ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಸಂಬಂಧಕ್ಕೆ ಅಡ್ಡಿ| ಗಂಡನ ಕೊಂದು ಹೆಗ್ಗೇರಿ ಕೆರೆಯಲ್ಲಿ ಸುಟ್ಟಿದ್ದಳು!

ಏಳು ತಿಂಗಳ ಹಿಂದೆ ನಡೆದಿದ್ದ ಕೃತ್ಯ
Last Updated 29 ಜೂನ್ 2019, 5:44 IST
ಅಕ್ಷರ ಗಾತ್ರ

ಹಾವೇರಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಸಂಬಂಧಿಯ ಜತೆ ಸೇರಿ ಕೊಂದ ಉಷಾ (24) ಎಂಬಾಕೆ, ಶವವನ್ನು ಹೆಗ್ಗೇರಿ ಕೆರೆಯ ಕೋಡಿಯಲ್ಲಿ ಎಸೆದು ಸುಟ್ಟು ಹಾಕಿದ್ದಳು. ಆ ನಿಗೂಢ ಸಾವಿನ ಪ್ರಕರಣವನ್ನು ಏಳು ತಿಂಗಳ ಬಳಿಕ ಭೇದಿಸಿರುವ ಹಾವೇರಿ ನಗರ ಪೊಲೀಸರು, ಶುಕ್ರವಾರ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ನಾಗೇಂದ್ರನಮಟ್ಟಿ ನಿವಾಸಿ ಯಲ್ಲಪ್ಪ ಮಣ್ಣೋಡ್ಡರ (28) ಕೊಲೆಯಾದವರು. ಮೃತರ ಅಣ್ಣನ ಮಗನಾದ ಮಂಜುನಾಥ ಮಣ್ಣೋಡ್ಡರ (20) ಜತೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದ ಉಷಾ, 2018ರ ನ.10ರ ರಾತ್ರಿ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು ಎಂದು ಪೊಲೀಸರು ಹೇಳಿದ್ದಾರೆ.

ಸಲುಗೆಗೆ ತಿರುಗಿದ ಸಂಬಂಧ: ಕೂಲಿ ಕೆಲಸ ಮಾಡುತ್ತಿದ್ದ ಯಲ್ಲಪ್ಪ, ಎಂಟು ವರ್ಷಗಳ ಹಿಂದೆ ಉಷಾಳನ್ನು ವಿವಾಹವಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಆರೋಪಿ ಮಂಜುನಾಥ, ಬಾಲ್ಯದಲ್ಲೇ ಪೋಷಕರನ್ನು ಕಳೆದುಕೊಂಡಿದ್ದರಿಂದ ಯಲ್ಲಪ್ಪ ಅವರೇ ಆತನನ್ನು ಸಾಕುತ್ತಿದ್ದರು. ‌

ಕ್ರಮೇಣ ಉಷಾ ಹಾಗೂ ಮಂಜುನಾಥ್ ನಡುವೆ ಸಲುಗೆ ಶುರುವಾಗಿತ್ತು. ಈ ವಿಚಾರ ಯಲ್ಲಪ್ಪ ಅವರಿಗೆ ಗೊತ್ತಾಗಿ, ಇಬ್ಬರಿಗೂ ಎಚ್ಚರಿಕೆ ಕೊಟ್ಟಿದ್ದರು. ನಿತ್ಯ ಕುಡಿದು ಬಂದು ಅದೇ ವಿಚಾರವಾಗಿ ಜಗಳವಾಡುತ್ತಿದ್ದ ಗಂಡನ ವಿರುದ್ಧ ಉಷಾ ಮುನಿಸಿಕೊಂಡಿದ್ದಳು. ಅವರನ್ನು ಕೊಂದು ಮಂಜುನಾಥ್ ಜತೆ ಬದುಕು ನಡೆಸುವ ನಿರ್ಧಾರಕ್ಕೂ ಬಂದಳು. ಅದಕ್ಕೆ ಆತನೂ ಒಪ್ಪಿಕೊಂಡಿದ್ದ.

ಮಗಳಿಗೆ ಬರೆ ಎಳೆದಳು: ‘ನ.10ರ ರಾತ್ರಿ ಯಲ್ಲಪ್ಪ ಪಾನಮತ್ತರಾಗಿ ಮನೆಗೆ ಹೋಗಿದ್ದರು. ಊಟ ಮಾಡಿ ಅವರು ನಿದ್ರೆಗೆ ಜಾರುತ್ತಿದ್ದಂತೆಯೇ ಇಬ್ಬರೂ ಸೇರಿ ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದರು. ಅದನ್ನು 7 ವರ್ಷದ ಮಗಳು ನೋಡಿ ಅಳಲು ಪ್ರಾರಂಭಿಸಿದಾಗ, ನಾಲಿಗೆ ಹಾಗೂ ಕೈ–ಕಾಲಿಗೂ ಬರೆ ಹಾಕಿದ್ದರು’ ಎಂದು ಪೊಲೀಸರು ಹೇಳಿದರು.

‘ನಂತರ ಶವವನ್ನು ಮೂಟೆಯಲ್ಲಿ ಹಾಕಿಕೊಂಡ ಅವರು, ಮನೆಯಲ್ಲಿದ್ದ ಪೆಟ್ರೋಲ್ ಕ್ಯಾನ್ ತೆಗೆದುಕೊಂಡು ಆಟೊದಲ್ಲೇ ಹೆಗ್ಗೇರಿ ಕೆರೆ ಬಳಿ ತೆರಳಿದ್ದರು. ಅಲ್ಲಿ ಕೋಡಿಯಲ್ಲಿ ಮೂಟೆ ಎಸೆದು, ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಬಂದಿದ್ದರು’ ಎಂದು ಮಾಹಿತಿ ನೀಡಿದರು.

ಸಂಬಂಧಿಕರೇ ಸುಳಿವಾದರೂ!
ಯಲ್ಲಪ್ಪ ಹಲವು ದಿನಗಳಿಂದ ನಾಪತ್ತೆಯಾಗಿದ್ದರಿಂದ ಅವರ ಸಂಬಂಧಿಕರು ಉಷಾ ಬಳಿ ವಿಚಾರಿಸಿದ್ದರು. ಅದಕ್ಕೆ, ‘ಅವರು ಬೇರೆ ಯಾವುದೇ ಮಹಿಳೆ ಜತೆ ಸಂಬಂಧ ಇಟ್ಟುಕೊಂಡಿದ್ದರು. ಆಕೆ ಜತೆಗೇ ಹೋಗಿರಬಹುದು’ ಎಂದು ಕತೆ ಹೆಣೆದಿದ್ದಳು. ಈ ನಡುವೆಉಷಾ ಹಾಗೂ ಮಂಜುನಾಥನ ನಡುವೆ ಸಲುಗೆ ಹೆಚ್ಚಾಗಿದ್ದರಿಂದ ಸಂಬಂಧಿಕರಲ್ಲಿ ಅನುಮಾನ ಹೆಚ್ಚಾಗಿತ್ತು.

‘ಸಂಬಂಧಿಕರು ಗುರುವಾರ ಮಂಜುನಾಥನನ್ನು ವಿಚಾರಿಸಿದಾಗ ಆತ ಏನೂ ಬಾಯ್ಬಿಟ್ಟಿರಲಿಲ್ಲ. ನಂತರ ಉಷಾ ಬಳಿ ಬಂದ ಅವರು, ‘ಮಂಜುನಾಥ ಎಲ್ಲವನ್ನೂ ಹೇಳಿದ್ದಾನೆ. ಯಲ್ಲಪ್ಪನನ್ನು ಏನು ಮಾಡಿದ್ದೀರಿ ಹೇಳಿಬಿಡು. ಇಲ್ಲದಿದ್ದರೆ ಠಾಣೆಗೆ ಹೋಗಿ ದೂರು ಕೊಡುತ್ತೇವೆ’ ಎಂದಿದ್ದರು. ಇದರಿಂದ ಬೆದರಿದ ಆಕೆ, ತಮ್ಮ ಕೃತ್ಯವನ್ನು ವಿವರಿಸಿದ್ದಳು. ಆ ನಂತರ ಅವರು ಠಾಣೆಗೆ ದೂರು ಕೊಟ್ಟರು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT