ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆ: ಸಂಹಿತೆಯ ಉಲ್ಲಂಘನೆ, ಅಕ್ರಮಗಳ ಮೇಲೆ ಹದ್ದಿನ ಕಣ್ಣು

ನಿಮ್ಮ ಸುತ್ತಲ ಚುನಾವಣಾ ಅಕ್ರಮಗಳ ಬಗ್ಗೆ ನೀವೇ ಮೊಬೈಲ್ ಮೂಲಕ ದೂರು ನೀಡಬಹುದು: ಡಿಸಿ
Last Updated 26 ಮಾರ್ಚ್ 2019, 11:55 IST
ಅಕ್ಷರ ಗಾತ್ರ

ಹಾವೇರಿ: ಲೋಕಸಭಾ ಚುನಾವಣೆಯಲ್ಲಿ ನೀತಿ ಸಂಹಿತೆಯ ಉಲ್ಲಂಘನೆಯ ಚಟುವಟಿಕೆಗಳು ಹಾಗೂ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಡಲು ಚುನಾವಣಾ ಆಯೋಗವು ಸಿಟಿಜನ್ ಮೊಬೈಲ್ ಆ್ಯಪ್ ‘ಸಿ–ವಿಜಲ್’ ಪರಿಚಯಿಸಿದೆ.

ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಕ್ರಮಗಳು ಕಂಡು ಬಂದರೆ, ಸಿ–ವಿಜಲ್ ಮೂಲಕ ಫೋಟೊ ಅಥವಾ ಎರಡು ನಿಮಿಷದ ವಿಡಿಯೋ ತುಣುಕನ್ನುಅಪ್‌ಲೋಡ್ ಮಾಡಬಹುದು. ತಕ್ಷಣವೇ ಫ್ಲೈಯಿಂಗ್ ಸ್ಕ್ವಾಡ್‌ ತಂಡವು ಸ್ಥಳಕ್ಕೆ ಭೇಟಿ ನೀಡಲಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

ಸಿ–ವಿಜಲ್ ಆ್ಯಪ್ ಬಳಕೆ ಕುರಿತ ಕರಪತ್ರಗಳನ್ನು ಇಲ್ಲಿನ ವಾರ್ತಾಭನವನದಲ್ಲಿ ಸೋಮವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‌‌‌‘ಸಿ–ವಿಜಿಲ್’ ಅನ್ನು ನಿಮ್ಮ ಆ್ಯಂಡ್ರಾಯಿಡ್ ಮೊಬೈಲ್‌ನ ಗೂಗಲ್ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಯಾವುದೇ ಅಕ್ರಮಗಳ ಬಗ್ಗೆ ಫೋಟೊ ಅಥವಾ ಕಿರು ವಿಡಿಯೋವನ್ನು ಎರಡು ಸಾಲು ಮಾಹಿತಿಯೊಂದಿಗೆ ಅಪ್‌ಲೋಡ್ ಮಾಡಬಹುದು. ನೀವು ಅಪ್‌ಲೋಡ್‌ ಮಾಡಿದ ಮಾಹಿತಿಯನ್ನು ಆಧರಿಸಿಕೊಂಡು, ಸಮೀಪದಲ್ಲಿರುವ ಫ್ಲೈಯಿಂಗ್ ಸ್ಕ್ವಾಡ್ ಅಥವಾ ಸೆಕ್ಟರ್ ಅಧಿಕಾರಿಗಳ ತಂಡಕ್ಕೆ ಮಾಹಿತಿ ನೀಡಲಾಗುವುದು. ಅವರು ತಕ್ಷಣವೇ ಸ್ಥಳಕ್ಕೆ ಬಂದು ಕ್ರಮ ವಹಿಸುವರು. ಕೇವಲ 100 ನಿಮಿಷದೊಳಗೆ ನಿಮಗೆ ಸ್ಪಂದನೆ ಸಿಗಲಿದೆ ಎಂದು ಅವರು ವಿವರಿಸಿದರು.

ಸಿ–ವಿಜಲ್ ಅಥವಾ ದೂರವಾಣಿ ಮೂಲಕ ದೂರು ನೀಡಿದವರ ವಿವರವನ್ನು ಗೌಪ್ಯ ಇಡಲಾಗುವುದು. ಯಾವುದೇ ಭಯ ಮತ್ತು ಆತಂಕವಿಲ್ಲದೇ ದೂರು ನೀಡಿ ಎಂದು ತಿಳಿಸಿದರು.

ಚುನಾವಣಾ ಆ್ಯಪ್

ಚುನಾವಣೆ ಸಮಗ್ರ ಮಾಹಿತಿ ಪಡೆಯಲು chunavana ಆ್ಯಪ್ ಅನ್ನು ಪರಿಚಯಿಸಲಾಗಿದೆ. ಇದರಲ್ಲಿ ಚುನಾವಣಾ ಸಮಗ್ರ ಮಾಹಿತಿಯನ್ನು ಪಡೆಯಬಹುದು. ಅಂಗವಿಕಲರಿಗೆ ಉಚಿತ ಸಾರಿಗೆ, ಚುನಾವಣಾ ವೇಳಾಪಟ್ಟಿ, ಅಧಿಕಾರಿಗಳ ವಿವರ, ಜಿ.ಐ.ಎಸ್., ಅಭ್ಯರ್ಥಿಗಳ ಮಾಹಿತಿ, ಮತದಾನ ಕೇಂದ್ರದ ವಿವರ, ಮತದಾನಕ್ಕೆ ಗಾಲಿಕುರ್ಚಿ ಕಾಯ್ದಿರಿಸುವುದು ಹಾಗೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು, ಗುರುತಿನ ಚೀಟಿನ ವಿವರ ಹುಡುಕಲು ಆ್ಯಪ್ ನೆರವಾಗಲಿದೆ ಎಂದು ಹೇಳಿದರು.

ಹೊಸ ಮತದಾರರು

ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ ಸುಮಾರು ಶೇ 1ರಷ್ಟು ಮತದಾರರ ಸಂಖ್ಯೆ ಹೆಚ್ಚಳವಾಗಿದೆ. ನಾಮಪತ್ರ ಸಲ್ಲಿಕೆಯ ಕೊನೆಯ ದಿನಾಂಕದವರೆಗೂ ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಅವಕಾಶವಿದೆ. ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ, ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.

ಮತದಾರರ ಜಾಗೃತಿಗಾಗಿ, ಟ್ವೀಟರ್‌ ಖಾತೆ (DC Haveri, haveri sveep) ಹಾಗೂ ಫೇಸ್‌ಬುಕ್ (DC Haveri, SVEEPHaveri) ಮೂಲಕವು ಜಾಗೃತಿ ಮೂಡಿಸಲಾಗುತ್ತಿದೆ. ಎರಡನೆಯ ಹಂತದಲ್ಲಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT