ಮಂಗಳವಾರ, ಅಕ್ಟೋಬರ್ 26, 2021
27 °C
ಪಾರದರ್ಶಕ ಹಾಗೂ ಮುಕ್ತ ಚುನಾವಣೆಗೆ ಸಹಕರಿಸಿ: ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ

ಹಾನಗಲ್ ಉಪ ಚುನಾವಣೆ: ನಿಯಮ ಉಲ್ಲಂಘಿಸಿದರೆ ಪ್ರಚಾರಕ್ಕೆ ಅವಕಾಶವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ರಾಜಕೀಯ ಪಕ್ಷಗಳು ಚುನಾವಣಾ ಮಾದರಿ ನೀತಿಸಂಹಿತೆ ಹಾಗೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದರೆ ಆ ಸಮಯದಿಂದ ಯಾವುದೇ ಪ್ರಚಾರ ಮುಂದುವರಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಪಕ್ಷಗಳ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಳಕೆ ಮಾಡುವ ವಿದ್ಯುನ್ಮಾನ ಮತಯಂತ್ರಗಳ ಮೊದಲ ಹಂತದ ಸಮ್ಮಿಶ್ರೀಕರಣ (ರ‍್ಯಾಂಡಮೈಸೇಷನ್‌) ನಡೆಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಪಾರದರ್ಶಕ ಹಾಗೂ ಮುಕ್ತ ಚುನಾವಣೆಗೆ ಎಲ್ಲ ರಾಜಕೀಯ ಪಕ್ಷದ ಮುಖಂಡರು ಚುನಾವಣೆ ಮಾದರಿ ನೀತಿಸಂಹಿತೆಯನ್ನು ಕಡ್ಡಾಯವಾಗಿ ಪಾಲನೆ ಮಾಡುವಂತೆ ತಿಳಿಸಿದರು.

ಚುನಾವಣಾ ವೆಚ್ಚವಾಗಿ ಪ್ರತಿ ಅಭ್ಯರ್ಥಿಗೆ ₹30.80 ಲಕ್ಷ ನಿಗದಿಪಡಿಸಲಾಗಿದೆ. ಈಗಾಗಲೇ ಪ್ರಚಾರ ಸಾಮಗ್ರಿಗಳು, ವಾಹನ, ಜಾಹೀರಾತು ಸೇರಿದಂತೆ ಎಲ್ಲ ಪರಿಕರಿಗಳಿಗೂ ದರ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗಿದೆ. ಈ ದರವನ್ನು ಅನ್ವಯಿಸಿ ಅಭ್ಯರ್ಥಿಯ ಚುನಾವಣಾ ವೆಚ್ಚಕ್ಕೆ ಪರಿಗಣಿಸಲಾಗುವುದು ಎಂದು ಮಾಹಿತಿ ನೀಡಿದರು.

ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಭ್ಯರ್ಥಿ ಸೇರಿ ಮೂರು ಜನರಿಗೆ ಮಾತ್ರ ಅವಕಾಶವಿದೆ. ಬೈಕ್, ಸೈಕಲ್ ರ್‍ಯಾಲಿ ಮತ್ತು ರೋಡ್‌ ಷೋಗೆ ಅವಕಾಶ ಇರುವುದಿಲ್ಲ. ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಐದು ಜನರಿಗೆ ಮಾತ್ರ ಅವಕಾಶವಿದೆ. 

ಹಾನಗಲ್ ಕ್ಷೇತ್ರದಲ್ಲಿ 263 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್ ಹಾಗೂ ವಿವಿ ಪ್ಯಾಟ್‍ಗಳ ಮೊದಲ ಹಂತದ ರ‍್ಯಾಂಡಮೈಸೇಷನ್‌ ಮಾಡಲಾಗಿದೆ. ಹಾನಗಲ್‍ನಲ್ಲಿ ಎರಡನೇ ಹಂತದ ರ‍್ಯಾಂಡಮೈಸೇಷನ್‌ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳಿಗೆ ಅ.16ರಂದು ಮೊದಲ ಹಂತದ ತರಬೇತಿ ಬ್ಯಾಡಗಿ, ಹಾವೇರಿ ಹಾಗೂ ಹಾನಗಲ್‍ನಲ್ಲಿ ನಡೆಯಲಿದೆ. ಎರಡನೇ ಹಂತದ ತರಬೇತಿ ಅ.24 ಹಾಗೂ 25ರಂದು ಹಾನಗಲ್‍ನಲ್ಲಿ ನಡೆಯಲಿದೆ ಎಂದು ಹೇಳಿದರು.

ಅ.29ರಂದು ಮಸ್ಟರಿಂಗ್ ಹಾಗೂ ಅ.30ರಂದು ಡಿಮಸ್ಟರಿಂಗ್‌ ಹಾನಗಲ್ ಪಟ್ಟಣದ ಕುಮಾರಸ್ವಾಮಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಜರುಗಲಿದೆ. ನ.2ರಂದು ಮತ ಎಣಿಕೆ ಕಾರ್ಯ ಹಾವೇರಿ ನಗರದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಜರುಗಲಿದೆ ಎಂದು ತಿಳಿಸಿದರು.

ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕ್‍ಗಳಲ್ಲಿ ಚಲನವಲನಗಳ ನಿಗಾವಹಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್‌ ಗಿರೀಶ ಸ್ವಾದಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪ್ರಭುದೇವ, ರಾಜಕೀಯ ಪಕ್ಷಗಳ ವಿವಿಧ ಮುಖಂಡರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು