ಶುಕ್ರವಾರ, ಜುಲೈ 1, 2022
22 °C
ಸಕ್ರೆಬೈಲ್‌ನಿಂದ ಕಾರ್ಯಾಚರಣೆಗೆ ಬಂದ ಮೂರು ಪಳಗಿಸಿದ ಆನೆಗಳು

ಹಾವೇರಿಯಲ್ಲಿ ಒಂಟಿ ಸಲಗ ಸೆರೆಗೆ ಹರಸಾಹಸ: ಕಾರ್ಯಾಚರಣೆಗೆ ಬಂದ ಪಳಗಿಸಿದ ಆನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುತ್ತಲ: ಒಂದು ವಾರದಿಂದ ಹಾವೇರಿ ಜಿಲ್ಲೆಯ ಹಾನಗಲ್, ಬ್ಯಾಡಗಿ ಮತ್ತು ಹಾವೇರಿ ತಾಲ್ಲೂಕಿನ ಅರಣ್ಯ ಭಾಗದಲ್ಲಿ ಒಂಟಿ ಸಲಗ ಪುಂಡಾಟವನ್ನು ಮುಂದುವರಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಕಾರ್ಯಾಚರಣೆ ನಡೆಸಿದರೂ ಸೆರೆಯಾಗಲಿಲ್ಲ. 

ಕಿರವತ್ತಿ ಮತ್ತು ಮುಂಡಗೋಡದಿಂದ ದುಂಡಸಿ, ಚಿಗಳ್ಳಿ ಡ್ಯಾಂ ಮತ್ತು ಹಾನಗಲ್ ಬೆಳ್ಳೂರ ಕೆರೆಗೆ ಪ್ರತಿವರ್ಷ ಆನೆಗಳು ಬರುತ್ತವೆ. ಬೆಳ್ಳೂರ ಕೆರೆಯಿಂದ 16 ವರ್ಷದ ಮರಿಯಾನೆ ಹಿಂಡಿನಿಂದ ತಪ್ಪಿಸಿಕೊಂಡು ಬೆಳ್ಳೂರು ಕೆರೆಯಲ್ಲಿ ಪ್ರತ್ಯಕ್ಷವಾಗಿತ್ತು.

ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮುಂಡಗೊಂಡ ಅರಣ್ಯಗೆ ಆನೆಯನ್ನು ಓಡಿಸಲಾಗಿತ್ತಾದರೂ ಅದೇ ಮರಿಯಾನೆ 4 ದಿನಗಳ ನಂತರ ಬ್ಯಾಡಗಿ ತಾಲ್ಲೂಕು ಗಾಳಪೂಜೆ ಗ್ರಾಮದಲ್ಲಿ ಪ್ರತ್ಯಕ್ಷವಾಗಿತ್ತು. ಗಾಳಪೂಜೆಯಿಂದ 3 ದಿನಗಳ ನಂತರ ಗುತ್ತಲ ಕೆರೆಯ ಪಕ್ಕದಲ್ಲಿ ಅರಣ್ಯ ಪ್ರದೇಶದಲ್ಲಿ ಕಂಡು ಬಂದಿದೆ.

ಒಂದು ವಾರದಿಂದ ಪಟ್ಟಣದ ಸುತ್ತಮುತ್ತ ಇರುವ ಅರಣ್ಯ ಪ್ರದೇಶದಲ್ಲಿ ರೈತರ ಬೆಳೆಯನ್ನು ನಾಶ ಮಾಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಅರಣ್ಯ ಇಲಾಖೆಯ ಅಧಿಕಾರಿಗಳು ಒಂದು ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾಡಾನೆಯ ಹೆಜ್ಜೆಗುರುತು ಮತ್ತು ಲದ್ದಿಯಿಂದ ಆನೆ ಇರುವ ಎಲ್ಲ ಕುರುಹುಗಳನ್ನು ಪತ್ತೆ ಹಚ್ಚುತ್ತಿದ್ದಾರೆ.

ಈ ಭಾಗದ ರೈತರ ಜಮಿನುಗಳಿಗೆ ಹಾನಿ ಮಾಡುತ್ತಿರುವ ಕಾಡಾನೆಯನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಶಿವಮೊಗ್ಗ ವನ್ಯಜೀವಿ ವಿಭಾಗದ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಆನೆಗಳನ್ನು ಕಾರ್ಯಾಚರಣೆಗಾಗಿ ತರಲಾಗಿದೆ. ಸಾಗರ, ಬಾಲಣ್ಣ ಎಂಬ ಎರಡು ಗಂಡಾನೆ ಮತ್ತು ಭಾನುಮತಿ ಒಂದು ಹೆಣ್ಣಾನೆಯನ್ನು ತರಲಾಗಿದೆ.

ಜಿಲ್ಲೆಯ ವಲಯ ಅರಣ್ಯ ಅಧಿಕಾರಿಗಳಾದ ರಾಮಪ್ಪ ಪೂಜಾರ, ಶಿವರಾಜ ಮಠದ, ಮಹೇಶ ಮರಿಯಣ್ಣನವರ, ಕಿರಣ್‌ಕುಮಾರ ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸಕ್ರಿಯರಾಗಿದ್ದಾರೆ. ಸೂಕ್ತ ಭದ್ರತೆಗೆ ಪಟ್ಟಣದ ಪೊಲೀಸ್ ಠಾಣೆಯ ಪಿಎಸ್‌ಐ ಜಗದೀಶ ಜಿ. ಸೇರಿದಂತೆ 10ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜಿಸಲಾಗಿದೆ.

ಆನೆ ಪತ್ತೆಗೆ ಡ್ರೋಣ್‌ ನೆರವು

‘ಕಾಡಾನೆ ಯಾವ ಕಡೆಯಿಂದ ಬಂದಿದೆ, ಯಾವ ಸ್ಥಳದಲ್ಲಿ ವಾಸಿಸುತ್ತಿದೆ ಎಂಬುದನ್ನು ಸಿಬ್ಬಂದಿ ಡ್ರೋಣ್‌ ಕ್ಯಾಮೆರಾ ಮೂಲಕ ಪತ್ತೆ ಹಚ್ಚಿದ್ದಾರೆ. ರಾತ್ರಿ ಸಮಯದಲ್ಲಿ ಆನೆ ಆಹಾರಕ್ಕೆ ಹೊರಬರುತ್ತದೆ. ಆ ಸಮಯವನ್ನು ಆಧರಿಸಿ 2–3 ದಿನ ಕಾರ್ಯಾಚರಣೆ ನಡೆಸಿ ಆನೆಯನ್ನು ಪತ್ತೆ ಹಚ್ಚಿ ಬೇರೆ ಕಡೆಗೆ ಸ್ಥಳಾಂತರಿಸಲು ಯಶಸ್ವಿಗೊಳಿಸುತ್ತೇವೆ’ ಎಂದು ಸಕ್ರೆಬೈಲು ಆನೆ ಬಿಡಾರದ ಡಾ.ವಿನಯ ಹೇಳುತ್ತಾರೆ.

‘ಮಂಗಳವಾರ 3 ಆನೆಗಳಿಂದ ಕಾರ್ಯಾಚರಣೆ ಮಾಡಲಾಯಿತು. ಮಧ್ಯಾಹ್ನ ಬಿಸಿಲಿನ ತಾಪ ಜಾಸ್ತಿಯಾದ ಕಾರಣ ಕಾರ್ಯಾಚರಣೆಗೆ ಬಂದಿದ್ದ ಆನೆಗಳಿಗೆ ವಿರಾಮ ನೀಡಿ ಸಂಜೆ 5 ಗಂಟೆಯಿಂದ ಕಾರ್ಯಾಚರಣೆ ನಡೆಸಲಾಯಿತು. ಶೀಘ್ರದಲ್ಲಿ ಬೇರೆ ಕಡೆಗೆ ಸ್ಥಳಾಂತರಿಸಲಾಗುವುದು’ ಎಂದು ಹಾವೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಬಾಲಕೃಷ್ಣ ತಿಳಿಸಿದ್ದಾರೆ.

ಹೆಣ್ಣಾನೆಗೆ ಮನಸೋಲುವ ಸಲಗ!

‘ಈ ಭಾಗದಲ್ಲಿ ತಿರುಗುತ್ತಿರುವ ಒಂಟಿ ಸಲಗ, ಹೆಣ್ಣಾನೆಯನ್ನು ಆಕರ್ಷಿಸಲು ಬರುತ್ತದೆ. ಆ ಉದ್ದೇಶದಿಂದ ಹೆಣ್ಣಾನೆ ಭಾನುಮತಿಯನ್ನು ಕಾರ್ಯಾಚರಣೆಗೆ ಕರೆತರಲಾಗಿದೆ. ಈಗಾಗಲೇ ಹಲವಾರು ಬಾರಿ ಹೆಣ್ಣಾನೆ ನೆರವಿನಿಂದ ಒಂಟಿ ಸಲಗಗಳನ್ನು ವಿವಿಧ ಕಡೆ ಸೆರೆ ಹಿಡಿಯಲಾಗಿದೆ’ ಎಂದು ಭಾನುಮತಿಯ ಮಾವುತ ‘ಪ್ರಜಾವಾಣಿ’ಗೆ ತಿಳಿಸಿದರು.

ಸಕ್ರೆಬೈಲು ಆನೆ ಬಿಡಾರದಿಂದ 2 ಮಾವುತರು, 5 ಜನ ಕಾವಾಡಿಗರು, ಒಬ್ಬರು ಜಮಾದಾರರು, ಅರಿವಳಿಕೆ ತಜ್ಞರು, ನುರಿತ ಆನೆ ಪತ್ತೆ ಹಚ್ಚುವವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು