ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳೋರಿಲ್ಲ ಸರ್ಕಾರಿ ಶಾಲಾ ಮಕ್ಕಳ ಗೋಳು...

ಬಿರುಕು ಬಿಟ್ಟ ತರಗತಿ ಕೊಠಡಿ ಗೋಡೆ * ಪುಂಡರ ಹಾವಳಿಗೆ ಶಿಕ್ಷಕರು ಕಂಗಾಲು
Last Updated 23 ಜೂನ್ 2019, 19:30 IST
ಅಕ್ಷರ ಗಾತ್ರ

ಹಾವೇರಿ: ಅಲ್ಲಲ್ಲಿ ಬಿರುಕುಬಿಟ್ಟು ಆಗಲೋ, ಈಗಲೋ ಎನ್ನುತ್ತಿರುವ ಗೋಡೆಗಳು. ಮಳೆ ಬಂದಾಗ ತೊಟ್ಟಿಕ್ಕುವ ಚಾವಣಿಗಳು. ಪುಂಡರ ಹಾವಳಿಗೆ ಮುರಿದು ಬಿದ್ದ ಕಿಟಕಿ–ಬಾಗಿಲುಗಳು. ಕೊಠಡಿ ಪಕ್ಕದ ಗಟಾರದ ದುರ್ನಾತದಲ್ಲೇ ಪಾಠ ಕೇಳುತ್ತಿರುವ ಮಕ್ಕಳು. ನೀರು, ಬಾಗಿಲುಗಳೇ ಇಲ್ಲದ ಶೌಚಾಲಯಗಳು...

ಇದು ಹಾವೇರಿ ನಗರದಲ್ಲಿರುವ ಬಹುತೇಕ ಸರ್ಕಾರಿ ಶಾಲೆಗಳ ವಾಸ್ತವ ಸ್ಥಿತಿ. ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಾನಾ ಯೋಜನೆಗಳನ್ನು ಘೋಷಿಸುತ್ತಲೇ ಇದೆಯಾದರೂ, ಸರ್ಕಾರಿ ಶಾಲೆಗಳ ಕಟ್ಟಡಗಳು ಮಾತ್ರ ಶೋಚನೀಯ ಹಂತ ತಲುಪಿವೆ.

ಮೊದಲೇ ಖಾಸಗಿ ವಿದ್ಯಾಕೇಂದ್ರಗಳ ಹಾವಳಿಗೆ ಸಿಕ್ಕು ಉಸಿರುಗಟ್ಟಿದ ವಾತಾವರಣದಲ್ಲಿರುವ ನಗರದ ಸರ್ಕಾರಿ ಶಾಲೆಗಳು, ಇಂದಿಗೂ ಸೌಕರ್ಯಗಳು ಸಿಗದೆ ನರಳುತ್ತಿವೆ. ನಗರದ ಆರು ಶಾಲೆಗಳು ಮಧ್ಯಾಹ್ನದ ಬಿಸಿಯೂಟಕ್ಕೆ ಹೊರಗಿನಿಂದ ನೀರು ತರಿಸಿಕೊಳ್ಳುತ್ತಿವೆ.

ಗೋಡೆಗಳು ಬಿರುಕು: ಶಿವಾಜಿನಗರದಲ್ಲಿರುವ (ಶಾಲೆ ಸಂಖ್ಯೆ 3) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 200ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿದ್ದಾರೆ. ಆದರೆ, ಅಷ್ಟೂ ಮಕ್ಕಳಿಗೆ ಇರುವುದು ಒಂದೇ ಶೌಚಾಲಯ. ಇಡೀ ಕಟ್ಟಡವೇ ಸೀಳುಬಿಟ್ಟಿದ್ದು, ಅಲ್ಲಲ್ಲಿ ಸಿಮೆಂಟ್‌ನಿಂದ ತೇಪೆ ಹಚ್ಚುವ ಕೆಲಸ ನಡೆದಿದೆ.

ಈ ಶಾಲೆಯ ಪುಟ್ಟ ಮಕ್ಕಳು ಅಕ್ಷರ ಮಾಲೆ ಹೇಳುವಾಗ ಅ,ಆ,ಇ.ಈ... ಎನ್ನುತ್ತಲೇ ಕಣ್ಣರಳಿಸುತ್ತ ಆಕಾಶ ನೋಡುತ್ತಿವೆ. ಗೋಡೆ ಪಕ್ಕಕ್ಕೆ ಸರಿಯಲು ಹೇಳಿದರೆ ಭಯದಲ್ಲಿ ಉಗುಳು ನುಂಗುತ್ತಿವೆ. ಶಿಕ್ಷಕರುಪಠ್ಯಪುಸ್ತಕ–ಬೋರ್ಡ್ ನೋಡುವುದಕ್ಕಿಂತಲೂ ಹೆಚ್ಚಾಗಿ, ಶಾಲೆಯ ಕಟ್ಟಡದ ಮೇಲೇ ಕಣ್ಣು ಹಾಯಿಸಿ ಜಾಗ್ರತೆ ವಹಿಸುತ್ತಿದ್ದಾರೆ.

‘ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳ ಮಕ್ಕಳ ಹಾಜರಾತಿ ಕುಸಿಯುತ್ತಿದೆ. ಅದಕ್ಕೆ ಶೈಕ್ಷಣಿಕ ಗುಣಮಟ್ಟ ಒಂದು ಕಾರಣವಾದರೆ, ಶಿಥಿಲಗೊಂಡ ಕಟ್ಟಡಗಳು ಇನ್ನೊಂದು ಬಹುಮುಖ್ಯ ಕಾರಣ.ರಾತ್ರಿ ವೇಳೆ ಕೆಲವರು ಶಾಲಾ ಆವರಣದಲ್ಲೇ ಕಸ ಸುರಿಯುತ್ತಿದ್ದು, ಅದನ್ನು ಬಾಚುವ ಕೆಲಸ ಶಿಕ್ಷಕರು ಹಾಗೂ ಮಕ್ಕಳದ್ದು’ ಎನ್ನುತ್ತಾರೆ ಆ ಶಾಲೆಯ ಶಿಕ್ಷಕರೊಬ್ಬರು.

ಜ್ಞಾನದೇಗುಲದಲ್ಲಿ ಗುಂಡು–ತುಂಡು:ನಾಗೇಂದ್ರನಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ನಗರದಲ್ಲೇ ಅತಿ ದೊಡ್ಡ ಶಾಲೆ. ಮೊದಲು ಇಲ್ಲಿ 680 ಮಕ್ಕಳು ಕಲಿಯುತ್ತಿದ್ದರು. ಈಗ ಆ ಸಂಖ್ಯೆ 340ಕ್ಕೆ ಇಳಿದಿದೆ. ನಾಲ್ಕು ತರಗತಿ ಕೊಠಡಿಗಳ ಗೋಡೆಗಳು ಪೂರ್ತಿ ಸೀಳು ಬಿಟ್ಟಿವೆ. ಇರುವ ಎರಡು ಶೌಚಾಲಯಗಳಿಗೆ ಹೋಗಲು ದಾರಿಯೇ ಇಲ್ಲವಾಗಿದೆ.

‘ಸ್ಥಳೀಯ ಪುಂಡರು ಶಾಲೆಯ ಮಹಡಿಯನ್ನು ತಮ್ಮ ಮೋಜಿನ ಪಾರ್ಟಿಗೆ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಮೂರ್ನಾಲ್ಕು ದಿನಗಳ ಹಿಂದೆ ಸುಮಾರು 30ಕ್ಕೂ ಹೆಚ್ಚು ಯುವಕರು ರಾತ್ರಿ ವೇಳೆ ಆವರಣಕ್ಕೆ ನುಗ್ಗಿ ಟ್ಯೂಬ್‌ಲೈಟ್ ಹಾಗೂ ಸೋಲಾರ್ ಬಲ್ಬ್‌ಗಳನ್ನು ಒಡೆದು ಹಾಕಿದ್ದಾರೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳನ್ನು ಎಸೆದಿದ್ದಲ್ಲದೇ, ತಾವು ಮಾಂಸ ತಿಂದು ಮೂಳೆಗಳನ್ನು ತರಗತಿ ಒಳಗೆ ಬಿಸಾಡಿದ್ದಾರೆ. ಈ ಸಂಬಂಧ ಹಾವೇರಿ ನಗರ ಠಾಣೆಗೆ ದೂರು ಕೊಟ್ಟಿದ್ದೇವೆ. ಅಲ್ಲದೇ, ತಡೆಗೋಡೆಯನ್ನು ಐದು ಅಡಿಯಿಂದ 12 ಅಡಿಗೆ ಎತ್ತರಿಸಿದ್ದೇವೆ’ ಎಂದು ಶಾಲೆಯ ಮುಖ್ಯಶಿಕ್ಷಕ ಅಶೋಕ್ ಹಾವನೂರ ಹೇಳಿದರು.

ಪುಂಡರ ಹಾವಳಿ ತಪ್ಪಿಸಲು ಶಾಲಾ ಕಟ್ಟಡಕ್ಕೆ ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಸುವಂತೆ ಮುಖ್ಯ ಶಿಕ್ಷಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ, ಕ್ಯಾಮೆರಾ ಇಲ್ಲದಿದ್ದರೂ ಕೆಲ ಶಾಲೆಗಳ ಶಿಕ್ಷಕರು ಎಚ್ಚರಿಕೆ ಗಂಟೆಯಂತೆ ‘ನೀವು ಸಿ.ಸಿ ಟಿ.ವಿ ಕ್ಯಾಮೆರಾದ ಕಣ್ಗಾವಲಿನಲ್ಲಿದ್ದೀರಿ’ ಎಂಬ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.

ಸದ್ಯದಲ್ಲೇ ನವೀಕರಣ: ‘ಜಿಲ್ಲೆಯ ಶಾಲಾ ಕಟ್ಟಡಗಳ ರಿಪೇರಿಗೆ ಹಣ ಕೋರಿ 2018–19ರ ಸಾಲಿನಲ್ಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೆವು. ಆಗ ಬಿಡುಗಡೆಯಾದ ಅನುದಾನದಲ್ಲಿ ಬ್ಯಾಡಗಿಯ ಹಾಗೂ ಹಾವೇರಿ ನಗರದ ಕೆಲ ಶಾಲಾ ಕಟ್ಟಡಗಳ ರಿಪೇರಿ ಮಾಡಿಸಲಾಗಿದೆ. ಈ ವರ್ಷವೂ ಹೊಸ ಪ್ರಸ್ತಾವ ಕಳುಹಿಸಿದ್ದೇವೆ. ಸದ್ಯದಲ್ಲೇ ಕಟ್ಟಡಗಳ ನವೀಕರಣ ಆಗಲಿದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಅಂದಾನಪ್ಪ ವಡಗೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

**
ಸರ್ಕಾರಿ ಶಾಲೆಗಳಿಗೂ ಪೊಲೀಸ್ ಭದ್ರತೆ!
ಎರಡು ವರ್ಷಗಳ ಹಿಂದೆ ಶಾಲಾ ಆವರಣಕ್ಕೆ ನುಗ್ಗಿದ್ದ ಕಳ್ಳರು, ನೀರನ್ನೆಲ್ಲ ಚೆಲ್ಲಿ 2 ಸಾವಿರ ಲೀಟರ್ ಸಾಮರ್ಥ್ಯದ ಸಿಂಟ್ಯಾಕ್ಸ್ ಹೊತ್ತೊಯ್ದಿದ್ದರು. ಆ ನಂತರವೂ ಮೂರ್ನಾಲ್ಕು ಸಲ ಕಳ್ಳತನ ನಡೆದಿದ್ದರಿಂದ ಬೃಹತ್ ಪ್ರತಿಭಟನೆ ನಡೆಸಿದ್ದೆವು. ಕೊನೆಗೆ ಶಾಲೆಯ ಸಮುದಾಯ ಭವನವನ್ನೇ ಹೊರಠಾಣೆಯನ್ನಾಗಿ ಮಾಡಿ, ಇಬ್ಬರು ಪೊಲೀಸರನ್ನು ನೇಮಿಸಲಾಯಿತು. ಅವರಿದ್ದರೂ ಪುಂಡರ ಕಾಟ ಮಾತ್ರ ನಿಂತಿಲ್ಲ.
-ಮಲ್ಲೇಶಪ್ಪ ಪಟ್ಟಣಶೆಟ್ಟಿ, ಹಾವೇರಿ

***
‘ಶಾಲೆ ಪುನರಾರಂಭಿಸಿ’
ನಾವು ಆಡಿ, ಕಲಿತ ಜೆ.ಪಿ.ಸರ್ಕಲ್‌ನಲ್ಲಿರುವ ಸರ್ಕಾರಿ ಶಾಲೆ ಈಗ ಮಕ್ಕಳ ಕೊರತೆಯಿಂದ ಬಂದ್ ಆಗಿದೆ. ಸರ್ಕಾರ ಮಕ್ಕಳನ್ನು ಪುನಃ ಶಾಲೆಯತ್ತ ಸೆಳೆಯಲು ವಿಶೇಷ ಯೋಜನೆ ರೂಪಿಸುವುದನ್ನು ಬಿಟ್ಟು ಕಣ್ಮುಚ್ಚಿ ಕುಳಿತಿದೆ. ಸರ್ಕಾರಿ ಶಾಲೆ ಎಂದರೆ ಎಲ್ಲರಲ್ಲೂ ಅಸಡ್ಡೆಯ ಭಾವನೆ ಇದೆ. ಈ ಶಾಲೆ ಮತ್ತೆ ಶುರುವಾಗಬಹುದೆಂಬ ನಿರೀಕ್ಷೆಯಲ್ಲಿ ಕಾಯುತ್ತಲೇ ಇದ್ದೇವೆ.
-ದೀಪಕ್, ಜೆ.ಪಿ.ಸರ್ಕಲ್

***
‘ಗಿಡ ನೆಡಲು ಜಾಗ ಕೊಡಿ‌’
ಬೇರೆಲ್ಲ ಶಾಲೆಗಳ ಆವರಣಗಳೂ ಹಚ್ಚ–ಹಸಿರಿನಿಂದ ಕಂಗೊಳಿಸುತ್ತಿವೆ. ಆದರೆ, ನಮ್ಮ ಶಾಲೆಗೆ ಆವರಣವೇ ಇಲ್ಲ. ಸುತ್ತಲೂ ಕಾಂಪೌಂಡ್ ನಿರ್ಮಿಸಿದರೆ ನಾವೂ ಹಸಿರು ಬೆಳೆಸಿ ಮಾದರಿ ಶಾಲೆಯನ್ನಾಗಿ ಮಾಡಬಹುದು. ಇಡೀ ಊರಿನ ಗಟಾರದ ನೀರು ನಮ್ಮ ಶಾಲೆ ಪಕ್ಕದ ಹೊಂಡದಲ್ಲೇ ಸಂಗ್ರಹವಾಗುತ್ತಿದೆ. ಮೂಗು ಮುಚ್ಚಿಕೊಂಡು ಪಾಠ ಕೇಳಬೇಕಾದ ಸ್ಥಿತಿ ಇದೆ.
-ವಿದ್ಯಾರ್ಥಿನಿ, ಉರ್ದು ಶಾಲೆ,ನಾಗೇಂದ್ರನಮಟ್ಟಿ

***
ಸಿ.ಸಿ ಟಿ.ವಿ ಕ್ಯಾಮೆರಾ ಅಳವಡಿಕೆ
‘ನಮ್ಮ ಶಾಲೆಯಲ್ಲಿ 280 ಮಕ್ಕಳು ಕಲಿಯುತ್ತಿದ್ದು, ಮೂರು ಕೊಠಡಿಗಳು ಹಾಳಾಗಿದ್ದವು. ಸ್ಥಳೀಯರ ಜತೆಗೂಡಿ ಅವುಗಳನ್ನು ನಾವೇ ರಿಪೇರಿ ಮಾಡಿಸುತ್ತಿದ್ದೇವೆ. ರಜೆ ದಿನಗಳಲ್ಲಿ ಶಾಲೆಯ ಕಟ್ಟೆ ಮೇಲೆ ಇಸ್ಪೀಟ್ ಆಡುವುದು, ಗೋಡೆಗೆ ಗುಟ್ಕಾ ಉಗಿಯುವುದು, ವಿದ್ಯಾರ್ಥಿನಿಯ ಶೌಚಾಲಯದ ಗೋಡೆ ಮೇಲೆ ಅಶ್ಲೀಲವಾಗಿ ಬರೆಯುವುದು ಸೇರಿದಂತೆ ಸ್ಥಳೀಯ ಪುಂಡರ ಉಪಟಳ ಹೆಚ್ಚಿದೆ. ಹೀಗಾಗಿ, 13 ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿ ನಿಗಾ ಇಟ್ಟಿದ್ದೇವೆ.
-ಎನ್‌.ಎ.ಪಾಟೀಲ,‌ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ, ಹಾವೇರಿ

***

13,222 -ಹಾವೇರಿ ನಗರದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು
5 -ನಗರದಲ್ಲಿರುವ ಕಿರಿಯ ಪ್ರಾಥಮಿಕ ಶಾಲೆಗಳು
11 -ಹಿರಿಯ ಪ್ರಾಥಮಿಕ ಶಾಲೆಗಳು
3 -ಸರ್ಕಾರಿ ಪ್ರೌಢಶಾಲೆಗಳು
3 -ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗಳು
5 -ಅನುದಾನಿತ ಪ್ರೌಢಶಾಲೆಗಳು
13 -ಅನುದಾನರಹಿತ ಪ್ರೌಢಶಾಲೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT