ಸ್ವಾಸ್ಥ್ಯಕ್ಕಾಗಿ ಪೌಷ್ಟಿಕ ಆಹಾರ, ಪುಸ್ತಕದ ಓದು: ವೈ.ಎಲ್.ಲಾಡಖಾನ್

ಹಾವೇರಿ: ಪೌಷ್ಟಿಕ ಆಹಾರ ಮತ್ತು ಪುಸ್ತಕದ ಓದು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕ ಎಂದು ಹಿರಿಯ ಸಿವಿಲ್ ನ್ಯಾಯಾಧಿಶರಾದ ವೈ. ಎಲ್. ಲಾಡಖಾನ್ ಹೇಳಿದರು.
ನಗರದ ದೇವರಾಜ ಅರಸು ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಸ್ಪತ್ರೆ, ಪೊಲೀಸ್ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಲಾದ ‘ರಾಷ್ಟ್ರೀಯ ಪೌಷ್ಟಿಕ ಸಪ್ತಾಹ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಪೌಷ್ಟಿಕತೆಯಿಂದ ಬಳಲುವ ವ್ಯಕ್ತಿ ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಅದಕ್ಕಾಗಿ ರಾಷ್ಟ್ರೀಯ ಪೌಷ್ಟಿಕ ಸಪ್ತಾಹವನ್ನು ನಡೆಸಲಾಗುತ್ತದೆ. ಮಕ್ಕಳು ಮಾನಸಿಕವಾಗಿ ವಿಕಾಸ ಹೊಂದುವುದರ ಜೊತೆಗೆ, ದೈಹಿಕವಾಗಿ ಸದೃಡರಾಗಬೇಕು ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕ ನಾಗರಾಜ ನಾಯಕ ಮಾತನಾಡಿ, ಅಪೌಷ್ಟಿಕತೆಯನ್ನು ಹೋಗಲಾಡಿಸಲು ಸರ್ಕಾರ ವಿವಿಧ ಸೌಲಭ್ಯಗಳನ್ನು ನೀಡಿದೆ. ಅಂಗನವಾಡಿಗಳಲ್ಲಿ ವಾರದ ಐದು ದಿನ ಹಾಲು, ಮೊಟ್ಟೆ ಹಾಗೂ ಎಳ್ಳು, ಗೋಡಂಬಿಗಳನ್ನು ಹೊಂದಿದ ಲಾಡುಗಳನ್ನು ನೀಡಲಾಗುತ್ತಿದೆ ಎಂದರು.
ಮಕ್ಕಳು ಗರ್ಭದಲ್ಲಿ ಇರುವಾಗಲೇ ಅನಿಮೀಯಾ ನಿವಾರಣೆಗೆ ಮುಂದಾಗಬೇಕು. ಇದು 14 ದಿನಗಳ ಚಿಕಿತ್ಸೆಯಾಗಿದ್ದು, ಕನಿಷ್ಠ 10 ದಿನಗಳಾದರೂ ಪಡೆಯಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಮಹಿಳೆಯರ ವೈಯಕ್ತಿಕ ಶುಚಿತ್ವ ಕಾಪಾಡಲು ಆರೋಗ್ಯ ಇಲಾಖೆಯಿಂದ ವಿವಿಧ ಸಲಕರಣೆಗಳನ್ನು ನೀಡಲಾಗುತ್ತಿದೆ. ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಮಾತನಾಡಿ, ಗ್ರಾಮೀಣ ಭಾಗದ ಜನರು ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ. ಅವರ ದೇಹಕ್ಕೆ ಹೆಚ್ಚು ಶಕ್ತಿ ಬೇಕಾಗುತ್ತದೆ. ಅದನ್ನು ಪೌಷ್ಟಿಕ ಆಹಾರಗಳ ಮೂಲಕ ಪಡೆಯಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಎ. ಜಗದೀಶ್ ಮಾತನಾಡಿ, ಅಪೌಷ್ಟಿಕತೆ ನಿವಾರಣೆಯು ಮನುಕುಲದ ಸೇವೆಯ ಮಹತ್ವದ ಕಾರ್ಯಕ್ರಮವಾಗಿದೆ ಎಂದರು.
‘ಹಗಲಿರುಳು ಅನ್ನಕ್ಕಾಗಿ ದುಡಿಯುವ ವರ್ಗವೊಂದಿದೆ... ಆದರೆ, ರಾತ್ರೋ ರಾತ್ರಿ ಆಸ್ಪತ್ರೆಗೆ ಹೋಗುವ ಮತ್ತೊಂದು ವರ್ಗವಿದೆ’ ಎನ್ನುವ ತಮ್ಮ ಕವನದ ಸಾಲುಗಳನ್ನು ಓದಿದರು.
ದೈಹಿಕ ಶಿಕ್ಷಣಾಧಿಕಾರಿ ಎನ್. ಐ. ಇಚ್ಚಂಗಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಸಿ. ನಿರಲಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಎಚ್. ಎಸ್. ರಾಘವೇಂದ್ರ ಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎ. ಎಂ. ವಡಗೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಂ. ಎನ್. ಮಾಳಿಗೇರ, ವಕೀಲರಾದ ರಾಜೇಶ್ವರಿ ಚಕ್ಕಳೇರ, ಆಹಾರ ತಜ್ಞೆ ಶಿಲ್ಪಾ ಬಿ., ದೇಸರಹಳ್ಳಿ, ಮುತ್ತುರಾಜ ಎಂ. ಮಾದರ ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.