ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಜನರಿಗೆ ‘ನರೇಗಾ’ ವರದಾನ

27 ಲಕ್ಷ ಮಾನವ ದಿನಗಳ ಸೃಜನೆ: ರಾಜ್ಯದಲ್ಲಿ ಹಾವೇರಿಗೆ 8ನೇ ಸ್ಥಾನ
Last Updated 4 ಅಕ್ಟೋಬರ್ 2020, 16:41 IST
ಅಕ್ಷರ ಗಾತ್ರ

ಹಾವೇರಿ: ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಗ್ರಾಮೀಣ ಜನರು ಮತ್ತು ನಗರಗಳಿಂದ ಹಳ್ಳಿಗಳಿಗೆ ವಲಸೆ ಬಂದವರಿಗೆ ಹೊಸ ಆಶಾಕಿರಣವಾಗಿ ಗೋಚರಿಸಿದ್ದು ‘ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ’. ದುಡಿಯುವ ಕೈಗಳಿಗೆ ಕೆಲಸ ನೀಡುವ ಮೂಲಕ ಅವರ ಬಾಳಿಗೆ ವರದಾನವಾಗಿದೆ.

ಬರಗಾಲ, ಅತಿವೃಷ್ಟಿ, ಪ್ರವಾಹ ಮುಂತಾದ ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲೂಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ‘ನರೇಗಾ’ ಬಡಜನರಿಗೆ ಆಸರೆಯಾಗಿದೆ.ಸ್ಥಳೀಯ ಮಟ್ಟದಲ್ಲಿ ಉದ್ಯೋಗ ನೀಡಿ, ನಿರುದ್ಯೋಗ ಸಮಸ್ಯೆ ನಿವಾರಿಸುವ ಜತೆಗೆ ವಲಸೆ ನಿಯಂತ್ರಿಸುವಲ್ಲೂ ಯಶಸ್ವಿಯಾಗಿದೆ.

ಶೇ 75ರಷ್ಟು ಸಾಧನೆ:

2020-21ನೇ ಸಾಲಿಗೆ ಸರ್ಕಾರವು ಜಿಲ್ಲೆಗೆ 37 ಲಕ್ಷ ಮಾನವ ದಿನಗಳ ಸೃಜನೆಗೆ ಗುರಿ ನೀಡಿದ್ದು, ಈಗಾಗಲೇ 27.44 ಲಕ್ಷ ಮಾನವ ದಿನಗಳ ಸೃಜನೆ ಮಾಡಲಾಗಿದೆ. ಅಂದರೆ, ಶೇ 75ರಷ್ಟು ಪ್ರಗತಿ ಸಾಧಿಸಲಾಗಿದ್ದು, ರಾಜ್ಯದಲ್ಲಿ ಹಾವೇರಿ ಜಿಲ್ಲೆಯು ಪ್ರಗತಿ ಸಾಧಿಸುವಲ್ಲಿ 8ನೇ ಸ್ಥಾನದೆ. ಸದರಿ ಯೋಜನೆಯಡಿ ಮಾರ್ಗಸೂಚಿಗಳ ಪ್ರಕಾರ ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಕಾಮಗಾರಿಗಳಿಗೆ ಕನಿಷ್ಠ ಶೇ 65ರಷ್ಟು ಸಾಧನೆ ಮಾಡಬೇಕಾಗಿದ್ದು, ಜಿಲ್ಲೆಯಲ್ಲಿ ಶೇ 71ರಷ್ಟು ಪ್ರಗತಿ ಸಾಧಿಸಲಾಗಿದೆ. ‌

ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಕನಿಷ್ಠ ಶೇ 60ರಷ್ಟು ಪ್ರಗತಿ ಸಾಧಿಸಬೇಕಾಗಿದ್ದು, ಜಿಲ್ಲೆಯು ಈಗಾಗಲೇ ಶೇ 70ರಷ್ಟು ಪ್ರಗತಿ ಸಾಧಿಸಿರುವುದು ವಿಶೇಷ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ಮಾರ್ಗದರ್ಶನದಲ್ಲಿ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಗ್ರಾಮೀಣ ಭಾಗದ ಜನರಿಗೆ ವೈಯಕ್ತಿಕ ಆಸ್ತಿಗಳ ಸೃಜನೆಗೂ ಒತ್ತು ನೀಡಲಾಗುತ್ತಿದೆ.

ಜಲ ಸಂರಕ್ಷಣೆಗೆ ವಿಶೇಷ ಒತ್ತು:

‘ನರೇಗಾ’ ಯೋಜನೆಯಡಿ ಜಿಲ್ಲೆಯಲ್ಲಿ ನೀರು ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಕೃಷಿ ಜಮೀನುಗಳಲ್ಲಿ 6,139 ಬದುಗಳ ನಿರ್ಮಾಣದ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆ ನೀರು ಇಂಗಿಸಲು ಜಿಲ್ಲಾ ಪಂಚಾಯಿತಿ ವಿಶೇಷ ಕಾಳಜಿ ವಹಿಸಿದೆ.

ಹಾನಗಲ್‌ ತಾಲ್ಲೂಕಿನ ಮಾಸನಕಟ್ಟೆ ಕೆರೆ, ರಟ್ಟೀಹಳ್ಳಿ ತಾಲ್ಲೂಕಿನ ಹುಲ್ಲತ್ತಿ ಕೆರೆ, ಬುರುಡಿಕಟ್ಟೆ ಕೆರೆ ಹಾಗೂ ಹಾವೇರಿ ತಾಲ್ಲೂಕಿನ ಅಗಸಿನಮಟ್ಟಿ ಕೆರೆ, ಸಂಗೂರ ಕೆರೆ, ಕುಳೇನೂರ ಕರೆಗಳು ಸೇರಿ ಒಟ್ಟು 127 ಕೆರೆಗಳಲ್ಲಿ ಹೂಳು ತೆಗೆಯುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಿ, ಅಂತರ್ಜಲ ಮಟ್ಟ ಹೆಚ್ಚಲು ನೆರವಾಗಲಿದೆ ಎಂಬುದು ರೈತರ ಆಶಾಭಾವನೆ.

ಜಲಮೂಲಗಳ ಪುನಶ್ಚೇತನ:

‘ಜಿಲ್ಲೆಯಲ್ಲಿ ತಾಲ್ಲೂಕುವಾರು ಸಾಂಪ್ರದಾಯಿಕ ನೀರು ಸಂಗ್ರಹಣಾ ವ್ಯವಸ್ಥೆಯನ್ನು ಸಮೀಕ್ಷೆ ಮಾಡಲಾಗಿದೆ. ಅದರಂತೆ, ಜಿಲ್ಲೆಯಲ್ಲಿ 11 ಕಲ್ಯಾಣಿ, 79 ಕುಂಟೆ, 253 ಗೋಕಟ್ಟೆ, 275 ಕಟ್ಟೆ ಸೇರಿದಂತೆ ಒಟ್ಟು 618 ಜಲಮೂಲಗಳನ್ನು ಪುನಶ್ಚೇತನಗೊಳಿಸಲು ನರೇಗಾದಡಿ ಕ್ರಮ ಕೈಗೊಂಡಿದ್ದು ನವೆಂಬರ್‌ನಿಂದ ಕಾಮಗಾರಿ ಆರಂಭಗೊಳ್ಳಲಿದೆ. ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿದು ಹೋಗಲು ನೀರುಗಾಲುವೆಗಳನ್ನು ಪುನರುಜ್ಜೀವನಗೊಳಿಸಲು ಸಹ ಆದ್ಯತೆ ನೀಡಲಾಗಿದೆ.ಕೊಳವೆಬಾವಿಗಳಿಗೆ ಇದುವರೆಗೆ 1,471 ಇಂಗು ಗುಂಡಿ ನಿರ್ಮಿಸಲಾಗಿದೆ’ ಎಂದುಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜನಾಧಿಕಾರಿ ಮಹಾಂತೇಶ ನರೇಗಲ್‌ ಹೇಳಿದರು.

ಜಲಾಮೃತ ಯೋಜನೆ

‘ಜಲಾಮೃತ ಜಲಾನಯನ ಯೋಜನೆಯಡಿ22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಿಬ್ಬದಿಂದ ಕಂದಕ ಮಾದರಿಯಲ್ಲಿಜಲಾನಯನ ಅಭಿವೃದ್ಧಿಪಡಿಸಲು ₹104 ಕೋಟಿ ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿದೆ. ಅದಕ್ಕಾಗಿ 16 ಸಾವಿರ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಪಾರಂಪರಿಕ ನೀರಿನ ಮೂಲಗಳ ಪುನಶ್ಚೇತನ ಮತ್ತು ಪುನರುಜ್ಜೀವನಗೊಳಿಸಲು 618 ಕಾಮಗಾರಿಗಳನ್ನು ಗುರುತಿಸಲಾಗಿದೆ. ಡಿಸೆಂಬರ್‌ನಿಂದ ಕಾಮಗಾರಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.

‘ವರದಾ ಸಿರಿ’

‘ವರದಾ ನದಿಯು ಜಿಲ್ಲೆಯಲ್ಲಿ ಒಟ್ಟು 123 ಕಿ.ಮೀ. ಉದ್ದ ಹರಿಯುತ್ತದೆ.‘ವರದಾ ಸಿರಿ’ ಯೋಜನೆಯಡಿ, ಈ ನದಿ ದಡದ ಎರಡೂ ಕಡೆ ಸುಮಾರು 65 ಸಾವಿರ ಸಸಿಗಳನ್ನು ನೆಡಲಾಗಿದೆ. ನದಿಯ ಮಧ್ಯ ಭಾಗದಿಂದ ಎರಡೂ ಬದಿಯಲ್ಲಿ ಸುಮಾರು 300ರಿಂದ 500 ಮೀಟರ್‌ನಲ್ಲಿ ಬರುವ ರೈತರ ಜಮೀನುಗಳಲ್ಲಿ ದಿಬ್ಬದ ಪ್ರದೇಶ, ಮಧ್ಯ ಪ್ರದೇಶ, ಕಂದಕದ ಪ್ರದೇಶವಾಗಿ ವಿಂಗಡಣೆ ಮಾಡಿ, ಕಾಮಗಾರಿ ಕೈಗೊಳ್ಳಲು 4,200 ಸರ್ವೆ ನಂಬರ್‌ ಗುರುತಿಸಲಾಗಿದೆ’ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಮೇಶ ದೇಸಾಯಿ ಹೇಳಿದರು.

ರೈತ ಮುಖಂಡನ ಮಾನವೀಯತೆ:

ಕೊರೊನಾ ಹಿನ್ನೆಲೆ ಕೊಲಿ ಕಾರ್ಮಿಕರು ಉದ್ಯೋಗವಿಲ್ಲದೆ ಪರದಾಡುತ್ತಿರುವುದನ್ನು ಕಂಡ ಶಿಗ್ಗಾವಿ ತಾಲ್ಲೂಕಿನ ಅರಟಾಳದ ರೈತ ಮುಖಂಡ ವೀರೇಶ ಪಾಟೀಲ ಅವರು ತಮ್ಮ ಗ್ರಾಮದ ರಕ್ಷಸಕಟ್ಟಿ ಕೆರೆ ಮತ್ತು ಕೆರೆ ಸುತ್ತಲಿನ ಕಾಲುವೆಗಳ ಹೊಳೆತ್ತುವ ಕಾಮಗಾರಿ ಹಮ್ಮಿಕೊಂಡು ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಅರಟಾಳ ಗ್ರಾಮದ ಸುಮಾರು 22 ಕುಟುಂಬಗಳ ತಲಾ ಒಬ್ಬರಿಗೆ ಸುಮಾರು 10 ದಿನಗಳವರೆಗೆ ಉದ್ಯೋಗ ಕಲ್ಪಿಸಿದರು. ಅದರಂತೆ ತಲಾ ಒಬ್ಬರಿಗೆ ದಿನಕ್ಕೆ ₹250 ರೂಪಾಯಿ ಕೂಲಿ ನೀಡಿ, ನೆರವಿನ ಹಸ್ತ ಚಾಚಿದ್ದಾರೆ.

200 ಮಾನವ ದಿನಕ್ಕೆ ಒತ್ತಾಯ:

‘ಉದ್ಯೋಗ ಖಾತ್ರಿ ಯೋಜನೆಗೆ ₹60 ಸಾವಿರ ಕೋಟಿ ಮೀಸಲಿಡಲಾಗಿತ್ತು. ಈ ಬಾರಿ ಕೇಂದ್ರ ಸರ್ಕಾರ ‘ಆತ್ಮನಿರ್ಭರ’ ಯೋಜನೆಯಡಿ ₹1 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದೆ. 100 ಮಾನವ ದಿನಗಳನ್ನು 200 ಮಾನವ ದಿನಗಳಿಗೆ ಹೆಚ್ಚಿಸುವ ಮೂಲಕಕೋವಿಡ್‌ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಬಡಜನರಿಗೆ ನೆರವು ನೀಡಲು ಸರ್ಕಾರ ಮುಂದಾಗಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಸಿಇಒ ಅವರಿಗೆ ಮನವಿ ಸಲ್ಲಿಸಿದ್ದೇವೆ’ ಎನ್ನುತ್ತಾರೆ ವನಸಿರಿ ರೂರಲ್‌ ಡೆವಲಪ್‌ಮೆಂಟ್‌ ಸೊಸೈಟಿಯ ಎಸ್‌.ಡಿ. ಬಡಿಗೇರ್‌.

ಈ ಬಾರಿ ಕೌಶಲರಹಿತ ಜನರಿಗಷ್ಟೇ ಅಲ್ಲ, ವಿದ್ಯಾವಂತ ಯುವಕರಿಗೂ ‘ನರೇಗಾ’ ಉದ್ಯೋಗ ನೀಡಿದೆ. ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಗೆ ವಿಶೇಷ ಒತ್ತು ನೀಡಿದ್ದೇವೆ.
– ರಮೇಶ ದೇಸಾಯಿ, ಸಿಇಒ, ಜಿಲ್ಲಾ ಪಂಚಾಯಿತಿ

ಲಾಕ್‌ಡೌನ್‌ ಅವಧಿಯಲ್ಲಿ ಕೂಲಿ ಅರಸಿ ಗೋವಾಕ್ಕೆ ಹೊರಟಿದ್ದೆ. ವನಸಿರಿ ಸಂಸ್ಥೆಯವರು ‘ನರೇಗಾ’ದಡಿ ಊರಿನಲ್ಲೇ ಉದ್ಯೋಗ ನೀಡಿ, ಸಹಾಯ ಮಾಡಿದರು
– ಬೀರಪ್ಪ ಗೋಡೇರ್‌, ಬುಡಪನಹಳ್ಳಿ, ಕೂಲಿ ಕಾರ್ಮಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT