ಶುಕ್ರವಾರ, ಸೆಪ್ಟೆಂಬರ್ 24, 2021
27 °C

ಠೇವಣಿ ಹಣ ಪಾವತಿಸಲು ಜಿಲ್ಲಾ ಗ್ರಾಹಕರ ಆಯೋಗ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: 30 ದಿನದೊಳಗಾಗಿ ಠೇವಣಿ ಹಣವನ್ನು ಗ್ರಾಹಕರಿಗೆ ಪಾವತಿಸುವಂತೆ ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.

ಕರ್ನಾಟಕ ಬ್ಯಾಂಕ್ ಉದ್ಯೋಗಿ ಶಿರಸಿಯ ಗುರುರಾಜ ಅಣ್ಣಯ್ಯ ಶೇಠ ಎಂಬುವರು ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ಸವಣೂರ ಶಾಖೆಯ ವ್ಯವಸ್ಥಾಪಕ ಕಿರಣ ಜನಾರ್ಧನ ಶೇಠ್‌ ಅವರ ಪ್ರೇರಣೆಯಿಂದ ಕುಟುಂಬದ ಸದಸ್ಯರ ಹೆಸರಿನಲ್ಲಿ ₹16,41,563 ಮೊತ್ತದ 14 ನಿಶ್ಚಿತ ಠೇವಣಿಗಳನ್ನು ಮಾಡಿದ್ದರು.

ಈ ಪೈಕಿ ಅವಧಿ ಮುಗಿದ ಠೇವಣಿಗಳ ಹಣ ಹಿಂಪಡೆಯಲು ಬ್ಯಾಂಕಿಗೆ ಅರ್ಜಿ ಸಲ್ಲಿಸಿದಾಗ ಈ ಠೇವಣಿ ಆಧಾರದ ಮೇಲೆ ಸುವರ್ಣ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ₹4.50 ಲಕ್ಷ ಬ್ಯಾಂಕ್ ಸಾಲ ಪಡೆದಿರುವುದಾಗಿ ಠೇವಣಿದಾರರಾದ ಗುರುರಾಜ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು.

ನೈಜವಾಗಿ ಠೇವಣಿದಾರರಾದ ಗುರುರಾಜ ಅವರು ಸುವರ್ಣ ಸಹಕಾರಿ ಬ್ಯಾಂಕಿನಿಂದ ಯಾವುದೇ ಸಾಲ ಪಡೆಯದ ಕಾರಣ ಈ ಕುರಿತಂತೆ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆಯನ್ನು ಕೂಲಕುಂಷವಾಗಿ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷೆ ಸುನಂದಾ ಹಾಗೂ ಸದಸ್ಯರಾದ ಮಹೇಶ್ವರಿ ಬಿ.ಎಸ್. ಅವರು ಸುವರ್ಣ ಪತ್ತಿನ ಸೌಹಾರ್ದ ಸಹಕಾರಿ ಸಂಸ್ಥೆಯ ಸವಣೂರ ಹಾಗೂ ಹಾವೇರಿ ಶಾಖಾ ವ್ಯವಸ್ಥಾಪಕರು ಅಥವಾ ಸಂಸ್ಥೆಯ ಅಧ್ಯಕ್ಷರು ಒಂಟಿಯಾಗಿ ಮತ್ತು ಜಂಟಿಯಾಗಿ ₹16,41,563 ನಿಶ್ಚಿತ ಠೇವಣಿಗಳ ಮೊತ್ತವನ್ನು ಶೇ 6ರ ಬಡ್ಡಿಯನ್ನು ಸೇರಿಸಿ ನೀಡಲು ಹಾಗೂ ಮಾನಸಿಕ ವ್ಯಥೆಗೆ ಮತ್ತು ಪ್ರಕರಣದ ಪರಿಹಾರವಾಗಿ ₹10 ಸಾವಿರ ಪಾವತಿಸಲು ಆದೇಶ ಹೊರಡಿಸಿದ್ದಾರೆ.

ಆದೇಶವಾದ 30 ದಿನಗಳಲ್ಲಿ ಮೊತ್ತ ಪಾವತಿಸಲು ವಿಫಲವಾದರೆ ವಾರ್ಷಿಕ ಶೇ 12ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆದೇಶಿಸಲಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ನೋಂದಣಾಧಿಕಾರಿ ಹಾಗೂ ಸಹಾಯಕ ಆಡಳಿತಾಧಿಕಾರಿ ಕರಿಯಪ್ಪ ಬಡಪ್ಪಳವರ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು