ಶತಮಾನ ಕಂಡ ದೊಡ್ಡ ಹುಣಸೆ ಮರ

7

ಶತಮಾನ ಕಂಡ ದೊಡ್ಡ ಹುಣಸೆ ಮರ

Published:
Updated:
Prajavani

ಸವಣೂರ: ಪಟ್ಟಣದ ದೊಡ್ಡ ಹುಣಸೇ ಕಲ್ಮಠದಲ್ಲಿರುವ ಅನೇಕ ಶತಮಾನಗಳನ್ನು ಕಂಡಿರುವ ಮೂರು ಅದ್ಭುತ ವೃಕ್ಷಗಳು ಪರಿಸರ ಪ್ರೇಮಿಗಳನ್ನು, ಪ್ರವಾಸಿಗರನ್ನು ಆಕರ್ಷಿಸುವುದರ ಜತೆಗೆ ಪಟ್ಟಣದ ಸೊಬಗನ್ನೂ ಹೆಚ್ಚಿಸಿವೆ.

ಕಲ್ಮಠದಲ್ಲಿರುವ ಮೂರು ಗಜಗಾತ್ರದ ವೃಕ್ಷಗಳು ಗತ ಇತಿಹಾಸದ ಕೊಂಡಿಯಾಗಿ, ಪ್ರಕೃತಿಯ ಭವ್ಯ ಪರಂಪರೆಯ ಸಾಕ್ಷಿಯಾಗಿ ನಿಂತಿವೆ.

ಮೊದಲ ನೋಟಕ್ಕೆ ಅಚ್ಚರಿ ಹುಟ್ಟಿಸುವ ಮರಗಳು ಅನೇಕ ಶತಮಾನಗಳನ್ನು ಕಂಡಿವೆ. ಕಣ್ಣಳತೆಗೆ ನಿಲುಕದ ಈ ವಿಶಾಲ ವೃಕ್ಷಗಳ ಬೃಹತ್ ಗಾತ್ರದ ಬೊಡ್ಡೆಯ ಸುತ್ತಳತೆಯನ್ನು ಕಂಡು ವೀಕ್ಷಕರು ವಿಸ್ಮಿತರಾಗುತ್ತಾರೆ.

ಈ ವೃಕ್ಷಗಳನ್ನು ಹಠ ಯೋಗಿ ಗೋರಖನಾಥರು ದೇಶ ಸಂಚಾರದ ವೇಳೆ ಸವಣೂರಿನ ಕಲ್ಮಠಕ್ಕೆ ಬಂದು ಇಲ್ಲಿ ಅನೇಕ ವರ್ಷಗಳವರೆಗೆ ಅನುಷ್ಠಾನಗೈದು ಯೋಗ ಶಕ್ತಿಯಿಂದ ನೆಟ್ಟರೆಂದು ಸ್ಥಳೀಯರು ತಿಳಿಸುತ್ತಾರೆ.

ಈ ವೃಕ್ಷಗಳ ತಳವು ಉಬ್ಬಿದ ಬಾಟಲಿಯಂತೆ ಇದ್ದು ಕ್ರಮೇಣ ಮೇಲೆ ಹೋದಂತೆ ಮೊನಚಾಗುತ್ತದೆ. ಎಲೆಯು ಸುಮಾರು 4 ದಳದಿಂದ 7ದಳದ ವರೆಗೆ ಅಂಗೈಯಂತೆ ಕಾಣುತ್ತದೆ. ನೋಡುಗರ ಕಣ್ಣಿಗೆ ದೊಡ್ಡ ಗುಡ್ಡದಂತೆ ಕಾಣುವ ವೃಕ್ಷಗಳ ತೊಗಟೆ ಖಡ್ಗಮೃಗದ ಚರ್ಮದಂತೆ ಮಡಿಕೆಯಾಗಿದೆ. ಕಾಂಡದ ತುದಿಯಿಂದ ಅನೇಕ ರೆಂಬೆ ಕೊಂಬೆಗಳು ಕವಲೊಡೆದಿದ್ದು ಚಳಿಗಾಲದಲ್ಲಿ ಇಡೀ ಮರಕ್ಕೆ ಎಲೆಗಳಿಲ್ಲದಂತಾಗುತ್ತದೆ. ಪುನಃ ಮೇ ತಿಂಗಳಲ್ಲಿ ಎಲೆಗಳ ಪುನರಾಗಮನಗುತ್ತವೆ.

ಈ ಮರದ ಕಾಯಿಯನ್ನು ನೋಡಿದಾಗ ತೆಂಗಿನಕಾಯಿ ಗಾತ್ರದಷ್ಟು ಕಂಡುಬರುತ್ತದೆ. 18-20 ಇಂಚಿನ ಗಾತ್ರದ ಕಾಯಿಯ ಮೇಲ್ಭಾಗದಲ್ಲಿ ಕುತನಿ ಅರಿವೆಯಂತೆ ಮೆತ್ತನೆ ಪರದೆ ಹೊಂದಿದೆ. ಕಾಯಿಯನ್ನು ಒಡೆದಾಗ ಜೇಡರ ಬಲೆಯಂತೆ ಹೆಣೆದಿರುವ ಹಾಲಿನಪುಡಿಯಂತೆ ಬೆಳ್ಳಗೆ ಇರುವ ಹುಣಸೆ ಹಣ್ಣುಗಳನ್ನು ಕಾಣಬಹುದಾಗಿದೆ. ಈ ಕಾಯಿ ಸ್ವಲ್ಪ ಹುಳಿ ಸಿಹಿಯ ರುಚಿ ಹೊಂದಿದೆ. ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ಈ ವೃಕ್ಷಗಳಿಗೆ ‘ದೊಡ್ಡಹುಣಸೇಮರ’ ಎಂದು ಕರೆಯಲಾಗುತ್ತದೆ.

ದೊಡ್ಡ ಹುಣಸೆ ಮರಗಳ ಹಿನ್ನೆಲೆ: ಶ್ರೀಮಠದಲ್ಲಿ ಒಟ್ಟು ಮೂರು ವೃಕ್ಷಗಳು ಇದ್ದು, ಮೊದಲನೇ ವೃಕ್ಷದ ಸುತ್ತಳತೆ 14.70 ಮೀಟರ್ ಅಗಲ, 17.50 ಮೀಟರ್ ಎತ್ತರ. ಎರಡನೇ ಮರ, 11.97 ಮೀಟರ್ ಅಗಲ, 15.40ಮೀಟರ್ ಎತ್ತರ. ಮೂರನೇ ಮರದ ಸುತ್ತಳತೆ 11.63 ಮೀಟರ್ ಅಗಲ, 15.50 ಮೀಟರ್ ಎತ್ತರ ಇವೆ. ದೊಡ್ಡ ಹುಣಸೆ, ಆನೆ ಹುಣಸೆ, ಮುಗಿಮಾವು ಮತ್ತು ಬ್ರಹ್ಮಾಮ್ಲಿಕ್ ವೃಕ್ಷವೆಂದು ವಿವಿಧ ಹೆಸರುಗಳಿಂದ ಕರೆಯಲ್ಪಡುವ ಈ ಅಪರೂಪದ ವೃಕ್ಷದ ವೈಜ್ಞಾನಿಕ ಹೆಸರು, ಆಡೆನ್ಸೋನಿಯಾ ಡಿಜಿಟಾಟಾ. ಇದು ಬೂರುಗದ ಹತ್ತಿಯ ಸಸ್ಯ ಕುಟುಂಬಕ್ಕೆ ಸೇರಿದೆ. ಇದನ್ನು ಆಂಗ್ಲಭಾಷೆಯಲ್ಲಿ ಬೋಬಾಟ್ ಟ್ರೀ, ಮಂಕೀ ಬ್ರೆಡ್ ಟ್ರೀ, ಆಫ್ರಿಕನ್ ಕಲಬಾಶ್ ಟ್ರೀ, ಸೋರ್ ಗೋಡರ ಟ್ರೀ ಎಂದು ಕರೆಯುತ್ತಾರೆ.

ಮೂಲತಃ ಉಷ್ಣ ಆಫ್ರಿಕಾ ಖಂಡಕ್ಕೆ ಸೇರಿದ ವೃಕ್ಷಗಳಾಗಿವೆ. ಫ್ರೆಂಚ್ ಸಸ್ಯ ವಿಜ್ಞಾನಿ ಅಡೆನ್ಸನ್ ಸ್ಮರಣಾರ್ಥವಾಗಿ ಈ ಮರಗಳನ್ನು ಅಡೆನ್ಸೋನಿಯಾ ಎಂದು ಹೆಸರಿಸಲಾಗಿದೆ. ಇವು ಜಗತ್ತಿನ ಅತ್ಯಂತ ಪ್ರಾಚೀನ ವೃಕ್ಷಗಳ ಸಾಲಿಗೆ ಸೇರಿವೆ. ಈ ವೃಕ್ಷಗಳು ಸುಮಾರು 6000 ವರ್ಷಗಳವರೆಗೆ ಬದುಕಬಲ್ಲವು ಎಂದು ಇತಿಹಾಸದ ಪುಟಗಳು ಹೇಳುತ್ತವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !