ಹಿರೇಕೆರೂರು: ಚನ್ನಳ್ಳಿ ಗ್ರಾಮ ಪಂಚಾಯಿತಿ ಮತ್ತು ಕೆರೆ ಅಭಿವೃದ್ಧಿ ಸಮಿತಿಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಅಭಿವೃದ್ಧಿಗೊಳಿಸಿದ ಚನ್ನಳ್ಳಿ ಗ್ರಾಮದ ಕೆರೆ ಬಾಗಿನ ಅರ್ಪಿಸಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರ ಶಿವರಾಯ ಪ್ರಭು ಹೇಳಿದರು.
ತಾಲ್ಲೂಕಿನ ಚನ್ನಳ್ಳಿ ಗ್ರಾಮದಲ್ಲಿ ‘ನಮ್ಮೂರು ನಮ್ಮ ಕೆರೆ‘ ಯೋಜನೆ ಅಡಿಯಲ್ಲಿ ಪುನಶ್ಚೇತನಗೊಂಡ ಚನ್ನಳ್ಳಿ ಗ್ರಾಮದ ಕೆರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದರು.
ರಾಜ್ಯದಾದ್ಯಂತ ಈಗಾಗಲೇ ಸುಮಾರು 750 ಕೆರೆಗಳ ಪುನಶ್ಚೇತನಗೊಳಿಸಿದೆ. ಚನ್ನಳ್ಳಿ ಕೆರೆಯು ಸ್ವಚ್ಛಂದವಾಗಿ, ಕೃಷಿ ಚಟುವಟಿಕೆಗಳಿಗೂ ಸಾಕಷ್ಟು ಅನುಕೂಲವಾಗಲಿದೆ. ಕೆರೆಗಳು ಹೆಚ್ಚು ಕಾಲ ತಮ್ಮ ಒಡಿಲಲ್ಲಿ ನೀರು ಉಳಿಸಿಕೊಳ್ಳುವುದರಿಂದ ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಸುಧಾರಿಸುತ್ತದೆ ಎಂದರು.
ಕೆರೆ ಸಮಿತಿಯ ಅಧ್ಯಕ್ಷ ಮೋಹನಗೌಡ ನಿಂಗಜ್ಜರ ಮಾತನಾಡಿ, ಪರಿಸರದ ಸಂರಕ್ಷಣೆಯ ಸದೃಢತೆಗೆ ನಮ್ಮೆಲ್ಲರ ಹೊಣೆಯಾಗಿದೆ. ಪುನಶ್ಚೇತನಗೊಂಡ ಕೆರೆಯಿಂದ ನಮ್ಮ ಗ್ರಾಮಕ್ಕೆ ಹೆಚ್ಚು ಅನಕೂಲವಾಗಿದೆ. ಕೆರೆಯ ಕಾಮಗಾರಿ ತುಂಬಾ ಚೆನ್ನಾಗಿ ನಡೆದಿದೆ. ಇದಕ್ಕೆ ಗ್ರಾಮಸ್ಥರ ಸಹಕಾರ ಕಾರಣವಾಗಿದೆ. ಇದೇ ರೀತಿಯಾಗಿ ನಾವು ನಮ್ಮೂರಿನ ಕೆರೆಯನ್ನು ಸ್ವಚ್ಛತೆಯಿಂದ ಉಳಿಸಿಕೊಳ್ಳೋಣ ಎಂದು ಹೇಳಿದರು.
ತಾಲ್ಲೂಕು ಯೋಜನಾಧಿಕಾರಿ ಮಂಜುನಾಥ ಎಂ.,ಗ್ರಾಪಂ ಸದಸ್ಯ ರಾಜು ಲಮಾಣಿ,ಹನುಮಂತಪ್ಪ ಎಂ.,ಏಶಪ್ಪ ಕೆ.,ಪಿಡಿಒ ಪರಶುರಾಮ ಆಲೂರು,ಲೋಕಸ್ವಾಮಿ ಮಠದ,ಮಲ್ಲಿಕಾರ್ಜುನ, ವೇದಮೂರ್ತೆಪ್ಪ,ನಿಂಗಪ್ಪ, ಲಲಿತಮ್ಮ ಮಠದ ಇದ್ದರು.