ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ಸಮಸ್ಯೆ ನಿವಾರಣೆಗೆ ಸೂಚನೆ

ಬೆಳೆಹಾನಿ, ಮನೆ ಹಾನಿ ಪರಿಹಾರ ಕಲ್ಪಿಸಲು ವಿಶೇಷ ಅಭಿಯಾನ ನಡೆಸಿ: ಸಚಿವ ಬಸವರಾಜ ಬೊಮ್ಮಾಯಿ
Last Updated 6 ಮಾರ್ಚ್ 2021, 15:58 IST
ಅಕ್ಷರ ಗಾತ್ರ

ಹಾವೇರಿ: ಬೆಳೆ ಹಾನಿ ಮತ್ತು ಮನೆ ಹಾನಿ ಪರಿಹಾರಕ್ಕೆ ಬಾಕಿ ಉಳಿದಿರುವ ಪ್ರಕರಣಗಳಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳ ಇತ್ಯರ್ಥಕ್ಕೆ ‘ವಿಶೇಷ ಅಭಿಯಾನ’ ನಡೆಸಬೇಕು. ಅರ್ಹ ಫಲಾನುಭವಿಗಳಿಗೆ ಸರಿಯಾದ ಪರಿಹಾರವನ್ನು ಕಲ್ಪಿಸುವುದು ಕಂದಾಯ ಅಧಿಕಾರಿಗಳ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ‌ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ, ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಅವರು ಸಭೆಗೆ ಮಾಹಿತಿ ನೀಡಿ, ‘ಬೆಳೆಹಾನಿಗೆ ಸಂಬಂಧಿಸಿದಂತೆ 4868 ರೈತ ಫಲಾನುಭವಿಗಳಿಗೆ ಪರಿಹಾರ ನೀಡುವುದು ಬಾಕಿ ಇದೆ. ಬ್ಯಾಂಕ್‌ ಅಕೌಂಟ್‌, ಆಧಾರ್‌ ಸಂಖ್ಯೆ ಮುಂತಾದ ತಾಂತ್ರಿಕ ಸಮಸ್ಯೆಗಳಿವೆ. 1,52,504 ರೈತರಿಗೆ ಈಗಾಗಲೇ ಪರಿಹಾರ ಪಾವತಿಯಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬೊಮ್ಮಾಯಿ, ಕೆಲವು ರೈತರಲ್ಲಿ ಸಮರ್ಪಕ ದಾಖಲೆಗಳಿರುವುದಿಲ್ಲ. ಹೀಗಾಗಿ ಜಿಲ್ಲಾಡಳಿತದ ವತಿಯಿಂದ ‘ತಾಂತ್ರಿಕ ನೆರವು’ ನೀಡಬೇಕು. ‘ವಿಶೇಷ ಅಭಿಯಾನ’ ನಡೆಸಿ, 10 ದಿನದೊಳಗೆ ವರದಿ ಕಳುಹಿಸಿದರೆ ಪರಿಹಾರ ನೀಡಲು ಅನುಮೋದನೆ ನೀಡಲಾಗುವುದು ಎಂದು ಸೂಚಿಸಿದರು.

533 ಫಲಾನುಭವಿಗಳಿಗೆ ನೋಟಿಸ್‌:

ಎ ವರ್ಗದಲ್ಲಿ 340, ಬಿ ವರ್ಗದಲ್ಲಿ 55 ಹಾಗೂ ಸಿ ವರ್ಗದಲ್ಲಿ 138 ಮನೆಗಳ ಪುನರ್‌ ನಿರ್ಮಾಣದ ಕಾರ್ಯ ಆರಂಭಗೊಂಡಿಲ್ಲ. ಹೀಗಾಗಿ 533 ಫಲಾನುಭವಿಗಳಿಗೆ ನೋಟಿಸ್‌ ನೀಡಿದ್ದು, ರದ್ದುಪಡಿಸಲಾಗಿದೆ ಎಂದು ಎಡಿಸಿ ಯೋಗೇಶ್ವರ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ, ಸ್ಥಳಕ್ಕೆ ಎಂಜಿನಿಯರ್‌ಗಳು ಭೇಟಿ ನೀಡಿ ಸಮರ್ಪಕ ವರದಿ ನೀಡಿಲ್ಲ. ಹೀಗಾಗಿ ಮನೆ ವಿಂಗಡಣೆಯಲ್ಲಿ ವ್ಯತ್ಯಾಸಗಳಾಗಿವೆ. ನೆರೆ ಪರಿಹಾರ ಅವ್ಯವಹಾರದಲ್ಲಿ 19 ನೌಕರರು ಅಮಾನತುಗೊಂಡಿದ್ದರೂ ಅಧಿಕಾರಿಗಳು ಇನ್ನೂ ಬುದ್ಧಿ ಕಲಿತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ:

ವಿಶೇಷ ತಂಡ ರಚಿಸಿ, ತಾಲ್ಲೂಕುವಾರು ಪುನರ್‌ ಸಮೀಕ್ಷೆ ಮಾಡಿಸಬೇಕು. ಎಲ್ಲಿ ಲೋಪಗಳಾಗಿವೆ ಎಂಬುದನ್ನು ಪತ್ತೆ ಹೆಚ್ಚಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮನೆ ಹಾನಿ ಸಮೀಕ್ಷೆಯನ್ನು ಮಾನವೀಯ ದೃಷ್ಟಿಯಿಂದ ಮಾಡಬೇಕು. ಮನೆಗಳ ಪುನರ್‌ ನಿರ್ಮಾಣದ ಕಾರ್ಯ ಆರಂಭವಾಗದಿರುವುದಕ್ಕೆ ಕಾರಣ ಪತ್ತೆ ಹಚ್ಚಬೇಕು ಎಂದು ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಅವರಿಗೆ ಸಚಿವರು ತಾಕೀತು ಮಾಡಿದರು.

ತುಂಗಾ ಮೇಲ್ದಂಡೆ ಭೂ ಪರಿಹಾರ:

ಯುಟಿಪಿ ಯೋಜನೆಯ ಭೂಸ್ವಾಧೀನ ಪ್ರಕರಣಗಳಲ್ಲಿ ರೆಗ್ಯೂಲರ್ ಅವಾರ್ಡ್‌ ಆದವರಿಗೆ ಪರಿಹಾರ ಹಣವನ್ನು ತಕ್ಷಣ ಬಿಡುಗಡೆ ಮಾಡಿ ಹೆಚ್ಚುವರಿ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿರುವ ಪ್ರಕರಣಗಳು ಇತ್ಯರ್ಥವಾದ ತಕ್ಷಣ ಅವರಿಗೂ ಪರಿಹಾರವನ್ನು ಒದಗಿಸಿ ಈ ಸಂಬಂಧ ಈಗಾಗಲೇ ₹67 ಕೋಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಭೂಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಿ ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸಚಿವರು ಸೂಚನೆ ನೀಡಿದರು.

ಕೃಷಿ ಜಂಟಿ ನಿರ್ದೇಶಕರಿಗೆ ಸಚಿವ ತರಾಟೆ

ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ,ಬೆಳೆ ಹಾನಿ ಸಮೀಕ್ಷೆ ಸಮರ್ಪಕವಾಗಿಲ್ಲ. ಈ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಗೊಬ್ಬರ, ಬೀಜ ವಿತರಣೆಯನ್ನು ಯಾವ ಡೀಲರ್‌ಗೆ ಕೊಡಬೇಕು ಎಂಬ ಬಗ್ಗೆ ಮಾತ್ರ ನಿಮಗೆ ಆಸಕ್ತಿ ಇದೆ. ರೈತರ ಕಡೆ ತಿರುಗಿ ನೋಡುತ್ತಿಲ್ಲ. ಹಲವಾರು ಬಾರಿ ಹೇಳಿದರೂ ಬುದ್ಧಿ ಕಲಿತಿಲ್ಲ. ಕಳೆದ ವರ್ಷ ಬೀಜ, ಗೊಬ್ಬರಕ್ಕೆ ಕೃತಕ ಅಭಾವ ಉಂಟಾಗಿತ್ತು. ಈ ವರ್ಷ ಆ ರೀತಿ ಆಗದಂತೆ ಎಚ್ಚರ ವಹಿಸಬೇಕು ಎಂದು ಕೃಷಿ ಜಂಟಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡರು.

‘ಮಣ್ಣಿನ ಆರೋಗ್ಯ ಕಾರ್ಡ್‌’ ಕೊಟ್ಟರೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಜಿಲ್ಲೆಯಲ್ಲಿ ಕೃಷಿ ಭೂಮಿಯ ಮಣ್ಣಿನ ಸತ್ವ ಕ್ಷೀಣಿಸುತ್ತಿದೆ. ಪ್ರತಿ ತಾಲ್ಲೂಕಿನಲ್ಲಿ ಶೇ 25ರಷ್ಟು ಪ್ರಮಾಣದಷ್ಟು ಕೃಷಿ ಭೂಮಿಗಳು ಸತ್ವ ಕಳೆದುಕೊಳ್ಳುತ್ತಿವೆ. ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಮುನ್ನ ಮಣ್ಣಿನ ಸತ್ವ ಹೆಚ್ಚಿಸಲು ವಿಶೇಷ ಕಾರ್ಯಕ್ರಮ ರೂಪಿಸಬೇಕು ಎಂದರು.

ಟ್ರ್ಯಾಕ್ಟರ್‌ ಹಂಚಿಕೆಯಲ್ಲೂ ತಾರತಮ್ಯವಾಗಿದೆ ಎಂದು ಬ್ಯಾಡಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮತ್ತು ತಾಲ್ಲೂಕಿನ ಬೆಳೆ ಹಾನಿ ಸಮೀಕ್ಷೆ ಸಮರ್ಪಕವಾಗಿಲ್ಲ ಎಂದು ರಾಣೆಬೆನ್ನೂರು ಶಾಸಕ ಅರುಣ್‌ಕುಮಾರ ಪೂಜಾರ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ನೆಹರು ಓಲೆಕಾರ, ಅರುಣ್‌ಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಏಕನಾಥ ಬಾನುವಳ್ಳಿ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಸಿಇಒ ಮೊಹಮ್ಮದ್ ರೋಶನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT