7

ನಾಗನೂರ: ರಸ್ತೆ ಸರಿಪಡಿಸಿದ ಗ್ರಾಮಸ್ಥರು

Published:
Updated:
ಹಾವೇರಿ ತಾಲ್ಲೂಕಿನ ನಾಗನೂರಿನಲ್ಲಿ ರಸ್ತೆ ನಿರ್ಮಿಸುತ್ತಿರುವುದು

ಹಾವೇರಿ:  ರಸ್ತೆಗಳು ಅಭಿವೃದ್ಧಿಯ ರಹದಾರಿ. ಆದರೆ, ಮಳೆಗಾಲದಲ್ಲಿ ರಸ್ತೆಗಳ ಪಾಡು ಹೇಳತೀರದು. ಗ್ರಾಮೀಣ ಪ್ರದೇಶದಲ್ಲಿ ಈ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿದ್ದು, ಸರ್ಕಾರದ ವಿರುದ್ಧ ಶಪಿಸುವವರೇ ಹೆಚ್ಚು. ಆದರೆ, ಇದಕ್ಕೆ ಅಪವಾದ ಎಂಬಂತೆ ತಾಲ್ಲೂಕಿನ ನಾಗನೂರ ಗ್ರಾಮದ ರೈತರು ಸಂಘಟಿತರಾಗಿ, ಸ್ವಂತ ಖರ್ಚಿನಿಂದ ರಸ್ತೆ ದುರಸ್ತಿ ಮಾಡಿಸಿದ್ದಾರೆ.

ನಾಗನೂರಿನಿಂದ ದೇವಿಹೊಸೂರು, ಕುಣಿಮೆಳ್ಳಿಹಳ್ಳಿ ದಿಕ್ಕಿನ ಹೊಲಗಳತ್ತ ಹೋಗುವ ಸುಮಾರು ಒಂದೂವರೆ ಕಿ.ಮೀ. ರಸ್ತೆಯು ಹದಗೆಟ್ಟು ಹೋಗಿತ್ತು. ಈಚೆಗೆ ಸುರಿದ ಮಳೆಗೆ ಇನ್ನಷ್ಟು ಅಧ್ವಾನಗೊಂಡಿತ್ತು. ಈ ರಸ್ತೆಯಲ್ಲಿ ರೈತರು ಹೊಲಕ್ಕೆ ಹೋಗುವುದು ಮಾತ್ರವಲ್ಲ, ತಮ್ಮ ಎತ್ತಿನಬಂಡಿ, ಟ್ರ್ಯಾಕ್ಟರ್‌, ಟಿಲ್ಲರ್‌, ಬೈಕ್‌ ಮೂಲಕ ಸಂಚರಿಸುವುದೂ ದುಸ್ತರವಾಗಿತ್ತು. ಇದನ್ನು  ರೈತರೇ ವಂತಿಗೆ ಹಾಕಿ ಅಭಿವೃದ್ಧಿ ಪಡಿಸಿದ್ದಾರೆ.

‘ಈ ಹಾದಿಯನ್ನು ಹೆಚ್ಚಾಗಿ ಬಳಸುವ ಸುತ್ತಲಿನ ರೈತರು ವಂತಿಗೆ ಹಾಕಿದ್ದೇವೆ. ಕೆಲವೊಬ್ಬರು ಹೆಚ್ಚಿನ ನೆರವು ನೀಡಿದ್ದಾರೆ. ಆ ಹಣದಲ್ಲಿ ಜೆಸಿಬಿ ತರಿಸಿಕೊಂಡು ರಸ್ತೆ ನಿರ್ಮಿಸಿದ್ದೇವೆ. ಗೊರಚು, ಗಟ್ಟಿಮಣ್ಣುಗಳನ್ನು ಹಾಕಿಕೊಂಡು ರಸ್ತೆಯನ್ನು ಗಟ್ಟಿಗೊಳಿಸಲಾಗಿದೆ. ಜಿಲ್ಲಾ ಪಂಚಾಯ್ತಿ ಸದಸ್ಯ ವಿರೂಪಾಕ್ಷಪ್ಪ ಕಡ್ಲಿ ಹಳೇ ಪೈಪ್‌ಲೈನ್ ಮತ್ತಿತರ ಸಾಮಗ್ರಿಗಳನ್ನು ನೀಡಿದರು’ ಎಂದು ಗ್ರಾಮಸ್ಥರು ತಿಳಿಸಿದರು.

‘ನಾವು ಒಗ್ಗಟ್ಟಿನಿಂದ ಸೇರಿಕೊಂಡು ರಸ್ತೆ ನಿರ್ಮಿಸಿದ್ದು, ಎಲ್ಲರಿಗೂ ಸಹಕಾರಿಯಾಗಲಿದೆ’ ಎಂದು ಮುಖಪ್ಪ ಬೇವಿನ ಕಟ್ಟಿ ತಿಳಿಸಿದರು. ಪುಟ್ಟಪ್ಪ ಓಂಕಾರಣ್ಣನವರ, ತಿಪ್ಪಣ್ಣ ಬಾರ್ಕಿ, ಬಸವರಾಜ ಬ್ಯಾಳಿ, ನಿಂಗಪ್ಪ ಬೆಂಚಿನಹಳ್ಳಿ, ಮಂಚಪ್ಪೆ ರೇವಣ್ಣನವರ, ಮೈಲಾರಪ್ಪ ಬಾರ್ಕಿ, ಮಂಜಪ್ಪ ಬಾರ್ಕಿ, ಮಂಜಪ್ಪ ಗಾಳಿ, ಸಂಗಮೇಶ ಪರೀಶೆಟ್ಟಿ ಮತ್ತಿತರರು ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !