ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಕರ್ತವ್ಯಕ್ಕೆ ಗೈರು; 62 ಟ್ರೈನಿಗಳಿಗೆ ನೋಟಿಸ್‌

ನಿವೃತ್ತ ನೌಕರರ ಸೇವೆ ಬಳಕೆಗೆ ಚಿಂತನೆ: ಹಾವೇರಿ ವಿಭಾಗಕ್ಕೆ ₹1.35 ಕೋಟಿ ನಷ್ಟ
Last Updated 9 ಏಪ್ರಿಲ್ 2021, 15:59 IST
ಅಕ್ಷರ ಗಾತ್ರ

ಹಾವೇರಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮೂರನೇ ದಿನ ಪೂರೈಸಿತು. ಶುಕ್ರವಾರ ಕೂಡ ಸಾರಿಗೆ ಬಸ್‌ಗಳು ಸಂಚರಿಸದ ಕಾರಣ ಪ್ರಯಾಣಿಕರು ಊರುಗಳಿಗೆ ತೆರಳಲು ಪರದಾಡುವುದು ಮುಂದುವರಿದಿದೆ.

ಮುಷ್ಕರದ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ಗೈರು ಹಾಜರಾದ 62 ಟ್ರೈನಿಗಳಿಗೆ ನೋಟಿಸ್‌ ನೀಡಲಾಗಿದೆ ಹಾಗೂ ಕೆಲವು ಆಡಳಿತಾತ್ಮಕ ಸಿಬ್ಬಂದಿಯನ್ನು ವಜಾಗೊಳಿಸಲು ಪ್ರಕ್ರಿಯೆ ಆರಂಭವಾಗಿದೆ.

ಹಾವೇರಿ ವಿಭಾಗದಲ್ಲಿ ಒಟ್ಟು 72 ಟ್ರೈನಿ ಸಿಬ್ಬಂದಿಗಳಿದ್ದು, ಅವರಲ್ಲಿ 12 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದವರಿಗೆ ನೋಟಿಸ್‌ ಜಾರಿಯಾಗಿದೆ. ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಸಿಬ್ಬಂದಿಯನ್ನು ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲು ಆದೇಶ ಹೊರಬೀಳುವ ಸಾಧ್ಯತೆ ಇದೆ.

ಕರ್ತವ್ಯಕ್ಕೆ ಗೈರು ಹಾಜರಾದ 10 ಆಡಳಿತಾತ್ಮಕ ಸಿಬ್ಬಂದಿಯನ್ನು ಬೇರೆ ಡಿಪೋಕ್ಕೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ. ನಿವೃತ್ತ ನೌಕರರನ್ನು ಸೇವೆಗೆ ಬಳಸಿಕೊಳ್ಳಲು ಕರೆ ನೀಡಿದ್ದೆವು. ಆದರೆ ಸೇವೆಗೆ ಯಾರೂ ಮುಂದೆ ಬಂದಿಲ್ಲ.3 ದಿನಗಳಿಂದ ಹಾವೇರಿ ವಿಭಾಗಕ್ಕೆ ₹1.35 ಕೋಟಿ ನಷ್ಟವಾಗಿದೆ. ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ಹೇಳಿದರು.

ಮ್ಯಾಕ್ಸಿಕ್ಯಾಬ್‌ಗಳ ಜತೆ ಖಾಸಗಿ ಬಸ್‌ಗಳು ಕೂಡ ಹಾವೇರಿ ಜಿಲ್ಲಾ ಕೇಂದ್ರದಿಂದ ದಾವಣಗೆರೆ ಮತ್ತು ಹುಬ್ಬಳ್ಳಿಯತ್ತ ಸಂಚರಿಸಿದವು. ಮ್ಯಾಕ್ಸಿಕ್ಯಾಬ್‌ಗಳಲ್ಲಿ ಬಸ್‌ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಯಾಣಿಕರು ದೂರಿದರು.

ಹಾವೇರಿ ಡಿಪೋದಲ್ಲಿ ಸಾರಿಗೆ ಬಸ್‌ಗಳು ಸಾಲುಗಟ್ಟಿ ನಿಂತಿದ್ದವು. ಹಾವೇರಿ ಬಸ್‌ ನಿಲ್ದಾಣದ ಅಕ್ಕಪಕ್ಕ ಮ್ಯಾಕ್ಸಿಕ್ಯಾಬ್‌, ಖಾಸಗಿ ಬಸ್‌ ಮತ್ತು ಆಟೊಗಳ ಸಂಚಾರ ಜೋರಾಗಿತ್ತು. ತುರ್ತು ಕಾರಣಗಳಿಗಾಗಿ ಬೇರೆ ಊರುಗಳಿಗೆ ತೆರಳುವ ಮತ್ತು ನಿತ್ಯ ಕರ್ತವ್ಯಕ್ಕೆ ಹೋಗುವ ನೌಕರರಿಗೆ ತೀವ್ರ ತೊಂದರೆಯಾಗಿದೆ.

ಕರ್ತವ್ಯಕ್ಕೆ ಹಾಜರಾಗುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಮನವಿ ಮಾಡಿದರೂ, ನಿರ್ವಾಹಕರು ಮತ್ತು ಚಾಲಕರು ಮುಂದೆ ಬಂದಿಲ್ಲ. ಎಸ್ಮಾ ಜಾರಿಗೊಳಿಸಿ ಕ್ರಮ ಕೈಗೊಳ್ಳುತ್ತೇವೆ ಎಂಬ ಸರ್ಕಾರದ ಬೆದರಿಕೆಗೂ ಜಗ್ಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT