ರಾಣೆಬೆನ್ನೂರು: ನಾಗರ ಪಂಚಮಿ ಹಬ್ಬದ ಸಂಭ್ರಮ ಬುಧವಾರ ರೊಟ್ಟಿ ಪಂಚಮಿಯೊಂದಿಗೆ ಸಡಗರದಿಂದ ಆರಂಭವಾಗಿದೆ.
ಮಹಿಳೆಯರು ವಾರ ಮೊದಲೇ ಎಳ್ಳು ಹಚ್ಚಿದ ಬಿಳಿಜೋಳದ ರೊಟ್ಟಿ, ಸಜ್ಜಿ ರೊಟ್ಟಿ (ಹಬ್ಬದ ದಿನ ರೊಟ್ಟಿ ಸುಡುವಂತಿಲ್ಲ) ಮಾಡಿಕೊಂಡಿರುತ್ತಾರೆ.
ರೊಟ್ಟಿ ಪಂಚಮಿ ದಿನ ಚಪಾತಿ, ಪುಂಡಿಸೊಪ್ಪಿನ ಪಲ್ಯ, ಹೀರೇಕಾಯಿ ಎಣಗಾಯಿ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ಮಡಕಿ ಕಾಳು, ಹಿಟ್ಟಿನ ಪಲ್ಯ, ಸಾಂಬಾರು ಬುತ್ತಿ, ಮೊಸರು ಬುತ್ತಿ, ಕುಚ್ಚಿದ ಟೊಮೆಟೊ ಮತ್ತು ಹಸಿಮೆಣಸಿನಕಾಯಿ ಚಟ್ನಿ, ಕಾರ ಚಟ್ನಿ, ಮೆಂತೆ ಸೊಪ್ಪು, ಕೋಸಂಬರಿ, ಶೇಂಗಾ ಚಟ್ನಿ, ಗುರೆಳ್ಳು ಚಟ್ನಿ, ಅಗಸಿ ಚಟ್ನಿ, ಪುಟಾಣಿ ಚಟ್ನಿ, ಉಪ್ಪಿನಕಾಯಿ ಹಾಗೂ ಹಲವು ಬಗೆಯ ಖಾದ್ಯಗಳನ್ನು ಗೃಹಿಣಿಯರು ತಯಾರಿಸಿದ್ದರು. ಮಹಿಳೆಯರು ತಟ್ಟೆಯಲ್ಲಿ ಬಗೆ ಬಗೆಯ ಖಾದ್ಯಗಳನ್ನು ಬಡಿಸಿಕೊಂಡು ಓಣಿಯ, ಸ್ನೇಹ ಬಳಗಕ್ಕೆ ಸಂಬಂಧಿಗಳ ಮನೆ ಮನೆಗೆ ತೆರಳಿ ಕೊಟ್ಟು ಅವರ ಮನೆಯ ರೊಟ್ಟಿಗಳನ್ನು ಪಡೆದು ಎಲ್ಲರೂ ಭಾವೈಕ್ಯದಿಂದ ಬಾಳೋಣ ಎನ್ನುವ ಸಂದೇಶ ಸಾರಿದರು
ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು, ಮಕ್ಕಳು ತರಹೇವಾರಿ ಉಂಡಿ, ಚಕ್ಕುಲಿ ಮಾಡುವ ಮೂಲಕ ಶ್ರಾವಣ ಮಾಸವನ್ನು ವಿಶೇಷವಾಗಿ ಸ್ವಾಗತಿಸಿದ್ದು ಕಂಡು ಬಂದಿತು. ಮಹಿಳೆಯರು ಉಂಡಿ ಕಟ್ಟಲು ಅಂಗಡಿಗಳಿಂದ ಗುಳಿಗಿ (ಬೂಂದಿ), ದಾಣಿ ಪ್ಯಾಕೆಟ್‌ಗಳನ್ನು ಗ್ರಾಹಕರು ಖರೀದಿಸಿದರು.
ಹಬ್ಬಕ್ಕೆ ಮೊದಲೇ ನಾಗದೇವನ ನೈವೇದ್ಯಕ್ಕೆ ಅರಳು, ಅರಳಿಟ್ಟು, ತಂಬಿಟ್ಟು, ಶೇಂಗಾ, ಎಳ್ಳು, ವಿಧ ವಿಧ ಉಂಡಿ, ಎಳ್ಳುಚಿಗಳಿ, ಪುಟಾಣಿ, ಚುರುಮುರಿ ಉಂಡಿ, ಗುಳಗಿ ಉಂಡಿ, ದಾಣಿ, ಗುಳ್ಳಅಡಕಿ, ರವಾ, ಬೇಸನ್, ಹೆಸರು, ಅಂಟಿನ, ಖರ್ಜಿಕಾಯಿ, ಶಂಕರಪಾಳೆ, ಮಾದ್ಲಿ ಸಿಹಿ ತಿನಿಸುಗಳನ್ನು ಸಿದ್ದಪಡಿಸಿದ್ದಾರೆ. ಸಿಹಿ ತಿಂದು ಬೇಸರವಾದರೆ ಚಕ್ಕುಲಿ, ಕೋಡುಬಳೆ, ಚೂಡಾ, ಅವಲಕ್ಕಿ, ಖಾರದಾಣಿ, ಖಾರದ ಉಸುಳಿ, ಖಾರದ ಎಳ್ಳು, ಅರಳಿಟ್ಟು, ಅರಳಿನ ಜೋಳವು ಸಿದ್ಧವಾಗಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.