ಭಾನುವಾರ, ಆಗಸ್ಟ್ 14, 2022
25 °C
ದತ್ತು ಪ್ರಕ್ರಿಯೆಗೆ ಒಳಪಡದ 613 ಅಪೌಷ್ಟಿಕ ಮಕ್ಕಳು: ಸಚಿವೆ ಶಶಿಕಲಾ ಜೊಲ್ಲೆ ಅಸಮಾಧಾನ

‘ಎನ್‌ಆರ್‌ಸಿ’ ಕೂಡಲೇ ಆರಂಭಿಸಲು ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವ 613 ಮಕ್ಕಳನ್ನು ‘ದತ್ತು ಪ್ರಕ್ರಿಯೆ’ಗೆ ಒಳಪಡಿಸದ ಬಗ್ಗೆ ಹಾಗೂ  ಜಿಲ್ಲಾಸ್ಪತ್ರೆಯಲ್ಲಿ ‘ಪೌಷ್ಟಿಕ ಆಹಾರ ಪುನಶ್ಚೇತನ ಕೇಂದ್ರ’ (ಎನ್‌.ಆರ್‌.ಸಿ) ಸ್ಥಗಿತಗೊಂಡಿರುವ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 

ಕೊರೊನಾ ಸಂಭಾವ್ಯ 3ನೇ ಅಲೆ ಹಿನ್ನೆಲೆಯಲ್ಲಿ ದೇವಗಿರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ‘ಎನ್‌ಆರ್‌ಸಿ’ಯಲ್ಲಿ ದಾಖಲಾಗಿದ್ದ 46 ಮಕ್ಕಳು ಎಲ್ಲಿಗೆ ಹೋದರು? ಎಂದು ಪ್ರಶ್ನಿಸಿದರು. ಈ ಕೂಡಲೇ ‘ಎನ್‌ಆರ್‌ಸಿ’ ತೆರೆದು ಅಪೌಷ್ಟಿಕತೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು. 

ಹಾವೇರಿ ಜಿಲ್ಲೆಯಲ್ಲಿ ತೀವ್ರ ಅಪೌಷ್ಟಿಕತೆಯಿಂದ 613 ಮಕ್ಕಳು ಹಾಗೂ ಅಪೌಷ್ಟಿಕತೆಯಿಂದ 21,586 ಮಕ್ಕಳು ಬಳಲುತ್ತಿದ್ದಾರೆ. ಇವರಿಗೆ ಪೌಷ್ಟಿಕ ಆಹಾರ ನೀಡಬೇಕು. ಅಪೌಷ್ಟಿಕತೆ ನಿವಾರಣೆಗೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು. 

ಮಕ್ಕಳ ಆರೋಗ್ಯ ಶಿಬಿರ: ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ರೋಶನ್‌ ಮಾತನಾಡಿ, ‘ಜಿಲ್ಲೆಯಲ್ಲಿ 16 ವರ್ಷದೊಳಗಿನ 4.20 ಲಕ್ಷ ಮಕ್ಕಳು ಇದ್ದಾರೆ. ಜೂನ್‌ 21ರಿಂದ ವಿಶೇಷ ಆರೋಗ್ಯ ಶಿಬಿರ ನಡೆಸಲಿದ್ದೇವೆ. ಜಿಲ್ಲಾಸ್ಪತ್ರೆಯಲ್ಲಿ 15 ಆಕ್ಸಿಜನ್‌ ಬೆಡ್‌ ಸಾಮರ್ಥ್ಯದ ‘ಮಕ್ಕಳ ವಾರ್ಡ್‌’ ಅನ್ನು ಆರಂಭಿಸಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ 119 ಹಾಸಿಗೆ ಮತ್ತು ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 195 ಹಾಸಿಗೆಗಳನ್ನು ಮಕ್ಕಳಿಗಾಗಿ ಕಾಯ್ದಿರಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ಸಿಡಿಪಿಒಗಳಿಗೆ ತರಾಟೆ: ‘ಜನರಿಂದ ನೇರವಾಗಿ ನನಗೆ ಕರೆಗಳು ಬರುತ್ತಿವೆ. ಹೀಗಾಗಿ ಮಕ್ಕಳ ಸಹಾಯವಾಣಿ 1098 ಬಗ್ಗೆ ಜಾಗೃತಿ ಮೂಡಿಸಬೇಕು. ಜತೆಗೆ ಕೋವಿಡ್‌ ಸಂಬಂಧಿತ ಮಾಹಿತಿ ನೀಡಲು ಸಿಬ್ಬಂದಿಗೆ ತಿಳಿಸಬೇಕು ಎಂದರು. ಅಂಗವಿಕಲರು, ಸ್ವಾಧಾರ, ನಿರ್ಗತಿಕ ಮಕ್ಕಳ ಕುಟೀರದ ಸಿಬ್ಬಂದಿಗೆ ಸಮರ್ಪಕವಾಗಿ ಲಸಿಕೆ ಹಾಕಿಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವೆ ಶಶಿಕಲಾ ಜೊಲ್ಲೆ ಅವರು ಸಿಡಿಪಿಒಗಳನ್ನು ತರಾಟೆಗೆ ತೆಗೆದುಕೊಂಡರು.  

