ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಟ್ಟೀಹಳ್ಳಿ | ಮದುವೆ ಊಟ ಸೇವನೆ; ಮೂವರು ಗರ್ಭಿಣಿಯರು ಸೇರಿ 50–60 ಮಂದಿ ತೀವ್ರ ಅಸ್ವಸ್ಥ

Published 24 ಮೇ 2023, 13:11 IST
Last Updated 24 ಮೇ 2023, 13:11 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ತಾಲ್ಲೂಕಿನ ಚಪ್ಪರದಹಳ್ಳಿ ಗ್ರಾಮದಲ್ಲಿ ನಡೆದ ಮದುವೆಯ ಆರತಕ್ಷತೆಯ ಕಾರ್ಯಕ್ರಮದಲ್ಲಿ ಊಟ ಮಾಡಿದ 50-60 ಮಂದಿ ತೀವ್ರ ಅಸ್ವಸ್ಥರಾಗಿ ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಪ್ರಕರಣ ಸೋಮವಾರ ರಾತ್ರಿ ನಡೆದಿದೆ.

ತೀವ್ರ ಅಸ್ವಸ್ಥರಾದ ಇಬ್ಬರು ಪುರುಷರು ಹಾಗೂ ಮೂವರು ಗರ್ಭಿಣಿಯರನ್ನು ಆಂಬುಲೆನ್ಸ್‌ನಲ್ಲಿ ಹೆಚ್ಚಿನ ಚಿಕಿತ್ಸೆಗೆ ಹಿರೇಕೆರೂರ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.

ರಟ್ಟೀಹಳ್ಳಿ ಸಮೀಪದ ಚಪ್ಪರದಹಳ್ಳಿ ಗ್ರಾಮದ ಶಂಕ್ರಪ್ಪ ಹಿತ್ತಲಮನಿ ಅವರ ಮಗಳ ಮದುವೆಯ ಆರತಕ್ಷತೆಯ ಕಾರ್ಯಕ್ರಮದಲ್ಲಿ ಶಾವಗಿ ಕೀರು, ಬುಂದಿ, ಪುಲಾವು, ಅನ್ನ ಸಾರು, ಬಜ್ಜಿ ಸೇವಿಸಿದ ಗ್ರಾಮದ ಜನರು ತಡರಾತ್ರಿಯಾಗುತ್ತಲೇ ವಾಂತಿ, ಭೇದಿ, ಚಳಿಜ್ವರದಿಂದ ಬಳಲು ಪ್ರಾರಂಭಿಸಿದರು. ಕೂಡಲೇ ಗ್ರಾಮಸ್ಥರು ರಟ್ಟೀಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಚಿಕಿತ್ಸೆಗೆ ಸ್ಪಂದಿಸದ ವೈದ್ಯರು: ಆಸ್ಪತ್ರೆಗೆ ಅಸ್ವಸ್ಥರನ್ನು ಕರೆತಂದಾಗ ವೈದ್ಯರು ಇರಲಿಲ್ಲ. ಇಬ್ಬರು ದಾದಿಯರು ಮಾತ್ರ ಇದ್ದು, ವೈದ್ಯರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ವೈದ್ಯರು ಸ್ಥಳೀಯವಾಗಿ ಲಭ್ಯವಿಲ್ಲದಿರುವುದಕ್ಕೆ ರೋಗಿಗಳ ಸಂಬಂಧಿಕರು, ಗ್ರಾಮಸ್ಥರು ಆರೋಗ್ಯ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದ ಪ್ರಸಂಗ ಸಹ ನಡೆಯಿತು.

ಬುಧವಾರ ಬೆಳಿಗ್ಗೆ ಸಹ ವೈದ್ಯರು 11 ಗಂಟೆ ನಂತರ ಆಸ್ಪತ್ರೆಗೆ ಬಂದ ಕಾರಣ ರೋಗಿಗಳ ಸಂಬಂಧಿಕರು ಅವರನ್ನು ಒಳಗೆ ಬಿಡದೆ ಹೊರಗೆ ಇರುವಂತೆ ಘೇರಾವು ಹಾಕಿದರು. ಜಿಲ್ಲಾ ಆರೋಗ್ಯಾಧಿಕಾರಿ ರಾಘವೇಂದ್ರಸ್ವಾಮಿ, ರಟ್ಟೀಹಳ್ಳಿ ಪಿಎಸ್ಐ ಪ್ರವೀಣ ವಾಲೀಕಾರ, ತಾಲ್ಲೂಕು ವೈದ್ಯಾಧಿಕಾರಿ ಝಡ್.ಆರ್. ಮಕಾಂದಾರ ಸ್ಥಳಕ್ಕಾಮಿಸಿ ಪರಿಸ್ಥಿತಿ ಅವಲೋಕಿಸಿದರು.

ಚಪ್ಪರದಹಳ್ಳಿ ಗ್ರಾಮದಲ್ಲಿ ಕಲುಷಿತ ಆಹಾರ ಸೇವನೆಯಿಂದ 50-60 ಮಂದಿ ಆಸ್ಪತ್ರೆಗೆ ಬಂದರೆ, ವೈದ್ಯರು ಇರಲಿಲ್ಲ. ಶುಶ್ರೂಷಕರೇ ಚಿಕಿತ್ಸೆ ನೀಡಿದ್ದಾರೆ. ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಸಹ ಇರಲಿಲ್ಲ. ವೈದ್ಯರು ರೋಗಿಗಳಿಗೆ ಸಮರ್ಪಕವಾಗಿ ಚಿಕಿತ್ಸೆ ನೀಡುತ್ತಿಲ್ಲ. ತಕ್ಷಣ ಅವರನ್ನು ವರ್ಗಾಯಿಸಬೇಕು ಎಂದು ಚಪ್ಪರದಹಳ್ಳಿ ಗ್ರಾಮದ ನಿವಾಸಿ ಲಲಿತಾ ಮೌನೇಶಪ್ಪ ಹೆಡಿಯಾಳ ಆಗ್ರಹಿಸಿದರು.

ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಾ ಬಣಗಾರ ಅವರನ್ನು ವರ್ಗಾಯಿಸುವಂತೆ ಆಗ್ರಹಿಸಿ ಚಪ್ಪರದಹಳ್ಳಿ ಗ್ರಾಮಸ್ಥರು ಪ್ರತಿಭಅನೆ ನಡೆಸಿದರು
ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಪುಷ್ಪಾ ಬಣಗಾರ ಅವರನ್ನು ವರ್ಗಾಯಿಸುವಂತೆ ಆಗ್ರಹಿಸಿ ಚಪ್ಪರದಹಳ್ಳಿ ಗ್ರಾಮಸ್ಥರು ಪ್ರತಿಭಅನೆ ನಡೆಸಿದರು
ಕರ್ತವ್ಯ ಲೋಪ ವೈದ್ಯರಿಗೆ ಕಡ್ಡಾಯ ರಜೆ
‘ರಟ್ಟೀಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಆಡಳಿತ ವೈದ್ಯಾಧಿಕಾರಿ ಡಾ. ಪುಷ್ಪ ಬಣಗಾರ ಅವರ ಮೇಲೆ ಸಾಕಷ್ಟು ಆರೋಪಗಳು ಕೇಳಿಬಂದಿವೆ. ಅವರಿಗೆ ಇಲಾಖೆಯಿಂದ ಹಲವು ಬಾರಿ ನೋಟಿಸ್‌ ನೀಡಿದ್ದೇವೆ. ಆದರೂ ನಡವಳಿಕೆ ಬದಲಿಸಿಕೊಂಡಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿ ತಕ್ಷಣ ಅವರನ್ನು ಕಡ್ಡಾಯದ ರಜೆ ಮೇಲೆ ಕಳಿಸಲಾಗುತ್ತಿದೆ. ಅವರ ಸ್ಥಳಕ್ಕೆ ಬೇರೊಬ್ಬ ವೈದ್ಯಾಧಿಕಾರಿಯನ್ನು ನೇಮಿಸಲಾಗುವುದು’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ರಾಘವೇಂದ್ರಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT