾಳೆಯಿಂದಲೂ ಅದನ್ನೇ ಮಾಡುತ್ತೇನೆ. ಹಿಂದೆ ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ನಡೆಸಿದ್ದ ಕಾರ್ಯವೈಖರಿಗಳು, ತೆಗೆದುಕೊಂಡಿದ್ದ ನಿರ್ಧಾರಗಳು, ಪಕ್ಷ ನಿಷ್ಠೆ, ರಾಜಕಾರಣದಲ್ಲಿನ ಅನುಭವ ಹಾಗೂ ದಕ್ಷತೆಯ ಅಂಶಗಳನ್ನು ಪರಿಗಣಿಸಿ ನಮ್ಮ ನಾಯಕರು ಜವಾಬ್ದಾರಿ ಕೊಟ್ಟಿದ್ದಾರೆ. ಅದನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವಿದೆ’ ಎಂದು ಹೇಳಿದರು.

ಉದ್ಯಮಿ, ರಾಜಕಾರಣಿ: 1960ರಲ್ಲಿ ಜನಿಸಿದ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಎಸ್‌.ಆರ್.ಬೊಮ್ಮಾಯಿ ಹಾಗೂ ಗಂಗಮ್ಮ ದಂಪತಿಯ ಮಗ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಹುಬ್ಬಳ್ಳಿಯಲ್ಲೇ ಕಲಿತ ಅವರು, 1983 ರಿಂದ 1985ರವರೆಗೆ ಪುಣೆಯ ‘ಟೆಲ್ಕೊ’ ಕಂಪನಿಯಲ್ಲಿ ತಾಂತ್ರಿಕ ತರಬೇತಿ ಪಡೆದು ಕೈಗಾರಿಕೋದ್ಯಮಿಯಾದರು.

ಹುಟ್ಟು ಹೋರಾಟಗಾರರಾಗಿದ್ದ ಬೊಮ್ಮಾಯಿ, 1993ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ರಾಜ್ಯ ಯುವಜನತಾ ದಳದ ಐತಿಹಾಸಿಕ ರ‍್ಯಾಲಿಯ ನೇತೃತ್ವ ವಹಿಸಿದ್ದರು. ಜನತಾದಳದ ಕಾರ್ಯದರ್ಶಿಯಾಗಿ, ಜೆ.ಎಚ್.ಪಟೇಲ್ ಅವರ ರಾಜಕೀಯ ಕಾರ್ಯದರ್ಶಿ ಆಗಿ, ಎರಡು ಸಲ ವಿಧಾನ ಪರಿಷತ್ ಸದಸ್ಯರಾಗಿ ಜವಾಬ್ದಾರಿಗಳನ್ನು ನಿಭಾಯಿಸಿದ್ದರು. ಮೂರು ಸಲ ಶಾಸಕರಾಗಿ ಆಯ್ಕೆಯಾಗಿ, ಈಗ 2ನೇ ಸಲ ಸಚಿವರಾಗಿದ್ದಾರೆ.

ಓಲೇಕಾರರಿಗೆ ನಿರಾಸೆ: ‘ಛಲವಾದಿ ಸಮುದಾಯದವರಿಗೆ ಒಂದು ಸ್ಥಾನ ಕೊಡಲೇಬೇಕು. ಹೀಗಾಗಿ, ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ’ ಎಂದು ಹಾವೇರಿ ಕ್ಷೇತ್ರದ ಶಾಸಕ ನೆಹರು ಓಲೇಕಾರ ಹೇಳುತ್ತಲೇ ಬಂದಿದ್ದರು. ಅಲ್ಲದೇ, ‘ಓಲೇಕಾರ ಅವರಿಗೆ ಸಚಿವ ಸ್ಥಾನ ಕೊಡದಿದ್ದರೆ ಬೆಂಗಳೂರು ಚಲೋ ಮಾಡುತ್ತೇವೆ’ ಎಂದು ಅವರ ಬೆಂಬಲಿಗರೂ ಎಚ್ಚರಿಸಿದ್ದರು. ಆದರೆ, ಅದ್ಯಾವುದೂ ಪ್ರಯೋಜನಕ್ಕೆ ಬಂದಿಲ್ಲ. ಬುಧವಾರ ಶಾಸಕರ ಎರಡೂ ಮೊಬೈಲ್‌ಗಳೂ ಸ್ವಿಚ್ಡ್‌ಆಫ್ ಆಗಿದ್ದವು.

ವಯಸ್ಸಾಗಿದೆ. ಬೇಸರದ ಮನಸ್ಸಿಲ್ಲ

ನಾವು ಬೇಸರ ಮಾಡಿಕೊಳ್ಳುವ ಮನಸ್ಸಿನವರಲ್ಲ. ಸಚಿವ ಸ್ಥಾನ ಬೇಕೆಂದು ನಾನಾಗಿಯೇ ಹೋಗಿ ಕೇಳುವುದು ಸರಿಯಲ್ಲ.ನಮ್ಮ ವಯಸ್ಸು, ಕೆಲಸಗಳನ್ನು ಗುರುತಿಸಿ ಪಕ್ಷದ ನಾಯಕರೇ ತೀರ್ಮಾನ ತೆಗೆದುಕೊಳ್ಳಬೇಕು. ನಾನು ಸಚಿವ ಆದ್ರೆ ಸಂತೋಷ, ಆಗದಿದ್ರೆ ಇನ್ನೂ ಸಂತೋಷ ಎಂದು ಎಲ್ಲ ಕಡೆ ಹೇಳಿಕೊಂಡು ಬಂದಿದ್ದೆ. ಈಗಲೂ ಅದೇ ರೀತಿ ಸಂತೋಷವಾಗಿರುತ್ತೇನೆ. ಬಸವರಾಜ ಬೊಮ್ಮಾಯಿಗೆ ಸ್ಥಾನ ಸಿಕ್ಕಿರುವುದು ಖುಷಿ ತಂದಿದೆ.

ಸಿ.ಎಂ.ಉದಾಸಿ‌

ಹಾನಗಲ್ ಶಾಸಕ (ಬಿಜಿಪಿ)

ನಮಗೇ ಸಿಕ್ಕಷ್ಟು ಖುಷಿ ಆಗಿದೆ

17 ಜನರ ಪಟ್ಟಿಯಲ್ಲಿ ನಮ್ಮ ಜಿಲ್ಲೆಯ ಶಾಸಕರ ಇರುತ್ತದೋ? ಇಲ್ಲವೋ ಎಂಬ ತಳಮಳವಿತ್ತು. ಆ ಪಟ್ಟಿಯಲ್ಲಿ ಬೊಮ್ಮಾಯಿ ಅವರ ಹೆಸರು ನೋಡುತ್ತಿದ್ದಂತೆಯೇ ನಿರಾಳನಾದೆ. ಅವರೊಬ್ಬ ಉತ್ಸಾಹಿ ರಾಜಕಾರಣಿ. ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತರಬೇಕೆಂಬ ಕನಸು ಹೊಂದಿರುವವರು. ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು, ನಮಗೇ ಸಿಕ್ಕಷ್ಟು ಖುಷಿಯಾಗಿದೆ.

ವಿರೂಪಾಕ್ಷಪ್ಪ ಬಳ್ಳಾರಿ,

ಬ್ಯಾಡಗಿ ಶಾಸಕ (ಬಿಜೆಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT