ಶಿಗ್ಗಾವಿ: ತಾಲ್ಲೂಕಿನ ಬಂಕಾಪುರ ಪಟ್ಟಣದಲ್ಲಿ ಶುಕ್ರವಾರ ಮೊಹರಂ ಹಬ್ಬದ ಅಂಗವಾಗಿ ಹಿಂದೂ-ಮುಸ್ಲಿಂ ಸಮುದಾಯದ ಜನರು ಒಂದಾಗಿ ಉಡಿ ತುಂಬುವ ವಿಶೇಷ ಕಾರ್ಯಕ್ರಮ ಜರುಗಿತು.
ಪಟ್ಟಣದ ಹಳೆ ನಾಡ ಕಚೇರಿ ಆವರಣದಲ್ಲಿ ನಡೆದ ಹಿಂದೂ-ಮುಸ್ಲಿಂ ಸಮುದಾಯದ ಜನರ ಸಭೆಯಲ್ಲಿ ಸಾಹಿತಿ ಎ.ಕೆ.ಆದವಾನಿಮಠ ಮಾತನಾಡಿ, ‘ಮೊಹರಂ ಹಬ್ಬದ ಅಂಗವಾಗಿ ಹಿಂದೂ–ಮುಸ್ಲಿಂ ಸಮುದಾಯದವರು ಒಗ್ಗಟ್ಟಿಯಿಂದ ಒಂದಾಗುವ ಟಿಪ್ಪು ಸುಲ್ತಾನ್ ಕಾಲದಿಂದ ಆರಂಭವಾದ ಈ ಪರಂಪರೆ ಇಂದಿಗೂ ಪ್ರಸ್ತುತವಾಗಿದೆ. ಅದರಿಂದಾಗಿ ಮೊಹರಂ ಹಬ್ಬವನ್ನು ಎರಡೂ ಸಮುದಾಯದ ಜನರು ಒಂದುಗೂಡಿ ಆಚರಿಸುವ ಪದ್ಧತಿಯನ್ನು ಈವರೆಗೆ ಆಚರಿಸಿಕೊಂಡು ಬರುತ್ತಿದ್ದಾರೆ. ಎಲ್ಲ ಸಮುದಾಯದಲ್ಲಿ ಸಮಾನತೆ, ಸಹಬಾಳ್ವೆ ಹಾಗೂ ಒಗ್ಗಟ್ಟನ್ನು ಪ್ರದರ್ಶಿಸುವ ಮಹತ್ವದ ಹಬ್ಬವಾಗಿದೆ. ನಾವೆಲ್ಲರೂ ಒಂದು ಎಂಬ ಭಾವನೆ ಮೂಡಿಸಲಾಗುತ್ತಿದೆ. ಅದರಿಂದ ಪ್ರತಿ ಕಾರ್ಯಗಳೂ ಸಹಕಾರದಿಂದ ಜರುಗಲು ಸಹಕಾರಿಯಾಗಿವೆ. ಹೀಗಾಗಿ ಬಂಕಾಪುರ ಸೌಹಾರ್ದದ ಸಂಕೇತವಾಗಿದೆ’ ಎಂದರು.
ನಂತರ ಹಿಂದೂ-ಮುಸ್ಲಿಂ ಸಮುದಾಯದ ಮುಖಂಡರು ಹಣ್ಣುಹಂಪಲದ ಬುಟ್ಟಿಗಳೊಂದಿಗೆ ಮೆರವಣಿಗೆ ಮೂಲಕ ಸಂಚರಿಸಿದರು. ಮುಖಂಡರಾದ ರಮೇಶ ಶೆಟ್ಟರ್ ಮತ್ತು ರಾಮಚಂದ್ರಪ್ಪ ಪುಕಾಳೆ ಅವರ ಮನೆಗೆ ಬಂದು ಉಡಿ ತುಂಬುವ ಕಾರ್ಯ, ಎಲೆ, ಅಡಿಕೆ ತಾಂಬೂಲ ಬದಲಾಯಿಸುವದು ಕಾರ್ಯ ನಡೆಯಿತು. ಬೀಬಿ ಫಾತಿಮಾ ಮಸೀದಿ, ಆಶಾರದಲ್ಲಿ ಫಾತಿಮಾಗೆ ಉಡಿ ತುಂಬುವ ಕಾರ್ಯ ಜರುಗಿತು. ನಂತರ ಅಂಜುಮನ್ ಸಮಿಯಿಂದ ಬಾಬ(ಹಣ) ಮತ್ತು ಹಣ್ಣು ಹಂಪಲ ವಿತರಿಸಲಾಯಿತು.
ಅಂಜುಮನ್ ಸಮಿತಿ ಅಧ್ಯಕ್ಷ ಎಂ.ಎಂ. ಖತೀಬ, ಮುಖಂಡರಾದ ಅಬ್ದುಲ್ ರಜಾಕ್ ತಹಶೀಲ್ದಾರ್, ರಾಮಚಂದ್ರಪ್ಪ ಪುಕಾಳೆ, ಸತೀಶ ಆಲದಕಟ್ಟಿ, ಮಂಜು ಕೂಲಿ, ರಾಮಕೃಷ್ಣ ಆಲದಕಟ್ಟಿ, ಎಂ.ಎಂ.ಕಾಕಡ, ಶಿವು ಅಂಗಡಿ, ಗುರು ಚಲವಾದಿ, ಚನ್ನು ದೇಸಾಯಿ, ನೂರಹ್ಮದ ಡೊರಳ್ಳಿ, ಶಿವು ಮಾಗಿ, ಇಸ್ಮಾಯಿಲಸಾಬ ದೊಡ್ಡಮನಿ, ಮುನ್ನಾ ಢಾಣೆಭಾಗ, ಖಾಜಾ ಬಡಿಗೇರ, ಜಿಲಾನಿ ಬಟ್ಟಿಪುರಿ ಸೇರಿದಂತೆ ಅನೇಕ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.