ಜಿಲ್ಲಾಡಳಿತ ಉತ್ತಮ ಕ್ರಮ: ಕೋವಿಡ್ ಮೂರನೇ ಅಲೆ ಎದುರಿಸುವ ನಿಟ್ಟಿನಲ್ಲಿ ಹಾವೇರಿ ಜಿಲ್ಲಾಡಳಿತ ಉತ್ತಮ ಸಿದ್ಧತೆ ಮಾಡಿಕೊಂಡಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿ ಮೂರನೇ ಅಲೆ ಕುರಿತಂತೆ ವ್ಯಾಪಕವಾದ ಪ್ರಚಾರದ ಜೊತೆಗೆ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದರು.

ಹಾವೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಅವ್ಯವಸ್ಥೆಗಳನ್ನು ಎರಡು ವಾರದೊಳಗೆ ಸರಿಪಡಿಸದಿದ್ದರೆ, ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಉಪನಿರ್ದೇಶಕರಿಗೆ ಎಚ್ಚರಿಕೆ ನೀಡಿದರು. 

‘ಬಾಲ್ಯವಿವಾಹ ತಡೆಗೆ ಕ್ರಮ ಕೈಗೊಳ್ಳಿ’
ಜಿಲ್ಲೆಯಲ್ಲಿ ಬಾಲ್ಯವಿವಾಹದ ಬಗ್ಗೆ 53 ದೂರುಗಳನ್ನು ಸ್ವೀಕರಿಸಿ, ಎಲ್ಲವನ್ನೂ ತಡೆಯಲಾಗಿದೆ ಎಂದು ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ ಮಾಹಿತಿ ನೀಡಿದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲೆಯಲ್ಲಿ ಒಂದೂ ಬಾಲ್ಯವಿವಾಹ ನಡೆದಿಲ್ಲವೇ? ಎಂದು ಪ್ರಶ್ನಿಸಿದರು. 

ದೂರು ಬಂದರೆ ಮಾತ್ರ ತಡೆಯುತ್ತೀರಿ. ಇಲ್ಲದಿದ್ದರೆ ಸುಮ್ಮನಿರುತ್ತೀರಿ. ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡ ನಂತರ, ಸಂಬಂಧಿತ ಹೆಣ್ಣು ಮಕ್ಕಳಿಗೆ 18 ವರ್ಷ ತುಂಬುವವರೆಗೂ ಮತ್ತೆ ಬಾಲ್ಯವಿವಾಹ ನಡೆಯದಂತೆ ನಿಗಾ ವಹಿಸಬೇಕು. ಬಾಗಲಕೋಟೆ ಜಿಲ್ಲೆಯಲ್ಲಿ ವೆಬ್‌ಸೈಟ್‌ ಆರಂಭಿಸಿ, ವಿನೂತನ ಕ್ರಮ ಕೈಗೊಂಡಿರುವುದನ್ನು ನೀವೂ ಪಾಲಿಸಬೇಕು ಎಂದು ಸೂಚಿಸಿದರು.

‘ಸಿಸಿಸಿ’ಗೆ ಸ್ಥಳಾಂತರಿಸಿ: ಸಚಿವೆ
ಕೋವಿಡ್‌ ಎರಡನೇ ಅಲೆಯಿಂದ ಜಿಲ್ಲೆಯಲ್ಲಿ 991 ಮಕ್ಕಳಿಗೆ ಸೋಂಕು ತಗುಲಿದ್ದು, 901 ಮಕ್ಕಳು ಗುಣಮುಖರಾಗಿದ್ದಾರೆ. 89 ಮಕ್ಕಳು ‘ಹೋಂ ಐಸೋಲೇಷನ್‌’ನಲ್ಲಿವೆ ಎಂಬ ಮಾಹಿತಿ ಪಡೆದ ಸಚಿವೆ, ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಸೋಂಕಿತ ಮಕ್ಕಳ ಮನೆಗಳ ಪರಿಸ್ಥಿತಿ ಹೇಗಿದೆ ಎಂಬುದನ್ನು ಪರಿಶೀಲಿಸಬೇಕು. ಎಚ್ಚರಿಕೆ ವಹಿಸದಿದ್ದರೆ ಮಕ್ಕಳಿಂದ ಮನೆಯ ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ಎಲ್ಲ ಮಕ್ಕಳನ್ನು ‘ಕೋವಿಡ್‌ ಆರೈಕೆ ಕೇಂದ್ರ’ಕ್ಕೆ (ಸಿಸಿಸಿ) ಸ್ಥಳಾಂತರಿಸಿ, ಮಕ್ಕಳ ಜತೆ ಪಾಲಕರು ಉಳಿದುಕೊಳ್ಳಲು ವ್ಯವಸ್ಥೆ ಮಾಡಿ ಎಂದು ಸೂಚಿಸಿದರು. 

ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಅರುಂಧತಿ ಚಂದ್ರಶೇಖರ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು