ಅಲೆಯಲ್ಲಿ ತೇಲಿಬಂದ ಅಭ್ಯರ್ಥಿಗಳು

ಬುಧವಾರ, ಮಾರ್ಚ್ 20, 2019
23 °C
ಪ್ರತಿ ಚುನಾವಣೆಯಲ್ಲೂ ಅಭ್ಯರ್ಥಿಗಳ ಜೊತೆ ಪ್ರಭಾವ ಬೀರಿದ ಇತರ ಅಂಶಗಳು

ಅಲೆಯಲ್ಲಿ ತೇಲಿಬಂದ ಅಭ್ಯರ್ಥಿಗಳು

Published:
Updated:
Prajavani

ಹಾವೇರಿ: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಬೀಸಿದ ಅಲೆಗಳು ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಈ ಬಾರಿಯ ಯಾವ ಅಲೆ? ಯಾರನ್ನು ದಡ ಸೇರಿಸಲಿದೆ? ಎಂಬ ಲೆಕ್ಕಾಚಾರ ಶುರುವಾಗಿದೆ.

ಇಲ್ಲಿನ ಲೋಕಸಭೆಗೆ ನಡೆದ 16 ಚುನಾವಣೆಗಳಲ್ಲೂ ವಿವಿಧ ಅಲೆಗಳ ಪ್ರಭಾವ ಢಾಳಾಗಿವೆ. ಈ ಬಾರಿ ಬಿಜೆಪಿಯಿಂದ ಸಂಸದ ಶಿವಕುಮಾರ್ ಉದಾಸಿ ಸ್ಪರ್ಧೆ ನಿಚ್ಚಳವಾಗಿದ್ದು, ಕಾಂಗ್ರೆಸ್‌ ಅಭ್ಯರ್ಥಿ ಘೋಷಣೆ ಬಳಿಕ ಪ್ರಚಾರ–ಅಪಪ್ರಚಾರಗಳ ‘ಅಲೆ’ಗಳು ಬೀಸುವ ಸಾಧ್ಯತೆ ದಟ್ಟವಾಗಿವೆ.

ಸ್ವಾತಂತ್ರ್ಯ–ಕಾಂಗ್ರೆಸ್:
ಇದು, 1952ರಲ್ಲಿ ಮುಂಬೈ ಕರ್ನಾಟಕದ ಕ್ಷೇತ್ರವಾಗಿದ್ದು, ಕಾಂಗ್ರೆಸ್‌ನಿಂದ ಟಿ.ಆರ್. ನೇಸ್ವಿ ಸ್ಪರ್ಧಿಸಿದ್ದರು. 1956ರಲ್ಲಿ ‘ಧಾರವಾಡ ದಕ್ಷಿಣ’ ಎಂದಾಯಿತು. ಎರಡು ಬಾರಿಯೂ ‘ಸ್ವಾತಂತ್ರ್ಯ’ದ ಅಲೆಯು ದೇಶದೆಲ್ಲೆಡೆ ವ್ಯಾಪಿಸಿದ್ದು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಅವರು ಶೇ 60ರಷ್ಟು ಮತ ಪಡೆದು ಗೆಲುವು ಸಾಧಿಸಿದ್ದರು. 1962ರಲ್ಲಿ ಕಾಂಗ್ರೆಸ್ ಎಫ್.ಎಚ್‌. ಮೊಹಸೀನ್ ಅವರಿಗೆ ಟಿಕೆಟ್ ನೀಡಿತು. ಎರಡು ಬಾರಿಯ ಸಂಸದ ಟಿ.ಆರ್. ನೇಸ್ವಿ ಅವರು ಪಿ.ಎಸ್‌.ಪಿ.ಯಿಂದ ಸ್ಪರ್ಧಿಸಿದ್ದರೂ, ‘ಕಾಂಗ್ರೆಸ್’ ಅಲೆಯ ಮುಂದೆ ಸೋಲುಂಡರು.

ಆ ಬಳಿಕವೂ ‘ಕಾಂಗ್ರೆಸ್’ ಮತಬ್ಯಾಂಕ್ ಅಲೆಯು ಮೊಹಸೀನ್‌ ಅವರಿಗೆ ಸತತ ಐದು ಗೆಲುವುಗಳನ್ನು ನೀಡಿತು. 1984ರಲ್ಲಿ ಜನತಾ ಪಕ್ಷದ ಅಬ್ದುಲ್ ನಜೀರ್ ಸಾಬ್ ಕೂಡಾ ‘ಕಾಂಗ್ರೆಸ್‌’ ಅಲೆಯ ಮುಂದೆ ಸೋಲುಂಡರು. ಆಗ ಕಾಂಗ್ರೆಸ್‌ನ ಅಜೀಜ್ ಸೇಟ್ ಗೆದ್ದಿದ್ದರು. 1991ರ ತನಕ ‘ಸ್ವಾತಂತ್ರ್ಯ ಹೋರಾಟದ ಕಾಂಗ್ರೆಸ್’ ಅಲೆ ಮುಂದುವರಿದಿತ್ತು. ಇದರ ಜೊತೆ ಅಲ್ಪಸಂಖ್ಯಾತ ಮತಗಳೂ ಕಾಂಗ್ರೆಸ್ ಮತಬ್ಯಾಂಕ್‌ ಆಗಿತ್ತು.

ಎನ್‌ಡಿಎ ಅಲೆ:
1991ರಲ್ಲಿ ಬಿಜೆಪಿಯು ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯಿತು. ಬಿ.ಜಿ.ಬಣಕಾರ ಪ್ರಬಲ ಸ್ಪರ್ಧೆ ನೀಡಿದ್ದರು. ಅಟಲ್– ಅಡ್ವಾಣಿ  ಪ್ರಭಾವವು ದೇಶದೆಲ್ಲೆಡೆ ಬೀಸಲು ಆರಂಭವಾಗಿತ್ತು. ಜನತಾದಳದ ಡಾ. ಬಿ.ಜಿ.ಪಾಟೀಲ ನಡುವೆ ಮತ ಹಂಚಿಹೋದ ಕಾರಣ ಬಣಕಾರ ಸೋಲುಂಡರು. ಕಾಂಗ್ರೆಸ್‌ನ ಬಿ.ಎಂ. ಮುಜಾಹೀದ್ ಗೆಲುವು ಕಂಡಿದ್ದರು.

1996ರಲ್ಲೂ ಮತವಿಭಜನೆಯ ಪ್ರಸಂಗವು ಪುನರಾವರ್ತಿಸಿದ್ದು, ಲಿಂಗಾಯತ ಮತಗಳೇ ಹೆಚ್ಚಿದ್ದವು. ಜನತಾದಳದ ಬಿ.ಎಂ. ಮೆಣಸಿನಕಾಯಿ ಹಾಗೂ ಬಿಜೆಪಿಯ ಬಿ.ಜಿ. ಬಣಕಾರ ಮಧ್ಯೆ ಮತ ವಿಭಜನೆಗೊಂಡು, ಕಾಂಗ್ರೆಸ್‌ನ ಐ.ಜಿ. ಸನದಿ 9,609 ಮತಗಳಿಂದ ಗೆಲುವು ಕಂಡರು.

1998ರಲ್ಲಿ ‘ಅಟಲ್ ಬಿಹಾರಿ ವಾಜಪೇಯಿ’ ಅಲೆ ಬೀಸಿತ್ತು. ಎನ್‌ಡಿಎಯ ಅಂಗ ಪಕ್ಷವಾಗಿದ್ದ ಲೋಕಶಕ್ತಿಗೆ ಬಿಜೆಪಿಯು ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿತು. ಲೋಕಶಕ್ತಿಯಿಂದ ಸ್ಪರ್ಧಿಸಿದ್ದ ಬಿ.ಎಂ. ಮೆಣಸಿನಕಾಯಿ ಬಿಜೆಪಿ ಬೆಂಬಲದೊಂದಿಗೆ ಗೆದ್ದು ಬಂದರು.

1999ರಲ್ಲಿ ಚಿತ್ರಣ ಮತ್ತೆ ಬದಲಾಯಿತು. ಎನ್‌ಡಿಎ ಜೊತೆ ಗುರುತಿಸಿಕೊಂಡಿದ್ದ ಜೆಡಿಯುಗೆ ಬಿಜೆಪಿಯು ಸ್ಥಾನ ಬಿಟ್ಟುಕೊಟ್ಟಿತ್ತು. ಆದರೆ, ಜೆಡಿಎಸ್ ನಾಯಕರ ಒತ್ತಾಸೆಗೆ ಮಣಿದು ಬಸವರಾಜ ಶಿವಣ್ಣನವರ ಕಣಕ್ಕಿಳಿದರು. 96,943 ಮತಗಳನ್ನು ಪಡೆದರು. ಇದರಿಂದಾಗಿ ಜೆಡಿಯುನ ಮೆಣಸಿನಕಾಯಿ 39,198 ಮತಗಳಿಂದ ಸೋತರು. ಅಟಲ್ ಅಲೆ ಇದ್ದರೂ, ಕಾಂಗ್ರೆಸ್‌ ಗೆಲುವಿನಲ್ಲಿ ಶಿವಣ್ಣನವರ ನಿರ್ಣಾಯಕರಾಗಿದ್ದರು. 

ಅರಳಿದ ಕಮಲ:

2004ರ ಹೊತ್ತಿಗೆ ಬಿಜೆಪಿಯ ‘ಹಿಂದುತ್ವ ಹಾಗೂ ಲಿಂಗಾಯತ ಅಲೆ’ ಪ್ರಭಾವ ಬೀರಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್ ಮತಬ್ಯಾಂಕ್‌ಗಳ ವಿರೋಧವಾಗಿ ಇತ್ತ ಮತಗಳು ಕ್ರೋಢೀಕರಣಗೊಂಡವು. ಚೊಚ್ಚಲ ಬಾರಿಗೆ ಕ್ಷೇತ್ರದಲ್ಲಿ ಕಮಲ ಅರಳಿತು.

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಗೊಂಡಿದ್ದು, 2009ರ ಚುನಾವಣೆಯಲ್ಲಿ ಶಿವಕುಮಾರ್ ಉದಾಸಿ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಬಿ.ಎಸ್.ಯಡಿಯೂರಪ್ಪ ಪ್ರಭಾವ ಹಾಗೂ ಕಾಂಗ್ರೆಸ್‌ನ ಮತಬ್ಯಾಂಕ್ ವಿರೋಧಿ ರಾಜಕೀಯವು ವರವಾಯಿತು. 2014ರಲ್ಲಿ ನರೇಂದ್ರ ಮೋದಿ ಅಲೆಯು ಉದಾಸಿ ಗೆಲುವಿಗೆ ಕಾರಣವಾಯಿತು.

ಅಂತರ, ಮತದಾರ :

ಜಿಲ್ಲೆಯ ರಟ್ಟೀಹಳ್ಳಿ ತಾಲ್ಲೂಕಿನ ಗುಡ್ಡದಮಾದಾಪುರ, ಕಮಲಾಪುರದಿಂದ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹಿರೇಹಳ್ಳಕ್ಕೆ ಸುಮಾರು 220 ಕಿ.ಮೀ. ದೂರವಿದೆ. ಇದು, ಹಾವೇರಿ ಲೋಕಸಭಾ ಕ್ಷೇತ್ರದ ಉತ್ತರ ಮತ್ತು ದಕ್ಷಿಣ ನಡುವಿನ ಅಂತರ.

ಈ ನಡುವೆಯ 16.84 ಲಕ್ಷ ಮತದಾರರು ಇದ್ದಾರೆ. ಸಂಸದರೊಬ್ಬರು ತನ್ನ 5 ವರ್ಷಗಳ ಅವಧಿಯ ಪ್ರತಿ ವರ್ಷದ 365 ದಿನಗಳ 24 ಗಂಟೆಗಳನ್ನೂ ಮತದಾರರಿಗೆ ಮೀಸಲಿಟ್ಟರೂ, ಒಬ್ಬ ಮತದಾರನಿಗೆ 2 ನಿಮಿಷಗಳನ್ನೂ ನೀಡಲೂ ಸಾಧ್ಯವಿಲ್ಲ. ಇನ್ನು  ಅಧಿವೇಶನಗಳು, ಸಂಸದೀಯ ಮಂಡಳಿಯ ಸಭೆಗಳು, ವೈಯಕ್ತಿಕ ಬದುಕುಗಳನ್ನೆಲ್ಲ ಲೆಕ್ಕ ಹಾಕಿದರೆ, ಅರ್ಧ ನಿಮಿಷವೂ ಸಿಗುವುದಿಲ್ಲ.

ಮತದಾರರ ಸಂಖ್ಯೆ, ಬಯಲು ಸೀಮೆ– ಅರೆಮಲೆನಾಡಿನ ಭೌಗೋಳಿಕ ಚಿತ್ರಣ, ದೂರ ಮತ್ತಿತರ ಹಲವಾರು ಕಾರಣಗಳನ್ನು ಲೆಕ್ಕ ಹಾಕಿದರೆ, ಸಂಸದರು ಮತ್ತು ಎಲ್ಲ ಮತದಾರರ ನಡುವಿನ ಒಡನಾಟ ಕಷ್ಟಸಾಧ್ಯ ಎನ್ನುವಂತಿದೆ. ಇದರಿಂದಾಗಿ, ‘ಚುನಾವಣಾ ಅಲೆ’ಗಳೆ ಹೆಚ್ಚಿನ ಕೆಲಸ ಮಾಡುವುದನ್ನು ಕ್ಷೇತ್ರದ ಇತಿಹಾಸದಲ್ಲಿ ಕಾಣುತ್ತವೆ. 

ಇನ್ನು, ನಾಮಪತ್ರ ಸಲ್ಲಿಕೆ ಆರಂಭದ ಬಳಿಕ ಪ್ರಚಾರಕ್ಕಾಗಿ ಅಭ್ಯರ್ಥಿಗೆ ಕೇವಲ 25 ದಿನಗಳು ಸಿಗುತ್ತವೆ. ದಿನಕ್ಕೆ 68 ಸಾವಿರ ಮತದಾರರನ್ನು ಸಂಪರ್ಕಿಸಿದರೆ ಮಾತ್ರ, ಎಲ್ಲರನ್ನೂ ತಲುಪಬಹುದು. ಹೀಗಾಗಿ ‘ಅಲೆ’ಗಳೇ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !