ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ನಂಟು: ಜಿಲ್ಲೆಗೆ ಸೋಂಕು

ಹಾವೇರಿಯಲ್ಲಿ 3ನೇ ಕೋವಿಡ್‌–19 ಪ್ರಕರಣ ದೃಢ: ಮಾವು ಬೆಳೆಗಾರರಲ್ಲಿ ಆತಂಕ
Last Updated 11 ಮೇ 2020, 14:47 IST
ಅಕ್ಷರ ಗಾತ್ರ

ಹಾವೇರಿ:ಜಿಲ್ಲೆಯ 25 ವರ್ಷದ ವ್ಯಕ್ತಿಯೊಬ್ಬನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಶಿಗ್ಗಾವಿ ತಾಲ್ಲೂಕಿನ ಅಂದಲಗಿ ಗ್ರಾಮದ ಲಾರಿ ಮಾಲೀಕ ಕಂ ಚಾಲಕನಿಗೆ (P-853) ಕೋವಿಡ್‌–19 ಇರುವುದು ಲ್ಯಾಬ್‌ ವರದಿಯಿಂದ ಖಚಿತವಾಗಿದೆ. ಇದು ಜಿಲ್ಲೆಯ ಮೂರನೇ ಪ್ರಕರಣ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿ ಮಾವಿನ ಹಣ್ಣು ವ್ಯಾಪಾರದ ನಿಮಿತ್ತ ತನ್ನ ತಮ್ಮ ಮತ್ತು ಮೂವರು ಕ್ಲೀನರ್‌ಗಳೊಂದಿಗೆ ಮೂರು ಬಾರಿ ಮುಂಬೈ ಮಾರುಕಟ್ಟೆಗೆ ಹೋಗಿ ಬಂದಿದ್ದಾನೆ.ಏ.23ರಂದು, ಏ.26ರಂದು ಹಾಗೂ ಏ.29 ರಂದು ಮಹಾರಾಷ್ಟ್ರದ ನವಿ ಮುಂಬೈ ಮಾರುಕಟ್ಟೆಗೆ ತೆರಳಿ ಮಾವಿನಕಾಯಿಯನ್ನು ಮಾರಿ, ಮರಳಿ ಸ್ವಗ್ರಾಮ ಅಂದಲಗೆ ಗ್ರಾಮಕ್ಕೆ ಹಿಂದಿರುಗಿ ಬಂದಿದ್ದ.

ಗ್ರಾಮಸ್ಥರಿಂದ ಮಾಹಿತಿ:

ಈ ಕುರಿತುಗ್ರಾಮಸ್ಥರು ವೈದ್ಯಾಧಿಕಾರಿಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇ 6ರಂದು ವೈದ್ಯಾಧಿಕಾರಿ ಅಂದಲಗಿ ಗ್ರಾಮಕ್ಕೆ ತೆರಳಿ ತಪಾಸಣೆಗೊಳಪಡಿಸಿ, ಆತನಿಗೆ ಕ್ವಾರಂಟೈನ್‌ ಸೀಲ್‍ಹಾಕಿ ಜಕಿನಕಟ್ಟಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡಿದ್ದರು.ಸದರಿ ವ್ಯಕ್ತಿಯ ಜೊತೆಗೆ ಆತನ ಸಹೋದರ ಮತ್ತು ಕ್ಲೀನರ್‌ಗಳನ್ನು ಸಹಿತ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸೋಂಕಿತ ವ್ಯಕ್ತಿ ಮೊದಲ ಸಲ ಅಂದಲಗಿ ಗ್ರಾಮದಿಂದ ಕೊಪ್ಪರಸಿಕೊಪ್ಪ, ಬೈಲವಾಳ, ಬಸಾಪುರ ದುಂಢಸಿ (ಶಿಗ್ಗಾವಿ ತಾಲ್ಲೂಕು) ಹುಬ್ಬಳ್ಳಿ ಎವರ್ ಗ್ರೀನ್ ದಾಬಾ, ಧಾರವಾಡ, ಬೆಳಗಾವಿ, ಕೊಲ್ಹಾಪುರ, ಮುಂಬೈ ಮಾರ್ಗವಾಗಿ ಪ್ರವಾಸ ಮಾಡಿದ್ದಾನೆ. ಎರಡನೇ ಬಾರಿ ಕೋಣನಕೇರಿ, ಹೊಸೂರು, ಹುಬ್ಬಳ್ಳಿ, ಕಿತ್ತೂರು, ಬೆಳಗಾವಿ, ಕೊಲ್ಲಾಪುರ, ಪುಣೆ ಮಾರ್ಗವಾಗಿ ಮುಂಬೈಗೆ ಪ್ರಯಾಣ ಮಾಡಿದ್ದಾನೆ. ಮೂರನೇ ಬಾರಿ ಕೊಪ್ಪರಸಿಕೊಪ್ಪ, ಬೈಲವಾಳ, ಕೋಣನಕೇರಿ, ದುಂಢಶಿ, ಹುಬ್ಬಳ್ಳಿ, ಧಾರವಾಡ, ಕಿತ್ತೂರ, ಬೆಳಗಾವಿ, ಕೊಲ್ಹಾಪುರ ಮಾರ್ಗವಾಗಿ ಮುಂಬೈಗೆ ಪ್ರಯಾಣ ಮಾಡಿದ್ದಾನೆ.

ಮೇ 7ರಂದು ಶಿಗ್ಗಾವಿ ಆಸ್ಪತ್ರೆಗೆ ಕರೆತಂದು ಗಂಟಲು ದ್ರವದ ಮಾದರಿಯನ್ನು ಬೆಂಗಳೂರಿನ ಎನ್.ಐ.ವಿ. ಲ್ಯಾಬ್‍ಗೆ ಕಳುಹಿಸಲಾಗಿತ್ತು. ಮೇ 10ರ ರಾತ್ರಿ ವ್ಯಕ್ತಿಯು ಕೋವಿಡ್ ಸೊಂಕಿತ ಎಂದು ವರದಿ ಬಂದಿದೆ. ಈತನ ಪ್ರಾಥಮಿಕ ಸಂಪರ್ಕದಲ್ಲಿ 16 ಜನರನ್ನು ಗುರುತಿಸಲಾಗಿದ್ದು, ಅವರೆಲ್ಲರನ್ನೂ ನಿಯಮಾನುಸಾರ ಸಾಂಸ್ಥಿಕ ಪ್ರತ್ಯೇಕತೆಯಲ್ಲಿ ಇರಿಸಲಾಗಿದೆ. P-853 ಸೋಂಕಿತನ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕವನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕೂಡಲೇ ಮಾಹಿತಿ ನೀಡಿ:

ಅಂದಲಗಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯನ್ನು ಕ್ವಾರಂಟೈನ್ ಹಾಗೂ ಫೀವರ್ ಕ್ಲಿನಿಕ್ ಕೇಂದ್ರವನ್ನು ಸ್ಥಾಪಿಸಲಾಗಿದೆ. ಏ.23ರಿಂದ ಸೋಂಕಿತನ ಸಂಪರ್ಕದಲ್ಲಿರುವವರು ಕೂಡಲೇ ಹಾವೇರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಗ್ಗಾವಿ ತಾಲ್ಲೂಕು ಆಸ್ಪತ್ರೆ, ಕೋಣನಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಬಂಕಾಪೂರ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT