ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಾಹಿ ಹತ್ಯೆ: ನಾಲ್ವರ ಬಂಧನ

ಬೆಳಕಿಗೆ ಬಂದ 12 ಪ್ರಕರಣಗಳು: ಕೃತ್ಯಕ್ಕೆ ಬಳಸಿದ್ದ ವಾಹನ, ಆಯುಧಗಳು ಜಪ್ತಿ
Last Updated 13 ಮೇ 2022, 13:35 IST
ಅಕ್ಷರ ಗಾತ್ರ

ಹಾವೇರಿ: ರಾಣೆಬೆನ್ನೂರು ತಾಲ್ಲೂಕು ಗಂಗಾಪುರದಲ್ಲಿ ಕುರಿಗಾಹಿಯನ್ನು ಹತ್ಯೆ ಮಾಡಿ, 35 ಆಡುಗಳನ್ನು ಕಳ್ಳತನ ಮಾಡಿದ ಪ್ರಕರಣ ಸೇರಿದಂತೆ ಒಟ್ಟು 12 ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ 7 ಆರೋಪಿಗಳನ್ನು ಬಂಧಿಸಲಾಗಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಡೊಂಬ್ರಹಳ್ಳಿಯ ದ್ಯಾಮಪ್ಪ ಲಮಾಣಿ, ಹರಪನಹಳ್ಳಿಯ ಹನುಮಂತಪ್ಪ ಕಾಶಪ್ಪನವರ, ಮಂಜುನಾಥ ಹನುಮಂತಪ್ಪ, ಗದಗ ಜಿಲ್ಲೆ ಶಿರಹಟ್ಟಿ ತಾಲ್ಲೂಕಿನ ಬೆಳ್ಳಟ್ಟಿ ಗ್ರಾಮದ ಉಪೇಂದ್ರ ಯಲ್ಲಪ್ಪ ಮೋಡಿಕಾರ, ಬ್ಯಾಡಗಿ ತಾಲ್ಲೂಕಿನ ಕುಂಚಿಕೊರವರ ಗ್ರಾಮದವರಾದ ಮಂಜುನಾಥ ಕುಂಚಿಕೊರವರ, ನಾಗರಾಜ ಕುಂಚಿಕೊರವರ ಹಾಗೂ ಯಲ್ಲಪ್ಪ ಎಂಬ ಏಳು ಆರೋಪಿಗಳನ್ನು ಬಂಧಿಸಲಾಗಿದೆ ಎಂದುಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಗಂಗಾಪುರದಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಆರೋಪಿಗಳಲ್ಲಿ ನಾಲ್ವರನ್ನು ಬಂಧಿಸಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ. ಅವರನ್ನು ಶೀಘ್ರ ಬಂಧಿಸಲು ಬಲೆ ಬೀಸಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಜೀಪ್‌, ಕಬ್ಬಿಣದ ರಾಡು, ಕಟರ್‌, ಹಗ್ಗ, ಬಿಯರ್‌ ಬಾಟಲಿಗಳು, ಕಾರದ ಪುಡಿ ಹಾಗೂ ₹6400 ನಗದನ್ನು ಜಪ್ತಿ ಮಾಡಿಕೊಂಡು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೇಳಿದರು.

3 ವಿಶೇಷ ತಂಡ ರಚನೆ:

ಜಿಲ್ಲೆಯಲ್ಲಿ ಕುರಿ, ಆಡು, ಟಗರು ಕಳ್ಳತನ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ, ಆರೋಪಿಗಳ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪೊಲೀಸ್‌ ತಂಡಗಳು ಗಸ್ತು ತಿರುಗುವ ವೇಳೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ತಿಳಿಸಿದರು.

ಸೂಕ್ತ ಬಹುಮಾನ:

‘ರಾತ್ರಿ ಗಸ್ತು’ ಅನ್ನು ಚುರುಕುಗೊಳಿಸಿದ ಪರಿಣಾಮ ರಟ್ಟೀಹಳ್ಳಿ ತಾಲ್ಲೂಕಿನಲ್ಲಿ ಕೃಷ್ಣಮೃಗ ಬೇಟೆಯಾಡಿದ ನಾಲ್ವರು ಆರೋಪಿಗಳನ್ನು ಬಂಧಿಸಲು ಸಾಧ್ಯವಾಯಿತು. ಆಡು ಮತ್ತು ಕುರಿ ಕಳ್ಳರನ್ನು ಹಿಡಿಯಲುಕಾರ್ಯಾಚರಣೆ ನಡೆಸಿ, ಯಶಸ್ವಿಯಾದ ರಾಣೆಬೆನ್ನೂರು ಗ್ರಾಮೀಣ ಪೊಲೀಸ್‌ ಠಾಣೆ ಸಿಬ್ಬಂದಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಣೆಬೆನ್ನೂರು ಡಿವೈಎಸ್ಪಿ ಸುರೇಶ್‌, ಡಿವೈಎಸ್ಪಿ (ಡಿಸಿಆರ್‌ಬಿ) ಎಂ.ಎಸ್‌.ಪಾಟೀಲ್‌, ಕುಮಾರಪಟ್ಟಣ ಇನ್‌ಸ್ಪೆಕ್ಟರ್‌ ಭಾಗ್ಯವತಿ ಬಂಕ್ತಿ, ರಾಣೆಬೆನ್ನೂರು ನಗರ ಠಾಣೆ ಇನ್‌ಸ್ಪೆಕ್ಟರ್‌ ಎಂ.ಐ. ಗೌಡಪ್ಪ ಗೌಡ, ಇನ್‌ಸ್ಪೆಕ್ಟರ್‌ ಮೋತಿಲಾಲ್‌ ಪವಾರ್‌ ಹಾಗೂ ಸಿಬ್ಬಂದಿ ಇದ್ದರು.

ದಾರಿಹೋಕರನ್ನು ದೋಚಿದ್ದ ಖದೀಮರು

ಈ ಎಲ್ಲ ಆರೋಪಿಗಳು ರೂಢಿಗತ ಅಪರಾಧಿಗಳಾಗಿದ್ದು, ಮದ್ಯ ಸೇವನೆ ಮಾಡಿ ಬೊಲೆರೊ ವಾಹನದಲ್ಲಿ ಮಧ್ಯರಾತ್ರಿಯಿಂದ ಬೆಳಗಿನ ಜಾವದ ತನಕ ಕಾರ್ಯಾಚರಣೆ ನಡೆಸುತ್ತಿದ್ದರು. ಕುರಿ ಕಳ್ಳತನದ ಜತೆಗೆ ದಾರಿಹೋಕರನ್ನು ತಡೆದು ಕಳ್ಳತನ ಮಾಡುತ್ತಿರುವ ಬಗ್ಗೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇವರು ಚಾಮರಾಜನಗರ, ಚಿಕ್ಕಮಗಳೂರು, ಮೈಸೂರು, ಬಳ್ಳಾರಿ, ಬೆಳಗಾವಿ ಸೇರಿದಂತೆ ರಾಜ್ಯದಾದ್ಯಂತ ಸಂಚಾರ ಮಾಡಿದ್ದಾರೆ. ಹೆಚ್ಚಿನ ತನಿಖೆಯಿಂದ ಮತ್ತಷ್ಟು ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.

**

ಜಿಲ್ಲೆಯಲ್ಲಿ ಕುರಿ ಮತ್ತು ಆಡು ಕಳ್ಳತನ ಪ್ರಕರಣಗಳು ಹೆಚ್ಚಿರುವ ಕಾರಣ ಪೊಲೀಸರಿಂದ ‘ರಾತ್ರಿ ಗಸ್ತು’ ಅನ್ನು ಚರುಕುಗೊಳಿಸಲಾಗಿದೆ

– ಹನುಮಂತರಾಯ, ಎಸ್ಪಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT