ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ| ಓಟಗಾರನಿಗೆ ಬೇಕಿದೆ ‘ನೆರವಿನ ಗ್ಲುಕೋಸ್‌’

ಬಡತನದಿಂದ ಕಾಲೇಜು ತೊರೆದ ಯುವಕ; ಕೂಲಿಯೇ ‘ಪ್ರದೀಪ’ನ ಕಾಯಕ
Last Updated 23 ಜನವರಿ 2020, 18:30 IST
ಅಕ್ಷರ ಗಾತ್ರ

ಹಾವೇರಿ: ಟ್ರ್ಯಾಕ್‌ನಲ್ಲಿ ಬಿಟ್ಟರೆ ಚಿರತೆಯಂತೆಓಡುವ ಈ ಯುವಕ, ತಾಲ್ಲೂಕು, ಜಿಲ್ಲೆ, ರಾಜ್ಯ ಮಟ್ಟದ ಓಟದ ಸ್ಪರ್ಧೆಗಳಲ್ಲಿ ತನ್ನ ಸಾಧನೆಯ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾನೆ.

ನಗರದ ಹೊಸನಗರ ಬಡಾವಣೆಯ ನಿವಾಸಿಯಾದ 20ರ ಹರೆಯದ ಪ್ರದೀಪ ಎಸ್‌.ಗೊರವರಗೆ ಓಟವೆಂದರೆ ಪಂಚಪ್ರಾಣ. ಹಾಗಾಗಿಯೇ ನಿತ್ಯ ನಸುಕಿಗೆ ಎದ್ದು ಬೆಳಿಗ್ಗೆ 5.30ರಿಂದ 8ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಓಟದ ಅಭ್ಯಾಸದಲ್ಲಿ ತೊಡಗುತ್ತಾನೆ. ಮತ್ತೆ ಸಂಜೆ 6ರಿಂದ 8ರವರೆಗೆ ತಾಲೀಮು ಮುಂದುವರಿಯುತ್ತದೆ. ವಾರಕ್ಕೆ ಎರಡು ದಿನ 10ರಿಂದ 15 ಕಿ.ಮೀ. ಗುಡ್ಡಗಾಡು ಓಟದಲ್ಲಿ (ಕ್ರಾಸ್‌ಕಂಟ್ರಿ) ತೊಡಗುತ್ತಾನೆ. ಜಿಲ್ಲಾ ಕ್ರೀಡಾಂಗಣದಿಂದ ದೇವಗಿರಿ ಗುಡ್ಡದತ್ತ ಓಟದ ತಾಲೀಮು ನಡೆಯುತ್ತದೆ.

ಹಾವೇರಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟದ 1,500 ಮೀ. ಓಟದಲ್ಲಿ ಪ್ರಥಮ, ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದ್ವಿತೀಯ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದ 5 ಸಾವಿರ ಮೀಟರ್‌ ಓಟದಲ್ಲಿ ಪ್ರಥಮ ಸೇರಿದಂತೆ ಹಲವಾರು ಪದಕ ಮತ್ತು ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾನೆ. 2016–17ರ ರಾಜ್ಯಮಟ್ಟದ ಪಿಯು ಕಾಲೇಜುಗಳ ಅಥ್ಲೆಟಿಕ್ಸ್‌ ಸ್ಪರ್ಧೆಯಲ್ಲಿ ತೀವ್ರ ಮಂಡಿ ನೋವಿನಿಂದ ಬಹುಮಾನ ಗಿಟ್ಟಿಸಲು ಸಾಧ್ಯವಾಗಲಿಲ್ಲ ಎಂಬುದು ಪ್ರದೀಪನ ನೋವಿನ ಮಾತು.

ತಬ್ಬಲಿಯಾದ ಪ್ರದೀಪ:

ಪ್ರದೀಪ ಎರಡೂವರೆ ವರ್ಷದವನಿದ್ದಾಗ, ತಂದೆ ಶಿವಪ್ಪ ಗೊರವರ ಅವರು ಪತ್ನಿ ಮಹದೇವಕ್ಕ ಅವರೊಂದಿಗೆ ಜಗಳ ಮಾಡಿಕೊಂಡು ಮನೆಬಿಟ್ಟು ಹೋದರು. ಅಂದಿನಿಂದ ಪ್ರದೀಪ ಮತ್ತು ಇವರ ಅಣ್ಣ ಮಾರುತಿ ತಾಯಿಯ ಆಸರೆಯಲ್ಲೇ ಬೆಳೆದರು. ಮಹದೇವಕ್ಕ ಏಳೆಂಟು ಮನೆಗಳಲ್ಲಿ ‘ಮನೆಗೆಲಸ’ ಮಾಡಿಕೊಂಡು, ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದರು. ‘ವೈಟ್‌ ಜಾಂಡೀಸ್‌’ ಎಂಬ ಸದ್ದಿಲ್ಲದೆ ಬರುವ ಮಹಾಮಾರಿ ರೋಗಕ್ಕೆ 2018ರ ಸೆಪ್ಟೆಂಬರ್‌ನಲ್ಲಿ ಮಹದೇವಕ್ಕ ಅಸುನೀಗಿದರು.

ತಾಯಿ ತೀರಿ ಹೋದ ಬಳಿಕ, ಪ್ರದೀಪ ಮತ್ತು ಮಾರುತಿ ಅಕ್ಷರಶಃ ಅನಾಥರಾದರು. ಈಗ ಅವರ ಪಾಲಿಗೆ ಉಳಿದಿರುವ ಏಕೈಕ ಆಸ್ತಿಯೆಂದರೆ ಸರ್ಕಾರದಿಂದ ಸಿಕ್ಕಿರುವ ‘ಆಶ್ರಯ ಮನೆ’ ಮಾತ್ರ. ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿದ್ದ ಪ್ರದೀಪನಿಗೆ ಕಾಲೇಜು ಶುಲ್ಕ, ನಿತ್ಯದ ಖರ್ಚು ಭರಿಸಲು ದಿಕ್ಕು ಕಾಣದೆ, ವ್ಯಾಸಂಗಕ್ಕೆ ತಿಲಾಂಜಲಿ ನೀಡಿ ಈಗ ಕೂಲಿಗೆ ಹೋಗುತ್ತಿದ್ದಾನೆ.

ದುಡಿಮೆಯೇ ದೇವರು:

ಪ್ರದೀಪ,ಎರಡು ವರ್ಷಗಳಿಂದನಗರದ ಹೋಟೆಲ್‌, ಡಾಬಾ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಲ್ಲಿ ಮಾಣಿಯಾಗಿ ಕೆಲಸ ಮಾಡಿದ್ದಾನೆ. ನಂತರ ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ, ಪ್ಲಂಬಿಂಗ್‌, ಪೇಂಟಿಂಗ್‌ ಕೆಲಸಗಳಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. ಇಷ್ಟೆಲ್ಲ ಕಷ್ಟಗಳ ನಡುವೆಯೂ ಅವನು ಓಟದ ಅಭ್ಯಾಸವನ್ನು ಮರೆತಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸಬೇಕು ಎಂಬುದು ಅವನ ಅದಮ್ಯ ಆಸೆ.

‘ನಾನು ಬರಿಗಾಲಲ್ಲಿ ಓಡುವುದನ್ನು ನೋಡಿ ಕೋಚ್‌ ಬಾಲಕೃಷ್ಣ ಅವಲಕ್ಕಿ ಎಂಬುವರು ಶೂ ಕೊಡಿಸಿದ್ದಾರೆ. ನನಗೆ ಅನೇಕ ಬಾರಿ ಹಣ ಕೊಟ್ಟು ಕ್ರೀಡಾಕೂಟಗಳಿಗೆ ಕಳುಹಿಸಿದ್ದಾರೆ. ತಿನ್ನಲು ಹಣವಿಲ್ಲದಿದ್ದಾಗ ಹಾಲು, ಊಟ ಕೊಡಿಸಿದ್ದಾರೆ. ನನ್ನ ಕ್ರೀಡಾ ಸಾಧನೆಗೆ ಅವರೇ ಸ್ಫೂರ್ತಿ’ ಎನ್ನುತ್ತಾನೆ ಪ್ರದೀಪ.

‘2019ರಲ್ಲಿ ಗದಗದಲ್ಲಿ ನಡೆದ ಸೇನಾ ರ‍್ಯಾಲಿಗೆ ಹೋಗಿದ್ದೆ. ದೈಹಿಕ ಸಾಮರ್ಥ್ಯ ಮತ್ತು ವೈದ್ಯಕೀಯ ಪರೀಕ್ಷೆ ಎರಡರಲ್ಲೂ ಉತ್ತೀರ್ಣನಾದೆ. ಆದರೆ, ಲಿಖಿತ ಪರೀಕ್ಷೆಯಲ್ಲಿ ಅನುರ್ತೀರ್ಣನಾಗಿ ಕೆಲಸ ಗಿಟ್ಟಿಸಲು ಸಾಧ್ಯವಾಗಲಿಲ್ಲ. ನಾನು ಕಲಾ ವಿದ್ಯಾರ್ಥಿಯಾಗಿರುವುದರಿಂದ ಮಾನಸಿಕ ಸಾಮರ್ಥ್ಯ, ವಿಜ್ಞಾನ, ಗಣಿತದ ಪ್ರಶ್ನೆಗಳನ್ನು ಬಿಡಿಸುವಲ್ಲಿ ಎಡವಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುವಷ್ಟು ಶಕ್ತಿ ನನಗಿಲ್ಲ. ಯಾರಾದರೂ ಧನ ಸಹಾಯ ಮಾಡಿದರೆ ಕೋಚಿಂಗ್‌ ಪಡೆದು ಖಂಡಿತ ಸೈನಿಕನಾಗುತ್ತೇನೆ. ಉತ್ತಮ ಕ್ರೀಡಾಸಾಧನೆಯನ್ನೂ ಮಾಡುತ್ತೇನೆ’ ಎಂದು ಆತ್ಮವಿಶ್ವಾಸದ ನುಡಿಗಳನ್ನಾಡುತ್ತಾನೆ ಪ್ರದೀಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT