ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ಶೋಚನೀಯ, ಬಯಲಲ್ಲೇ ಬಹಿರ್ದೆಸೆ!

ಕಾಗದ ಪತ್ರದಲ್ಲಷ್ಟೇ ಉಳಿದ ‘ಬಯಲು ಶೌಚಾಲಯ ಮುಕ್ತ ನಗರ’ ಘೋಷಣೆ
Last Updated 7 ಜುಲೈ 2019, 19:45 IST
ಅಕ್ಷರ ಗಾತ್ರ

ಸ್ವಚ್ಛ ಭಾರತ ನಿರ್ಮಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಾನಾ ಹೆಸರುಗಳಲ್ಲಿ ನೂರಾರು ಯೋಜನೆಗಳನ್ನು ಘೋಷಿಸಿವೆ. ಆದರೂ, ನಗರ ಪ್ರದೇಶಗಳಲ್ಲೇ ಸ್ವಚ್ಛತೆ ಮರೀಚಿಕೆಯಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಿದ ಶೌಚಾಲಯಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿವೆ. ಬಯಲು ಬಹಿರ್ದೆಸೆ ಪ್ರವೃತ್ತಿ ಮುಂದುವರಿದು, ನಗರದಲ್ಲಿ ಏಲಕ್ಕಿ ಕಂಪು ಮಾಯವಾಗಿದೆ.ಶೌಚಾಲಯಗಳ ಸ್ಥಿತಿಗತಿ, ಮಹಿಳೆಯರ ಸಮಸ್ಯೆಗಳು ಸೇರಿದಂತೆ ಹತ್ತು–ಹಲವು ಅಂಶಗಳ ಮೇಲೆ ‘ನಮ್ಮ ನಗರ ನಮ್ಮ ಧ್ವನಿ’ ಬೆಳಕು ಚೆಲ್ಲಿದೆ.

ಹಾವೇರಿ: ‘2019ರ ಮಾರ್ಚ್ 31ರ ಹೊತ್ತಿಗೆ ಹಾವೇರಿಯನ್ನು ಬಯಲು ಶೌಚಾಲಯ ಮುಕ್ತ ನಗರವನ್ನಾಗಿ ಮಾಡುತ್ತೇವೆ...’ ಒಂದೂವರೆ ವರ್ಷದ ಹಿಂದೆ ಜಿಲ್ಲಾಡಳಿತ ಹೀಗೊಂದು ಸುಂದರ ಪ್ರಕಟಣೆ ಹೊರಡಿಸಿತ್ತು. ಆದರೆ, ಗಡುವು ಮುಗಿದು ಮೂರು ತಿಂಗಳು ಕಳೆದರೂ ಆ ಘೋಷಣೆ ಕಾಗದ ಪತ್ರದಿಂದ ಆಚೆ ಬರುವುದಕ್ಕೇ ಒದ್ದಾಡುತ್ತಿದೆ.

ನಗರದ ಗಡಿ ಅಂಚಿನ ಬಹುತೇಕ ಜನ ಈಗಲೂ ನಿತ್ಯ ಕರ್ಮಕ್ಕೆ ಪೊದೆ, ಪಾಳು ಹೊಂಡ, ಬತ್ತಿದ ಕೆರೆಗಳನ್ನೇ ಆಶ್ರಯಿಸಿದ್ದಾರೆ. ಸೂರ್ಯ ಮೂಡುವುದಕ್ಕೂ ಮುನ್ನ ಹಾಗೂ ಸೂರ್ಯ ಮುಳುಗಿದ ನಂತರ ಚೊಂಬು, ನೀರಿನ ಪಾತ್ರೆಗಳನ್ನು ಹಿಡಿದು ಜನಸಂಚಾರ ವಿರಳವಿರುವ ಜಾಗಗಳನ್ನು ಹುಡುಕುತ್ತ ಹೋಗುವ ದೃಶ್ಯಗಳು ಸಾಮಾನ್ಯವಾಗಿವೆ.

ನಗರ ಪ್ರದೇಶದಲ್ಲಿ ನೂರು ಪುರುಷರಿಗೆ ಒಂದರಂತೆ ಹಾಗೂ ನೂರು ಮಹಿಳೆಯರಿಗೆ ಎರಡರಂತೆ ಶೌಚಾಲಯ ಇರಬೇಕು ಎಂದು ಸ್ವಚ್ಛ ಸರ್ವೇಕ್ಷಣಾ ಮಿಷನ್‌ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ. ಅಲ್ಲದೇ, ಪ್ರತಿ 7ಕಿ.ಮೀ.ಗೆ ಒಂದು ಸಾರ್ವಜನಿಕ ಶೌಚಾಲಯವಿರಬೇಕು ಎಂದೂ ಸೂಚಿಸಿದೆ. ಆದರೆ, 74 ಸಾವಿರ ಜನಸಂಖ್ಯೆ ಇರುವ ನಗರದಲ್ಲಿರುವ ಸಮುದಾಯ ಹಾಗೂ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ 17 ಮಾತ್ರ. ಅವೂನಿರ್ವಹಣೆ ಇಲ್ಲದೆ ಕೊಳೆತು ನಾರುತ್ತಿವೆ.

‘ನಗರದ ಒಟ್ಟು ಜನಸಂಖ್ಯೆಯಲ್ಲಿ ಶೇ 80ಕ್ಕೂ ಹೆಚ್ಚು ಜನ ಮನೆಗಳಲ್ಲಿ ಶೌಚಾಲಯ ಹೊಂದಿದ್ದಾರೆ. ನಗರದ ಹೊರ ವಲಯದ ಜನರಿಗೆ ಸ್ವಲ್ಪ ಸಮಸ್ಯೆಯಾಗಿದೆ’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು. ಆದರೆ ನಾಗೇಂದ್ರನಮಟ್ಟಿ ಕೊಳೆಗೇರಿ ಪ್ರದೇಶ, ಅಕ್ಕಮಹಾದೇವಿ ಹೊಂಡ, ಚಿಕಣಕೆರೆ, ಶಾಂತಿನಗರ ಹಾಗೂ ಇಜಾರಿಲಕ್ಮಾಪುರದ ಕೆಲ ಭಾಗಗಳಲ್ಲಿ ಈಗಲೂ ಬಯಲು ಶೌಚಾಲಯ ಪ್ರವೃತ್ತಿಯೇ ಮುಂದುವರಿದಿದೆ.

ಗಮನ ಸೆಳೆವ ಬರಹ:

‘ಕೈಯಲ್ಲಿ ಸ್ಮಾರ್ಟ್‌ ಫೋನ್, ಶೌಚ ಮಾತ್ರ ಹಳಿ ಮೇಲೆ’, ‘ಕೊರಳಲ್ಲಿ ಟೈ–ಕಾಲಲ್ಲಿ ಬೂಟು, ಶೌಚ ಮಾತ್ರ ತೆರೆದ ಜಾಗದಲ್ಲಿ’, ‘ಊರಿಗೆ ಹತ್ತಾರು ದೇವಾಲಯ, ಮನೆಗೊಂದು ಶೌಚಾಲಯ’, ‘ಚಿನ್ನಕ್ಕಿಂತ ಅನ್ನ ಲೇಸು, ಅನ್ಕಕ್ಕಿಂತ ಶೌಚಾಲಯ ಲೇಸು’ ಎಂಬ ಗಮನ ಸೆಳೆಯುವಂತಹ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಬೀದಿ ಬೀದಿಗೆ ಅಂಟಿಸಿರುವ ಜಿಲ್ಲಾಡಳಿತ ಹಾಗೂ ನಗರಸಭೆ, ಹಾಳಾಗಿರುವ ಶೌಚಾಲಯಗಳ ದುರಸ್ಥಿ ಕಡೆಗೆ ಮಾತ್ರ ಗಮನ ಹರಿಸಿಲ್ಲ.

17ರಲ್ಲಿ ಹಲವು ಕಾಣೆ:

31 ವಾರ್ಡ್‌ಗಳನ್ನು ಹೊಂದಿರುವ ನಗರಸಭೆ ವ್ಯಾಪ್ತಿಯಲ್ಲಿ ಸದ್ಯ 17 ಸಾರ್ವಜನಿಕ ಶೌಚಾಲಯಗಳಿದ್ದು, ಆ ಪೈಕಿ ಎಂಟು ಕಾರ್ಯ ನಿರ್ವಹಿಸುತ್ತಿಲ್ಲ. ಅಕ್ಕನ ಹೊಂಡ, ಜೆ.ಪಿ.ಸರ್ಕಲ್, ಮಟನ್ ಮಾರ್ಕೆಟ್ ಸಮೀಪದ ಶೌಚಾಲಯಗಳ ಸುತ್ತ ಗಿಡ–ಗಂಟಿಗಳು ಬೆಳೆದು, ಅವು ಜನರ ಕಣ್ಣಿಗೆ ಕಾಣಿಸುತ್ತಲೂ ಇಲ್ಲ.

ಕೆಲವು ಶೌಚಾಲಯಗಳಲ್ಲಿ ನೀರಿನ ಸಮಸ್ಯೆ ಇದ್ದರೆ, ಇನ್ನು ಹಲವೆಡೆ ನೀರಿದ್ದರೂ ಬಕೆಟ್‌ಗಳೇ ಮುರಿದು ಹೋಗಿವೆ. ಮೂತ್ರ ವಿಸರ್ಜನೆಗೆ ಹಾಕಿದ್ದ ಬೇಸಿನ್‌ಗಳೂ ಕಳಚಿ ಬಿದ್ದಿವೆ. ದುರ್ನಾತದ ನಡುವೆಯೂ ಹೇಗೋ ಮೂಗು ಮುಚ್ಚಿಕೊಂಡು ಒಳಗೆ ಹೋದರೆ, ಗೋಡೆಗಳ ಮೇಲೆ ಬರೆದಂತಹ ಆಕ್ಷೇಪಾರ್ಹ ಬರಹಗಳು ಎಂತಹವರನ್ನೂ ಮುಜುಗರಕ್ಕೀಡು ಮಾಡುತ್ತವೆ.

ಈ ದುಃಸ್ಥಿತಿ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ನಗರಸಭೆ ಆಯುಕ್ತ ಬಸವರಾಜ ಜಿದ್ದಿ, ‘ಶೌಚಾಲಯಗಳಸ್ವಚ್ಛತೆ ಹಾಗೂ ನಿರ್ವಹಣೆಗೆ ಎಲ್ಲ ಕಡೆ ಪೌರಕಾರ್ಮಿಕರನ್ನು ನೇಮಿಸಿದ್ದೇವೆ. ಆದರೆ, ಜನರ ಸಹಕಾರದ ಹೊರತು ಯಾವ ಸೌಲಭ್ಯಗಳೂ ಉಳಿಯುವುದಿಲ್ಲ. ಶೌಚಾಲಯ ಕಟ್ಟಡಗಳನ್ನು ಅವರೇ ಹಾಳು ಮಾಡಿದ್ದಾರೆ. ಈಗ ಸಮುದಾಯ ಶೌಚಾಲಯಗಳ ಸಂಖ್ಯೆ ಹೆಚ್ಚಿಸಿ, 20 ಕುಟುಂಬಗಳಿಗೆ ಒಂದರಂತೆ ಕೊಡಲು ನಿರ್ಧರಿಸಿದ್ದೇವೆ’ ಎಂದರು.

‘ಸ್ವಚ್ಛ ಭಾರತ್ ಮಿಷನ್ ಅಡಿ ಶೌಚಾಲಯ ನಿರ್ಮಾಣಕ್ಕಾಗಿ ಪ್ರತಿ ಮನೆಗೂ ₹ 5,330 ನೀಡಲಾಗುತ್ತದೆ. ಉಳಿದ ಹಣವನ್ನು ಆ ಮನೆಯವರು ಹಾಕಿಕೊಂಡು ಶೌಚಾಲಯ ಕಟ್ಟಿಸಿಕೊಳ್ಳಬೇಕು. ಒಂದು ವೇಳೆ ಕಟ್ಟಿಸಿಕೊಳ್ಳಲು ಜಾಗವಿಲ್ಲದಿದ್ದರೆ, ಸಮೀಪದ ಸಾರ್ವಜನಿಕ ಶೌಚಾಲಯದ ಬಳಕೆಗೆ ಆ ಮನೆಯವರಿಗೆ ಅವಕಾಶ ಕೊಡಲಾಗುವುದು. ಈ ಪ್ರಕ್ರಿಯೆ ಜಾರಿಯಲ್ಲಿದೆ. ನಗರದ ಪೆಟ್ರೋಲ್‌ ಬಂಕ್‌ಗಳಲ್ಲಿರುವ ಶೌಚಾಲಯಗಳನ್ನೂ ಸಾರ್ವಜನಿಕರು ಮುಕ್ತವಾಗಿ ಬಳಸಿಕೊಳ್ಳಬಹುದಾಗಿದೆ’ಎಂದು ಪರಿಸರ ಅಧಿಕಾರಿ ಚಂದ್ರಕಾಂತ್ ಹೇಳಿದರು.

‘ಪಾವತಿಸಿ ಬಳಸುವ ಸಾರ್ವಜನಿಕ ಶೌಚಾಲಯ ಇದ್ದರೂ, ಅಲ್ಲಿಗೆ ಬಾರದೇ ಬಯಲಿಗೆ ಹೋಗುವ ಜನರೇ ಹೆಚ್ಚಿದ್ದಾರೆ. ಬಯಲು ಬಹಿರ್ದೆಸೆ ಮುಕ್ತ ನಗರ ನಿರ್ಮಾಣ ಮಾಡುವುದರಲ್ಲಿ ನಗರಸಭೆಯ ಜವಾಬ್ದಾರಿ ಎಷ್ಟಿದೆಯೋ, ಅಷ್ಟೇ ಜವಾಬ್ದಾರಿ ಸಾರ್ವಜನಿಕರಿಗೂಇದೆ’ ಎನ್ನುತ್ತಾರೆ ಅಧಿಕಾರಿಗಳು.

‘ಸರಿಪಡಿಸುವ ಜವಾಬ್ದಾರಿ ನನ್ನದು’

ಶೌಚಾಲಯಗಳು ಹಾಳಾಗಿರುವುದು ನನ್ನ ಗಮನಕ್ಕೂ ಬಂದಿದೆ. ಶನಿವಾರ ಬೆಳಿಗ್ಗೆ ಅಧಿಕಾರಿಗಳ ಸಭೆ ಕರೆದು, ಎಲ್ಲ ಶೌಚಾಲಯಗಳ ಸ್ಥಿತಿಗತಿಗಳ ಬಗ್ಗೆ ಸಮೀಕ್ಷೆ ನಡೆಸಿ ವರದಿ ಕೊಡುವಂತೆ ಸೂಚಿಸಿದ್ದೇನೆ. ಎಲ್ಲವೂ ಬಳಕೆಗೆ ಮುಕ್ತವಾಗುವಂತೆ ಮಾಡುವ ಜವಾಬ್ದಾರಿ ನನ್ನದು.

– ನೆಹರು ಓಲೇಕಾರ, ಶಾಸಕರು, ಹಾವೇರಿ

**

ಅಂಕಿ–ಅಂಶ

ಸುಮಾರು 74,000 – ಹಾವೇರಿ ನಗರದ ಜನಸಂಖ್ಯೆ

‌ಸುಮಾರು 17,000 – ವಾಸಿಸುತ್ತಿರುವ ಕುಟುಂಬಗಳು

31 – ಒಟ್ಟು ವಾರ್ಡ್‌ಗಳು

2,139 – ಸ್ವಚ್ಛ ಭಾರತ ಮಿಷನ್‌ ಅಡಿ ಮನೆಗಳಲ್ಲಿ ನಿರ್ಮಾಣವಾದ ಶೌಚಾಲಯ

₹ 11.40 ಕೋಟಿ – ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಸರ್ಕಾರ ಒದಗಿಸಿದ ಮೊತ್ತ

17 – ಸಮುದಾಯ ಶೌಚಾಲಯಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT