ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ‘ಅಮ್ಮಂದಿರ ನೆಮ್ಮದಿ’

ಕಳೆದ ಮೂರು ವರ್ಷಗಳಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ಹೆರಿಗೆ
Last Updated 11 ಮೇ 2019, 19:46 IST
ಅಕ್ಷರ ಗಾತ್ರ

ಹಾವೇರಿ: ಅವಧಿ ಪೂರ್ವ ಜನನ, ಕಡಿಮೆ ತೂಕದ ಮಗು, ಸೀಳು ತುಟಿಯ ಮಗು, ಅಪೌಷ್ಟಿಕತೆ,ಅಳದೇ ಇರುವ ಮಗು, ಉಸಿರಾಟದ ಸಮಸ್ಯೆ, ನಂಜು ಹೊಂದಿರುವುದು, ಗರ್ಭದಲ್ಲೇ ಮಲ ಸೇವನೆ... ಹೀಗೆ ಹೆರಿಗೆಯಲ್ಲಿ ಕಂಡುಬರುವ ಹಲವು ಸಮಸ್ಯೆಗಳು ಹಾಗೂ ಹೆರಿಗೆ ಕೊಠಡಿಯ ಹಲವು ವಿದ್ಯಾಮಾನಗಳು ‘ಅಮ್ಮಂದಿರ’ ನೆಮ್ಮದಿಗೆ ಭಂಗ ತರುತ್ತವೆ. ತಾಯ್ತನದ ಸಂತೃಪ್ತಿಗೆ ಅಡ್ಡಿಯಾಗುತ್ತಿವೆ.

ಆದರೆ, ಕಳೆದ ಮೂರು ವರ್ಷಗಳಿಂದ ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ‘ಅಮ್ಮ–ಮಗು’ವಿನ ಕಾಳಜಿ ಹೆಚ್ಚುತ್ತಿದ್ದು, ಹೆರಿಗೆ ಪ್ರಮಾಣವೂ ಗಣನೀಯವಾಗಿ ಹೆಚ್ಚಿದೆ. ಆಸ್ಪತ್ರೆಯು ‘ಅಮ್ಮಂದಿರ’ ನೆಚ್ಚಿನ ತಾಣವಾಗುತ್ತಿದೆ.

‘ಹೆರಿಗೆ ಕೇಂದ್ರಕ್ಕೆ ಪುನಶ್ಚೇತನ ಹಾಗೂ ವಿಶೇಷ ನವಜಾತ ಶಿಶು ಆರೈಕೆ ಕೇಂದ್ರ, ಕಾಂಗಾರೂ ತಾಯಿ ಆರೈಕೆ, ಎದೆಹಾಲುಣಿಸುವ ಕೇಂದ್ರಗಳಿಂದ ತಾಯಿ ಮತ್ತು ಶಿಶುವಿನ ಮರಣ ಪ್ರಮಾಣವೂ ಇಳಿಕೆಯಾಗಿದೆ’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಟಿ. ನಾಗರಾಜ ನಾಯಕ.

‘ಕೆಲವು ದಿನಗಳ ಹಿಂದೆ ದಾವಣಗೆರೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ 1.1 ಕೆ.ಜಿ. ತೂಕದ ಮಗು ಜನಿಸಿತ್ತು. ಮಗುವಿನ ರಕ್ಷಣೆ ಬಗ್ಗೆ ಆಸ್ಪತ್ರೆಯವರು ಕೈ ಚೆಲ್ಲಿದ್ದರು. ದಿಕ್ಕೇ ತೋಚದ ಪೋಷಕರು ಇಲ್ಲಿಗೆ ಬಂದಿದ್ದು, ಇಲ್ಲಿನ ವಿಶೇಷ ನವಜಾತ ಶಿಶು ಆರೈಕೆ ಕೇಂದ್ರ (ಎಸ್‌ಎನ್‌ಸಿಯು)ದಲ್ಲಿ ಚೇತರಿಸಿಕೊಳ್ಳುತ್ತಿದೆ. ಇಂತಹ ಹಲವಾರು ಉದಾಹರಣೆಗಳು ಕಳೆದ ಮೂರು ವರ್ಷಗಳಲ್ಲಿವೆ’ ಎನ್ನುತ್ತಾರೆ ಶುಶ್ರೂಷಕಿಯರಾದ ವಿನೋದಾ ಹಾಗೂ ಶಮೀಮ್.

‘ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲೇ ಅತ್ಯಧಿಕ ಹೆರಿಗೆಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿವೆ. ಪ್ರತಿ ನಿತ್ಯ ಸರಾಸರಿ 20 ಹೆರಿಗೆಗಳು ಆಗುತ್ತವೆ. ತಾಯಿ ಹಾಗೂ ಮಗುವಿನ ಮರಣ ಪ್ರಮಾಣವೂ ಇಳಿಕೆಯಾಗಿದೆ. ಅಲ್ಲದೇ, ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಹೆರಿಗೆ ಕೋಣೆಯನ್ನು ಮೇಲ್ದರ್ಜೆಗೆ ಏರಿಸಿ, ಸೌಲಭ್ಯಗಳನ್ನು ಆಧುನೀಕರಣಗೊಳಿಸಲಾಗುವುದು’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ನಾಗರಾಜ ನಾಯಕ ತಿಳಿಸಿದರು.

‘ಹೆರಿಗೆ ಮಾತ್ರವಲ್ಲ, ಆಸ್ಪತ್ರೆಗೆ ಪ್ರತಿನಿತ್ಯ 800ರಿಂದ 900ರಷ್ಟು ಹೊರ–ಒಳರೋಗಿಗಳು ಬರುತ್ತಿದ್ದಾರೆ. ಇತರ ಘಟಕಗಳಲ್ಲೂ ಆರೈಕೆ ಹೆಚ್ಚಿದೆ. ಪುಣ್ಯಕೋಟಿ ಕುಟೀರವು ಬಡವರಿಗೆ ನೆರವಾಗಿದೆ. ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ’ ಎನ್ನುತ್ತಾರೆ ಅವರು.

‘ವಿವಿಧ ಸೌಲಭ್ಯಗಳು ಹಾಗೂ ಶುಚಿತ್ವದ ಕಾಪಾಡುತ್ತಿರುವ ಪರಿಣಾಮ ಆಸ್ಪತ್ರೆಗೆ ಚಿಕಿತ್ಸೆಗಾಗಿ ಶ್ರೀಮಂತರು, ಗಣ್ಯರೂ ಬರುತ್ತಿದ್ದಾರೆ’ ಎನ್ನುತ್ತಾರೆ ಸಿಬ್ಬಂದಿ ರಮೇಶ ಹಾಗೂ ಪ್ರವೀಣ.

ಕಾಂಗರೂ ತಾಯಿ ಆರೈಕೆ

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಬೆಳವಣಿಗೆಗಾಗಿ ‘ಕಾಂಗರೂ ತಾಯಿ ಆರೈಕೆ ಕೇಂದ್ರ’ ಆರಂಭಿಸಲಾಗಿದೆ. ಇಲ್ಲಿ ಬೆಳವಣಿಗೆ, ತಾಪಮಾನ, ಹಾಲು ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿರುವ ಮಗುವಿಗೆ ತಾಯಿ ಎದೆಯ ಬೆಚ್ಚಗಿನ ಅಪ್ಪುಗೆ ನೀಡಲಾಗುತ್ತದೆ.

‘ತಾಪಮಾನ ಕಾಯ್ದುಕೊಳ್ಳುವ ಕಾರಣ ಮಗುವಿನ ಬೆಳವಣಿಗೆ ಹಾಗೂ ತಾಯಿಯಲ್ಲಿ ಎದೆಹಾಲು ಉತ್ಪತ್ತಿ ಸಾಧ್ಯವಾಗುತ್ತದೆ’ ಎನ್ನುತ್ತಾರೆ ವೈದ್ಯರು.

ಎದೆಹಾಲುಣಿಸುವ ಕೇಂದ್ರ

ಎದೆಹಾಲಿಗೆ ಹೆಚ್ಚಿನ ಮಹತ್ವ ನೀಡಿರುವ ಆಸ್ಪತ್ರೆಯು, ಮಕ್ಕಳಿಗೆ ಎದೆಹಾಲುಣಿಸುವ ಸಲುವಾಗಿ ಪ್ರತ್ಯೇಕ ಕೇಂದ್ರವನ್ನು ತೆರೆದಿದೆ. ಇಲ್ಲಿ ತಾಯಂದಿರು ಆರಾಮವಾಗಿ ಎದೆ ಹಾಲುಣಿಸಬಹುದು. ಆಸ್ಪತ್ರೆಗೆ ಬಂದವರು ಮಾತ್ರವಲ್ಲ, ನಮ್ಮ ಸಿಬ್ಬಂದಿಯೂ ಈ ಸೌಲಭ್ಯ ಬಳಸಿಕೊಳ್ಳಬಹುದು ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT