ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ ನಗರಸಭೆ ಚುನಾವಣೆ: 144 ಸೆಕ್ಷನ್‌ ಜಾರಿ

ಚುನಾವಣೆಗೆ ಹಾಜರಾಗಲು ರಕ್ಷಣೆ ನೀಡಿ: ಪ್ರಾದೇಶಿಕ ಆಯುಕ್ತರಿಗೆ ಕಾಂಗ್ರೆಸ್ ಸದಸ್ಯರ ಮನವಿ
Last Updated 30 ಅಕ್ಟೋಬರ್ 2020, 16:48 IST
ಅಕ್ಷರ ಗಾತ್ರ

ಹಾವೇರಿ: ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ತೀವ್ರ ಕುತೂಹಲ ಕೆರಳಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ತೆರೆಮರೆಯ ಕಸರತ್ತುಗಳು ಜೋರಾಗಿ ನಡೆಯುತ್ತಿವೆ. ಎಲ್ಲ ಆಟಗಳಿಗೆ ನಾಳೆ(ಅ.31) ತೆರೆ ಬೀಳಲಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಹಿಂದುಳಿದ ಅ ವರ್ಗಕ್ಕೆ ಮೀಸಲಾಗಿದೆ. ಹಾವೇರಿ ನಗರಸಭೆ 31 ವಾರ್ಡ್‌ಗಳನ್ನು ಹೊಂದಿದ್ದು, ಯಾವ ಪಕ್ಷಕ್ಕೂ ಬಹುಮತ ಇಲ್ಲದ ಕಾರಣ ಪಕ್ಷೇತರರು ಬೆಂಬಲ ನೀಡುವ ಪಕ್ಷ ಅಧಿಕಾರಕ್ಕೆ ಏರಲಿದೆ. ಹೀಗಾಗಿ ಪಕ್ಷೇತರರೇ ಇಲ್ಲಿ ನಿರ್ಣಾಯಕರಾಗಿದ್ದಾರೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.

144 ಸೆಕ್ಷನ್‌ ಜಾರಿ:

ಚುನಾವಣೆ ಸಂಬಂಧ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಚುನಾವಣೆ ನಡೆಯುವ ಪ್ರದೇಶದ 500 ಮೀಟರ್ ಸುತ್ತಮುತ್ತ‌ ಪ್ರತಿಬಂಧಕಾಜ್ಞೆ (144 ಸೆಕ್ಷನ್‌) ಜಾರಿಗೊಳಿಸಿ ತಹಶೀಲ್ದಾರ್‌ ಶಂಕರ ಜಿ.ಎಸ್‌. ಆದೇಶ ಹೊರಡಿಸಿದ್ದಾರೆ.

ಅ.31ರ ಬೆಳಿಗ್ಗೆ 6ರಿಂದ ರಾತ್ರಿ 12ರವರೆಗೆ ಷರತ್ತುಗಳನ್ನು ವಿಧಿಸಿ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ.ಐದು ವ್ಯಕ್ತಿಗಳಿಗಿಂತ ಹೆಚ್ಚಿನ ಸಂಖ್ಯೆಯ ಜನರು ಜತೆಗೂಡಿ, ಗುಂಪಾಗಿ ಸಂಚರಿಸುವಂತಿಲ್ಲ. ಸಾರ್ವಜನಿಕ ಸಭೆ ನಡೆಸುವುದು, ಶಾಂತಿಗೆ ಭಂಗ ಉಂಟು ಮಾಡುವುದು, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವುದು ಹಾಗೂ ಇತರೆ ಅಹಿತಕರ ಘಟನೆಗಳು ನಡೆಯುವಂತೆ ಮಾಡುವ ಸಂಭವನೀಯತೆ ತಡೆಯುವುದಕ್ಕೆ ಹಾಗೂ ಮತದಾನದ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಾದೇಶಿಕ ಆಯುಕ್ತರಿಗೆ ಮನವಿ:

ನಗರಸಭೆ ಚುನಾವಣೆಗೆ ಹಾಜರಾಗಲು ನಮಗೆ ರಕ್ಷಣೆ ನೀಡಬೇಕು ಎಂದು ನಗರಸಭೆಯ ಕಾಂಗ್ರೆಸ್ ಸದಸ್ಯರಾದ ಇಮಾಮ್‌ಜಾಫರ್‌ಖಾನ್‌ ಪಠಾಣ, ಗಣೇಶ ಉರುಫ್‌ ಮಂಜುನಾಥ ಬಿಷ್ಟಣ್ಣನವರ ಹಾಗೂ ಪೀರಸಾಬ್‌ ಚೋಪದಾರ ಅವರು ಬೆಳಗಾವಿ ಪ್ರಾದೇಶಿಕ ಆಯುಕ್ತ ಆಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

‘ಕಾಂಗ್ರೆಸ್‌ ಪಕ್ಷದಿಂದ ಚುನಾಯಿತರಾದ ಮೂವರು ಸದಸ್ಯರು ಚುನಾವಣೆಗೆ ಹಾಜರಾಗದಂತೆ ಮಾಡುವ ರಾಜಕೀಯ ದುರುದ್ದೇಶದಿಂದ ನಮ್ಮ ಮೇಲೆ ಅ.29ರಂದು ರಾತ್ರಿ 7.30ಕ್ಕೆ ಸುಳ್ಳು ಕ್ರಿಮಿನಲ್‌ ಪ್ರಕರಣವನ್ನು ದಾಖಲಿಸಿರುವುದು ತಿಳಿದು ಬಂದಿದೆ. ನಮ್ಮ ಮೇಲೆ ಹಿಂದೆಯೂ ಸಹ ಸುಳ್ಳು ಜಾತಿನಿಂದನೆ ಪ್ರಕರಣ ದಾಖಲಿಸಿದ್ದರಿಂದ ಮಂಜಾಗ್ರತಾ ಕ್ರಮವಾಗಿ ನಾವು ಹಾವೇರಿಯನ್ನು ಬಿಟ್ಟು ಬೇರೆ ಊರಲ್ಲಿ ವಾಸವಾಗಿರುತ್ತೇವೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT