ಸೋಮವಾರ, ಜೂಲೈ 13, 2020
28 °C
ಲಾಕ್‌ಡೌನ್‌ ಅವಧಿಯಲ್ಲಿ ನಿರಂತರ ಕಲಿಕೆಗೆ ಪ್ರೋತ್ಸಾಹ: ಉತ್ತಮ ಫಲಿತಾಂಶಕ್ಕಾಗಿ ಕಸರತ್ತು

ಹಾವೇರಿ| ಎಸ್ಸೆಸ್ಸೆಲ್ಸಿ ಮಕ್ಕಳಿಗಾಗಿ ಆನ್‌ಲೈನ್‌ ಕ್ವಿಜ್‌

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕೊರೊನಾ ಸೋಂಕು ತಡೆಗಟ್ಟಲು ರಾಜ್ಯದಾದ್ಯಂತ ಎಲ್ಲ ಶಾಲಾ ಕಾಲೇಜುಗಳು ಬಂದ್‌ ಆಗಿವೆ. ಈ ಲಾಕ್‌ಡೌನ್‌ ಅವಧಿಯಲ್ಲೂ ‘ಆನ್‌ಲೈನ್‌ ಕ್ವಿಜ್‌’ ನಡೆಸುವ ಮೂಲಕ ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ಪ್ರೋತ್ಸಾಹ ನೀಡುತ್ತಿದ್ದಾರೆ. 

ಈ ಬಾರಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯು ಮಾರ್ಚ್ 27ರಿಂದ ಏಪ್ರಿಲ್‌ 9ರವರೆಗೆ ನಡೆಯಬೇಕಿತ್ತು. ಲಾಕ್‌ಡೌನ್‌ ಜಾರಿಯಾದ ಕಾರಣ ಪರೀಕ್ಷೆಯನ್ನು ರಾಜ್ಯಸರ್ಕಾರ ಅನಿರ್ದಿಷ್ಟ ಅವಧಿಗೆ ಮುಂದೂಡಿದೆ. ಹಿಂದಿನ ವರ್ಷ ಶೇ 80.04 ಫಲಿತಾಂಶ ಪಡೆದು 19ನೇ ಸ್ಥಾನ ಗಳಿಸಿದ್ದ ಹಾವೇರಿ ಜಿಲ್ಲೆ ಈ ಬಾರಿ ‘ಟಾಪ್‌ ಟೆನ್’‌ನಲ್ಲಿ ಸ್ಥಾನ ಗಿಟ್ಟಿಸಬೇಕು ಎಂದು ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರು ನಿರಂತರ ಶ್ರಮ ಹಾಕುತ್ತಿದ್ದಾರೆ. 

ಆನ್‌ಲೈನ್‌ ಕ್ವಿಜ್‌: ಜಿಲ್ಲೆಯಲ್ಲಿ ಒಟ್ಟು 21,789 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಸನ್ನದ್ಧರಾಗಿದ್ದಾರೆ. ಲಾಕ್‌ಡೌನ್‌ ವೇಳೆಯಲ್ಲೂ ಮಕ್ಕಳ ಕಲಿಕೆ ನಿಲ್ಲಬಾರದು ಹಾಗೂ ಕಲಿತದ್ದನ್ನು ಮರೆಯಬಾರದು ಎಂಬ ಉದ್ದೇಶದಿಂದ ಅಧಿಕಾರಿಗಳು ಮತ್ತು ಶಿಕ್ಷಕರು ‘ಆನ್‌ಲೈನ್‌ ಕ್ವಿಜ್‌’ ನಡೆಸುತ್ತಿದ್ದಾರೆ. ಸುಮಾರು 4 ಸಾವಿರ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಆ್ಯಂಡ್ರಾಯ್ಡ್‌ ಮೊಬೈಲ್‌ ಮೂಲಕ ಕ್ವಿಜ್‌ ಎದುರಿಸಿ, ತಮ್ಮ ಕಲಿಕೆಯ ಗುಣಮಟ್ಟವನ್ನು ಕಂಡುಕೊಂಡಿದ್ದಾರೆ. 

‘ಜಿಲ್ಲಾ ಮಟ್ಟದ ಕ್ವಿಜ್ ಮಾಸ್ಟರ್‌ ನೇತೃತ್ವದಲ್ಲಿ ವಿಷಯವಾರು ಪ್ರಶ್ನಾವಳಿ ರಚಿಸಿ, Quizizz.comಗೆ ಅಪ್‌ಲೋಡ್‌ ಮಾಡಲಾಗುತ್ತದೆ. ನಂತರ ತಾಲ್ಲೂಕು ಮಟ್ಟದ ಕ್ವಿಜ್‌ ಮಾಸ್ಟರ್‌ ಕಳುಹಿಸಿದ ಲಿಂಕ್‌ ಅನ್ನು ಶಿಕ್ಷಕರು ತಮ್ಮ ಶಾಲೆಯ ಮಕ್ಕಳ ಪೋಷಕರ ಮೊಬೈಲ್ ಸಂಖ್ಯೆಗೆ ಕಳುಹಿಸುತ್ತಾರೆ. ಹೀಗೆ ಪ್ರಶ್ನಾವಳಿಗಳು ಆನ್‌ಲೈನ್‌ ಮೂಲಕ ಮಕ್ಕಳನ್ನು ತಲುಪುತ್ತವೆ’ ಎಂದು ವಿಷಯ ಪರಿವೀಕ್ಷಕರಾದ ದೇವೇಂದ್ರಪ್ಪ ಬಸಮ್ಮನವರ‌ ಮತ್ತು ಮಂಜಪ್ಪ ಆರ್‌. ತಿಳಿಸಿದರು. ‌

ಬಹುಆಯ್ಕೆ ಪ್ರಶ್ನೆಗಳು: ‘ಜಿಲ್ಲೆಯಾದ್ಯಂತ ಏಕಕಾಲದಲ್ಲಿ ನಡೆಯುವ 1 ಗಂಟೆ ಅವಧಿಯ 50 ಅಂಕಗಳ ಆನ್‌ಲೈನ್‌ ಕ್ವಿಜ್‌ನಲ್ಲಿ 100 ಬಹುಆಯ್ಕೆ ಪ್ರಶ್ನೆಗಳಿಗೆ ಮಕ್ಕಳು ಮನೆಯಲ್ಲೇ ಕುಳಿತು ಉತ್ತರಿಸುತ್ತಾರೆ. ಕ್ವಿಜ್‌ ಮುಗಿದ ತಕ್ಷಣವೇ ಮಕ್ಕಳು ಗಳಿಸಿದ ಅಂಕಗಳು ಪ್ರಕಟವಾಗುತ್ತವೆ. ಇದರಿಂದ ತಮ್ಮ ಕಲಿಕಾ ಮಟ್ಟವನ್ನು ಮಕ್ಕಳೇ ನಿರ್ಧರಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ, ಮಕ್ಕಳ ಕಲಿಕಾ ಸಮಸ್ಯೆಗಳನ್ನು ಗುರುತಿಸಿ, ಪರಿಹಾರ ನೀಡಲು ಶಿಕ್ಷಕರಿಗೆ ಇದರಿಂದ ಸಹಕಾರಿಯಾಗಿದೆ’ ಎಂದು ಅವರು ಹೇಳಿದರು. 

ಮಕ್ಕಳ ವಾಣಿ: ರಾಜ್ಯ ಸರ್ಕಾರದ ಯೂಟ್ಯೂಬ್‌ ಚಾನಲ್‌ ‘ಮಕ್ಕಳ ವಾಣಿ’, ಬಿಂಬ ಅಪ್ಲಿಕೇಶನ್ ಮೂಲಕವೂ ವಿಷಯ ತಜ್ಞರ ವಿಡಿಯೊ ವೀಕ್ಷಿಸಲು ಮಕ್ಕಳ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ಲಿಂಕ್‌ ಕಳುಹಿಸುತ್ತಿದ್ದೇವೆ. ಆಟದ ಮೂಲಕ ಕಲಿಕೆಯತ್ತ ಮಕ್ಕಳನ್ನು ಸೆಳೆಯುವ ಪ್ರಯತ್ನ ಇದಾಗಿದೆ. ವಿದ್ಯಾರ್ಥಿಗಳ ಜೊತೆ ಶಿಕ್ಷಕರು ನಿರಂತರ ಸಂಪರ್ಕದಲ್ಲಿದ್ದು, ಕಲಿಕಾ ಸಮಸ್ಯೆಗಳನ್ನು ನಿವಾರಿಸುತ್ತಿದ್ದಾರೆ’ ಎಂದು ವಿಷಯ ಪರಿವೀಕ್ಷಕರಾದ ಬಸವನಗೌಡ ಪಾಟೀಲ ಹಾಗೂ ಈರಪ್ಪ ಲಮಾಣಿ ಮಾಹಿತಿ ನೀಡಿದರು. 

ಫಲಿತಾಂಶ ಸುಧಾರಣೆಗೆ ವೈವಿಧ್ಯಮಯ ಕಾರ್ಯಕ್ರಮ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ವಿಶೇಷ ತರಗತಿ, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ (ಸಬ್ಜೆಕ್ಟ್‌ ಕ್ಲಬ್‌), ಮಕ್ಕಳ ಮನೆಗಳಿಗೆ ಶಿಕ್ಷಕರ ಭೇಟಿ, ನಸುಕಿನ 5 ಗಂಟೆಗೆ ಮಕ್ಕಳು ಎದ್ದು ಓದಲಿ ಎಂಬ ಕಾರಣದಿಂದ ಶಿಕ್ಷಕರಿಂದ ‘ಮಿಸ್ಡ್‌ ಕಾಲ್‌’ ಕಾರ್ಯಕ್ರಮ, ತಾಯಂದಿರ ಸಭೆ.. ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದೇವೆ’ ಎಂದು ಡಿಡಿಪಿಐ ಅಂದಾನಪ್ಪ ವಡಗೇರಿ ತಿಳಿಸಿದರು. 

‘ಲಾಕ್‌ಡೌನ್‌ ವೇಳೆ ಮಕ್ಕಳು ಕಲಿಕೆಯಿಂದ ವಿಮುಖರಾಗಬಾರದು ಎಂಬ ದೃಷ್ಟಿಯಿಂದ ವಿಷಯವಾರು ಆನ್‌ಲೈನ್‌ ಕ್ವಿಜ್‌ ನಡೆಸುತ್ತಿದ್ದೇವೆ. ಈಗಾಗಲೇ ನಾಲ್ಕು ವಿಷಯಗಳ ಕ್ವಿಜ್‌ ಮುಗಿದಿದ್ದು, ಇನ್ನೆರಡು ವಿಷಯಗಳು ಬಾಕಿ ಇವೆ. ನಂತರ ಟಾಪಿಕ್‌ವೈಸ್‌ ಕ್ವಿಜ್‌ ನಡೆಸುತ್ತೇವೆ. ಲಾಕ್‌ಡೌನ್‌ ತೆರವಾದ ಕೂಡಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಮಕ್ಕಳು ಸಜ್ಜಾಗಿದ್ದಾರೆ. ಪರೀಕ್ಷಾ ಕೇಂದ್ರ ಮತ್ತು ಮೌಲ್ಯಮಾಪನ ಕೇಂದ್ರ ಸೇರಿದಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು